ಕಲಬುರಗಿ: ಕಳೆದ ಬಾರಿಯ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಒತ್ತುವರಿ ತೆರವು ವಿಚಾರ ಗುರುವಾರ ನಡೆದ ಸಭೆಯಲ್ಲಿಯೂ ಪ್ರತಿಧ್ವನಿಸಿ ವಾದ–ವಿವಾದಕ್ಕೆ ಎಡೆ ಮಾಡಿಕೊಟ್ಟಿತು.
ಸಭೆ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಸಚಿನ್ ಹೊನ್ನಾ, ಮಾಜಿ ಮೇಯರ್ ವಿಶಾಲ ದರ್ಗಿ ಹಾಗೂ ಇತರ ವಿರೋಧ ಪಕ್ಷದ ಸದಸ್ಯರು ಒತ್ತುವರಿ ತೆರವು ಮಾಡುವಲ್ಲಿ ಅಧಿಕಾರಿಗಳು ಪಕ್ಷಪಾತ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಬಿಜೆಪಿಯ ಮಹಿಳಾ ಸದಸ್ಯರೊಬ್ಬರು ಎದ್ದು ನಿಂತು ಖರ್ಗೆ ಪೆಟ್ರೋಲ್ ಪಂಪ್‌ನಿಂದ ಮುಂದಕ್ಕೆ ಏಕಾಏಕಿ ಒತ್ತುವರಿ ತೆರವು ಸ್ಥಗಿತಗೊಂಡಿದ್ದು ಏಕೆ ಎಂದು ಪ್ರಶ್ನಿಸಿದರು.
ಸಚಿನ್ ಹೊನ್ನಾ ಮಾತನಾಡಿ, ‘ಸಾಯಿಮಂದಿರ ಬಳಿಯ ನೇತಾಜಿ ಕಾಲೊನಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಆಸರೆಯಾದ ಪ್ರಮುಖ ರಸ್ತೆ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುತ್ತಿಲ್ಲವೇಕೆ? ಇದನ್ನು ಪ್ರಶ್ನಿಸಿ ಬಡಾವಣೆ ನಿವಾಸಿಗಳು ಇತ್ತೀಚೆಗೆ ಉಪಲೋಕಾಯುಕ್ತರಿಗೆ ದೂರನ್ನೂ ನೀಡಿದ್ದಾರೆ’ ಎಂದರು.
ವೀರೇಂದ್ರ ಪಾಟೀಲ ಬಡಾವಣೆಯ ಮೈದಾನದಲ್ಲಿ ದೊಡ್ಡ ಫುಟ್‌ಬಾಲ್ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯೆಯೊಬ್ಬರು ಗಮನಕ್ಕೆ ತಂದರು.
ಇದಕ್ಕೆ ಸಮಜಾಯಿಷಿ ನೀಡಿದ ಪಾಲಿಕೆಯ ವಲಯ–1ರ ವಲಯಾಧಿಕಾರಿ ರಮೇಶ ಪಟ್ಟೇದಾರ, ‘ಫುಟ್‌ಬಾಲ್ ಕ್ರೀಡಾಂಗಣವನ್ನು ಪಾಲಿಕೆಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದ್ದು, ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ಕ್ರೀಡಾ ಇಲಾಖೆ ನಿರ್ಮಿಸಿದೆ. ಇದಕ್ಕಾಗಿ ₹ 50 ಲಕ್ಷ ವೆಚ್ಚವಾಗಿದ್ದು, ಕೆಲ ಟೂರ್ನಿಗಳೂ ಇದರಲ್ಲಿ ನಡೆದಿವೆ’ ಎಂದರು.
ಮೇಯರ್ ಯಲ್ಲಪ್ಪ ನಾಯಕೊಡಿ ಪ್ರತಿಕ್ರಿಯಿಸಿ, ‘ನ್ಯೂ ಜೇವರ್ಗಿ ರಸ್ತೆಯ ಚಿತ್ತಾರಿ ಅಡ್ಡೆ ಬಳಿ ಒತ್ತುವರಿ ತೆರವುಗೊಳಿಸಿದ್ದು, ಅಲ್ಲಿ ಮುರುಂ ಹಾಕಲಾಗುತ್ತಿದೆ. ಇದಕ್ಕಾಗಿ ₹ 20 ಲಕ್ಷ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಲಿದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಸೈಯದ್ ಅಹ್ಮದ್, ‘ಅಧಿಕಾರಿಗಳು ರಸ್ತೆ ಪಕ್ಕದ ಸಣ್ಣ, ಪುಟ್ಟ ತರಕಾರಿ, ಹಣ್ಣಿನ ಅಂಗಡಿಯವರನ್ನು ತೆರವುಗೊಳಿಸಿ ಏನೋ ದೊಡ್ಡ ಸಾಧನೆ ಮಾಡಿದೆ ಎಂದು ಬೀಗುತ್ತಿದ್ದಾರೆ. ಆದರೆ, ನಿಜವಾಗಿಯೂ ದೊಡ್ಡ ದೊಡ್ಡ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತಿಲ್ಲ. ನ್ಯಾಷನಲ್ ಚೌಕ್, ರೋಜಾ ಪೊಲೀಸ್ ಠಾಣೆ ಬಳಿ ಖಾಸಗಿಯವರಿಂದ ಭೂಸ್ವಾಧೀನ ಮಾಡಿಕೊಂಡರೂ ಅವರಿಗೆ ಪರಿಹಾರ ನೀಡಿಲ್ಲ’ ಎಂದು ದೂರಿದರು.
ಪಬ್ಲಿಕ್ ಗಾರ್ಡನ್ ಬಳಿ ಇರುವ ಬಾಲಭವನದಲ್ಲಿ ಹೈಟೆಕ್ ಮಕ್ಕಳ ಗ್ರಂಥಾಲಯ ನಿರ್ಮಿಸುವ ಪ್ರಸ್ತಾವ ಸಭೆಯಲ್ಲಿ ಚರ್ಚೆಗೆ ಬಂತು. ಸಭೆಯಲ್ಲಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಗೀತಾ ಮಾತನಾಡಿ, ‘ಬಾಲಭವನಕ್ಕೆ ಲೀಸ್ ಆಧಾರದಲ್ಲಿ ಪಡೆದಿದ್ದ ಜಾಗದ ಅವಧಿ ಮುಕ್ತಾಯವಾಗಿದ್ದು, ಮತ್ತೆ ವಿಸ್ತರಿಸುವಂತೆ ಪಾಲಿಕೆ ಕಂದಾಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದರು.
ಸದಸ್ಯ ಸೈಯದ್ ಅಹ್ಮದ್ ಮಾತನಾಡಿ, ‘ಬಾಲಭವನದಿಂದ ಯಾವುದೇ ಚಟುವಟಿಕೆಗಳು ನಡೆದಿರುವುದು ಬಹುತೇಕ ಸದಸ್ಯರಿಗೆ ಮಾಹಿತಿ ಇಲ್ಲ. ಹೀಗಾಗಿ, ಬಾಲಭವನಕ್ಕೆ ಲೀಸ್ ವಿಸ್ತರಣೆ ಮಾಡುವ ಬಗ್ಗೆ ಪರಿಶೀಲಿಸಬೇಕು. ಬೇರೆ ಕಡೆ ಲಭ್ಯವಿದ್ದರೂ ಅಲ್ಲಿ ಕೊಡಬಹುದು’ ಎಂದು ಹೇಳಿದರು.
‘ಲೀಸ್ ವಿಸ್ತರಣೆ ಕೋರಿ ಪತ್ರ ಬರೆದು ಎರಡು ತಿಂಗಳಾದರೂ ಅದನ್ನು ಗಮನಿಸಿಲ್ಲವೇಕೆ’ ಎಂದು ಮೇಯರ್ ಯಲ್ಲಪ್ಪ ನಾಯಕೊಡಿ, ಸದಸ್ಯ ಸಯ್ಯದ್ ಅಹ್ಮದ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಕಂದಾಯ ಅಧಿಕಾರಿ ಸಾವಿತ್ರಿ ಸಲಗರ, ‘ಪತ್ರ ಬಂದಿರುವುದು ಗಮನಕ್ಕೆ ಬಂದಿಲ್ಲ’ ಎಂದರು.
ಜಗತ್ ವೃತ್ತದ ಬಳಿ ಇರುವ ಪಾಲಿಕೆ ಆಯುಕ್ತರ ನಿವಾಸವನ್ನು ಬೇರೆಡೆ ಸ್ಥಳಾಂತರಿಸಿ ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಮೂಲಕ ಪಾಲಿಕೆಯ ವರಮಾನ ಹೆಚ್ಚಿಸುವ ಪ್ರಸ್ತಾವ ಸಭೆಯಲ್ಲಿ ಚರ್ಚೆಗೆ ಬಂತು.
10,706 ಚದರ ಅಡಿ ಜಾಗ ಸಿಗಲಿದ್ದು, ಅಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲು ₹ 5.5 ಕೋಟಿ ಖರ್ಚು ಬೇಕಾಗಬಹುದು ಎಂದು ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ್ ತಿಳಿಸಿದರು.
ಆಯಕಟ್ಟಿನ ಪಾಲಿಕೆಯ ಜಾಗವನ್ನು ವರಮಾನ ಹೆಚ್ಚಿಸಲು ಬಳಕೆ ಮಾಡಬಹುದಾದರೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಬೇಕಾಗುವ ಅಷ್ಟೊಂದು ಹಣವನ್ನು ಎಲ್ಲಿಂದ ತರುತ್ತೀರಿ? ಪೌರಕಾರ್ಮಿಕರ ವೇತನ ಕೊಡಲೂ ನಿಮ್ಮ ಬಳಿ ಹಣ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಚಿನ್ ಹೊನ್ನಾ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಯಲ್ಲಪ್ಪ ನಾಯಕೊಡಿ, ‘ಏನಾದರೂ ಮಾಡಿ ದುಡ್ಡು ಹೊಂದಿಸೋಣ’ ಎಂದರು.
ಸ್ಥಾಯಿ ಸಮಿತಿ ಸದಸ್ಯರಾದ ಸಚಿನ್ ಶಿರವಾಳ, ಪರ್ವೀನ್ ಬೇಗಂ, ಮೊಹಮ್ಮದ್ ಅಜೀಮುದ್ದೀನ್, ಇರ್ಫಾನಾ ಪರ್ವೀನ್, ಪಾಲಿಕೆಯ ಉಪ ಆಯುಕ್ತ (ಆಡಳಿತ) ಶಿಂಧೆ ಅವಿನಾಶ್ ಸಂಜೀವನ್, ಪಾಲಿಕೆಯ ನಗರ ಯೋಜನಾ ಶಾಖೆಯ ಜಂಟಿ ನಿರ್ದೇಶಕ ಶೇಷು, ಎಇಇಗಳಾದ ಮೊಹಮ್ಮದ್ ಆರಿಫ್, ಪುರುಷೋತ್ತಮ್, ವಲಯ ಆಯುಕ್ತರಾದ ರಮೇಶ ಪಟ್ಟೇದಾರ, ಉಮೇಶ ಚವ್ಹಾಣ್, ಮುಜಾಮಿಲ್ ಆಲಂ, ಪರಿಷತ್ ಕಾರ್ಯದರ್ಶಿ ಪ್ರಹ್ಲಾದ ಕುಲಕರ್ಣಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.