ADVERTISEMENT

ಕಲಬುರಗಿ | ಪತ್ರಕರ್ತರು, ವೈದ್ಯರಿಗಿದು ಸವಾಲಿನ ಸಮಯ: ಚೇತನ್‌ ಆರ್‌.

ವೈದ್ಯರ– ಪತ್ರಿಕಾ ದಿನಾಚರಣೆ ಕಾರ್ಯಕ್ರಮ: ನಗರ ಪೊಲೀಸ್‌ ಕಮಿಷನರ್‌ ಚೇತನ್‌ ಆರ್‌. ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:04 IST
Last Updated 2 ಜುಲೈ 2024, 5:04 IST
ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಕಮಿನಷರ್‌ ಚೇತನ್ ಆರ್. ಮಾತನಾಡಿದರು. ಆಸ್ಪತ್ರೆ ನಿರ್ದೇಶಕಿ ಡಾ. ವೀಣಾ ಸಿದ್ದಾರೆಡ್ಡಿ, ಎಎಸ್ಪಿ ಶ್ರೀನಿಧಿ, ಆಸ್ಪತ್ರೆಯ ಮುಖ್ಯಸ್ಥ ಡಾ. ವಿಕ್ರಂ ಸಿದ್ದಾರೆಡ್ಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು
ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಕಮಿನಷರ್‌ ಚೇತನ್ ಆರ್. ಮಾತನಾಡಿದರು. ಆಸ್ಪತ್ರೆ ನಿರ್ದೇಶಕಿ ಡಾ. ವೀಣಾ ಸಿದ್ದಾರೆಡ್ಡಿ, ಎಎಸ್ಪಿ ಶ್ರೀನಿಧಿ, ಆಸ್ಪತ್ರೆಯ ಮುಖ್ಯಸ್ಥ ಡಾ. ವಿಕ್ರಂ ಸಿದ್ದಾರೆಡ್ಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು   

ಕಲಬುರಗಿ: ‘ಇಂಟರ್‌ನೆಟ್‌, ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಿರುವ ಈ ದಿನಗಳಲ್ಲಿ ಪತ್ರಕರ್ತರು ಹಾಗೂ ವೈದ್ಯರು ತಮ್ಮ ವೃತ್ತಿಗಳಲ್ಲಿ ಹೆಚ್ಚು ಸವಾಲು ಎದುರಿಸುತ್ತಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಚೇತನ್‌ ಆರ್‌. ಹೇಳಿದರು.

ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ವೈದ್ಯರ‌ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ‌ ಅವರು ಮಾತನಾಡಿದರು.

‘ಪತ್ರಕರ್ತರು ಎರಡು ಬಗೆಯ ಸವಾಲು ಎದುರಿಸುತ್ತಿದ್ದಾರೆ. ಇಂಟರ್‌ನೆಟ್‌, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಸತ್ಯವಾದ ಸುದ್ದಿ ಹೆಕ್ಕಿ ಜನರಿಗೆ ತಲುಪಿಸುವುದು ಒಂದು ಸವಾಲು’ ಎಂದರು.

ADVERTISEMENT

ಬರೀ ವೈದ್ಯರಲ್ಲ, ದೇವರು: ‘ಇಂಟರ್‌ನೆಟ್‌ ಫಲವಾಗಿ ವೈದ್ಯರ ಕೆಲಸವೂ ಇಂದು ಸವಾಲಿನಿಂದ ಕೂಡಿದೆ. ವೈದ್ಯರು ಬರೆಯುವ ಪ್ರಿಸ್ಕ್ರಿಪ್ಷನ್‌ ಅನ್ನು ಈಗ ಇಂಟರ್‌ನೆಟ್‌ನಲ್ಲಿ ಪರಿಶೀಲಿಸಲಾಗುತ್ತಿದೆ. ಕೆಲವು ವೇಳೆ, ವ್ಯಕ್ತಿಗಳು ತಮ್ಮ ರೋಗಗಳಿಗೆ ಇಂಟರ್‌ನೆಟ್‌ನಲ್ಲಿ ಸಿಗುವ ಸಲಹೆ ಅನುಸರಿಸಿ, ಸ್ವಯಂ ಚಿಕಿತ್ಸೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನೆಲ್ಲಾ ನಿಭಾಯಿಸುವ ಹೆಚ್ಚುವರಿ ಹೊರೆ ಈಗಿನ ಡಿಜಿಟಲ್ ಯುಗದಲ್ಲಿ ವೈದ್ಯರ ಹೆಗಲೇರಿದೆ’ ಎಂದರು.

ಯುನೈಟೆಡ್‌ ಆಸ್ಪತ್ರೆಯ ಮುಖ್ಯಸ್ಥರೂ ಆಗಿರುವ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಂ ಸಿದ್ದಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿಧಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿದರು.

ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದಿಂದ ಯುನೈಟೆಡ್‌ ಆಸ್ಪತ್ರೆಯ ಡಾ. ವಿಕ್ರಂ ಸಿದ್ದಾರೆಡ್ಡಿ ಸೇರಿದಂತೆ ಹಲವು ವೈದ್ಯರನ್ನು ಗೌರವಿಸಲಾಯಿತು.

ಯುನೈಟೆಡ್‌ ಆಸ್ಪತ್ರೆಯ ನಿರ್ದೇಶಕಿ ಡಾ.ವೀಣಾ‌ ಸಿದ್ದಾರೆಡ್ಡಿ, ಡಾ. ರಾಜು ಕುಲಕರ್ಣಿ, ಡಾ. ಮೊಹಮ್ಮದ್ ಅಬ್ದುಲ್ ಬಷೀರ್, ಡಾ. ಸುದರ್ಶನ ಲಾಖೆ ಉಪಸ್ಥಿತರಿದ್ದರು. ಪತ್ರಕರ್ತರ ಹಾಗೂ ಅವರ ಕುಟುಂಬಗಳ ನೂರಾರು ಮಂದಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದರು.

ಡಾ.ವಿಕ್ರಂ ಸಿದ್ದಾರೆಡ್ಡಿ ಸಾತ್ವಿಕ ಸರಳ ವ್ಯಕ್ತಿತ್ವವುಳ್ಳವರು. ಅವರ‌ ತಂದೆಯೂ ಬಡವರ ಡಾಕ್ಟರ್‌ ಎಂದು ಹೆಸರಾಗಿದ್ದರು. ವಿಕ್ರಂ ಸಮಾಜಮುಖಿ ಸಮಾಜಕ್ಕಾಗಿ ಬದ್ಧತೆ ಪ್ರದರ್ಶಿಸುತ್ತಿದ್ದಾರೆ

-ಬಾಬುರಾವ ಯಡ್ರಾಮಿ ಅಧ್ಯಕ್ಷ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ

ಪತ್ರಕರ್ತರ ಆರೋಗ್ಯ ಸೇವೆಗೆ ಅವಕಾಶ ಕೋರಿದ್ದೆ. ಅದಕ್ಕೆ ಒಪ್ಪಿಕೊಂಡ ಪತ್ರಕರ್ತರ ಸಂಘಕ್ಕೆ ಧನ್ಯವಾದಗಳು. ಟ್ರಾಮಾ ಸಂಬಂಧಿತ ಮುನ್ನೆಚ್ಚರಿಕಾ ಕ್ರಮಗಳ ಜಾಗೃತಿಗೆ ನೆರವಾಗಿದ್ದ ಪೊಲೀಸ್‌ ಇಲಾಖೆಗೂ ಋಣಿ

-ಡಾ. ವಿಕ್ರಂ ಸಿದ್ದಾರೆಡ್ಡಿ ಮುಖ್ಯಸ್ಥ ಯುನೈಟೆಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.