ಕಲಬುರಗಿ: ‘ವೈಜ್ಞಾನಿಕ ಮತ್ತು ಮಾನವೀಯ ನೆಲೆಯಲ್ಲಿ ರೂಪಿತಗೊಂಡ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಡಾ.ಅಂಬೇಡ್ಕರ್ ಅವರು ಮತ್ತೆ ಭಾರತದಲ್ಲಿ ಈ ಧರ್ಮ ನೆಲೆಯೂರಲು ಕಾರಣವಾದರು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ ಲಂಡನಕರ ಅಭಿಪ್ರಾಯಪಟ್ಟರು.
65ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಪ್ರಯುಕ್ತ ನಗರದ ನಾಗಮಾಣಿಕ್ಯ ಎಂಎಸ್‌ಡಬ್ಲ್ಯೂ ಕಾಲೇಜಿನಲ್ಲಿ ಈಚೆಗೆ ದೇವಿಂದ್ರಪ್ಪ ಜಿ.ಸಿ. ಸಂಗೀತ, ಸಾಹಿತ್ಯ, ಕಲಾ ಸಂಸ್ಥೆ ಆಯೋಜಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
‘ಬುದ್ಧನ ಪ್ರಜ್ಞೆ, ಶೀಲ, ಕರುಣೆ, ಶಾಂತಿಯ ಮೌಲ್ಯಗಳು ಪಾಲನೆಯಾಗಬೇಕು. ಅಂಬೇಡ್ಕರ್ ಅವರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ವಿಚಾರಗಳು ಆದರ್ಶವಾಗಬೇಕು. ಈ ದಿಸೆಯಲ್ಲಿ ಕವಿ– ಕಾವ್ಯ ಬೆಳಕು ಚೆಲ್ಲಲಿ’ ಎಂದರು.
ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಸದಾನಂದ ಪೆರ್ಲ ಮಾತನಾಡಿ, ‘ಜಾತಿರಹಿತ, ವರ್ಗರಹಿತ ಸಮಾಜದ ತಳಹದಿಯ ಮೇಲಯೇ ಪ್ರಬುದ್ಧ ಭಾರತ ನಿರ್ಮಿಸುವುದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು. ಸಾಂವಿಧಾನಿಕ ಆಶಯಗಳು ಅನುಷ್ಠಾನಗೊಂಡಾಗ ಮಾತ್ರ ಇದು ನನಸಾಗುತ್ತದೆ’ ಎಂದರು.
‘ಬುದ್ಧನ ಆದರ್ಶಗಳನ್ನು ಅಳವಡಿಸಿಕೊಂಡು ಬೌದ್ಧ ಧರ್ಮ ಸ್ವೀಕರಿಸಿದ ಅಂಬೇಡ್ಕರ್ ಅವರು ಸಂವಿಧಾನದಡಿ ಎಲ್ಲರಿಗೂ ಸಮಾನತೆಯ ಬದುಕು ಕಟ್ಟಿಕೊಟ್ಟಿದ್ದಾರೆ. ಇಂದು ಅಂಬೇಡ್ಕರ್ ಅವರು ಇಲ್ಲದ ಭಾರತ ಶೂನ್ಯವಾಗಿದೆ. ಸಶಕ್ತ ಸಮಾಜ ನಿರ್ಮಿಸಲು ಬುದ್ಧ, ಬಸವ, ಡಾ.ನಾರಾಯಣ ಗುರುಗಳ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದರು.
ಸಾಹಿತಿ ಧರ್ಮಣ್ಣ ಎಚ್. ಧನ್ನಿ, ನಿವೃತ್ತ ಪ್ರಾಚಾರ್ಯ ಈಶ್ವರ ಇಂಗಿನ, ಪ್ರಾಂಶುಪಾಲ ಮಹೇಶಕುಮಾರ ಮಾಡಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಚಿಮ್ಮಾಇದ್ಲಾಯಿ ಮಾತನಾಡಿದರು. ಸಿದ್ಧಲಿಂಗ
ಮಾಹೂರ ಹಾಗೂ ತಂಡದವರಿಂದ ಪ್ರಾರ್ಥನೆ ಗೀತೆ ನಡೆಯಿತು. 16 ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.
ಕವಿಗಳಾದ ವಿ.ಆರ್. ಚಾಂಬಾಳ, ರೇಣುಕಾ ಶ್ರೀಕಾಂತ, ಎಂ.ಎನ್. ಸುಗಂಧಿ, ಎಂ.ಪಿ. ಪ್ರಕಾಶ ಸರಸಂಬಿ, ಎಂ.ಬಿ. ನಿಂಗಪ್ಪ, ಶರಣರೆಡ್ಡಿ ಎಸ್. ಕೋಡ್ಲಾ, ಡಾ.ರಾಜಶೇಖರ ಮಾಂಗ, ಕವಿತಾ ರಾಠೋಡ, ಸಿದ್ದರಾಮ ಸರಸಂಬಿ, ಸಂಗಮ್ಮ ಧಮ್ಮೂರಕರ, ಕಾಶೀನಾಥ ಮುಖರ್ಜಿ, ಸಾವಿತ್ರಿ ಉದಯಕರ್, ವಿಜಯಲಕ್ಷ್ಮೀ ಗುತ್ತೇದಾರ, ಶಿವಶಂಕರ ಬಿಳಾಲಕರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.