ಕಲಬುರಗಿ: ಹಾಸ್ಟೆಲ್‌ಗಳ ಹೊರಗುತ್ತಿಗೆ ನೌಕರರ 6–7 ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ಸರ್ಕಾರ ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಾಸ್ ಪಡೆಯಬೇಕು ಮತ್ತು ಹಿಂದಿನಂತೆ ನೂರು ವಿದ್ಯಾರ್ಥಿಗಳಿಗೆ 5 ಜನರಂತೆ ಅಡುಗೆ ಸಿಬ್ಬಂದಿ ನೇಮಿಸಬೇಕು. ನೌಕರರು ಅನಾರೋಗ್ಯದಿಂದ ಬಳಲಿದಾಗ ಅಥವಾ ಅಡುಗೆ ಮಾಡುವಾಗ ಆಕಸ್ಮಿಕ ಘಟನೆ ನಡೆದರೆ ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಬೇಕು ಮತ್ತು ಆ ಸಿಬ್ಬಂದಿಗೆ ರಜೆ ಕೊಡಬೇಕು ಎಂದು ಒತ್ತಾಯಿಸಲಾಯಿತು.
ವಾರಕ್ಕೊಂದು ರಜೆ ಕಡ್ಡಾಯವಾಗಿ ಕೊಡಬೇಕು. ಕಾಯಂ ನೌಕರರ ಸ್ಥಳದಲ್ಲಿ ಮಾತ್ರ ಕಾಯಂ ನೌಕರರನ್ನು ವರ್ಗಾವಣೆ ಮಾಡಬೇಕು. ಕಳೆದ ವರ್ಷಕ್ಕಿಂತ ₹2000-₹2500 ಕಡಿಮೆ ವೇತನ ಪಾವತಿಸಿದ ನೀತಿ ಕೈಬಿಟ್ಟು ಯಥಾಸ್ಥಿತಿಯಂತೆ ವೇತನ ಪಾವತಿಸಬೇಕು. ಬೀದರ್ ಮಾದರಿಯಲ್ಲಿ ಸಹಕಾರಿ ಸಂಘದ ಮೂಲಕ ವೇತನ ಪಾವತಿಸಬೇಕು. 5 ವರ್ಷಕ್ಕೂ ಹೆಚ್ಚು ಸೇವೆಸ ಲ್ಲಿಸಿದ ಹೊರಗುತ್ತಿಗೆ ನೌಕರರಿಗೆ ಕ್ಷೇಮಾಭಿವೃದ್ಧಿ ಯೋಜನೆಯಲ್ಲಿ ನೇಮಕಾತಿ ಮಾಡಬೇಕು ಎಂಬುದು ಸೇರಿ 9 ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಸಲಾಗುತ್ತಿದೆ.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ನೇತೃತ್ವ ವಹಿಸಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಹಡಗಲಿ, ಕಾರ್ಯದರ್ಶಿ ಕಾಶಿನಾಥ ಬಂಡಿ, ಮಲ್ಲಮ್ಮ ಕೋಡ್ಲಿ, ರವಿಚಂದ್ರ ಯರಗೋಳ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.