ADVERTISEMENT

ದೈಹಿಕ ಕಿರುಕುಳ; ಪತಿ ಸೇರಿ ಮೂವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 15:54 IST
Last Updated 28 ಜುಲೈ 2022, 15:54 IST

ಕಲಬುರಗಿ: ಪತಿ ಹಾಗೂ ಅತ್ತೆ, ಮಾವ ತಮಗೆ ದೈಹಿಕ, ಮಾನಸಿಕ ಕಿರುಕುಳ ನೀಡಿದ ಕುರಿತು ನ್ಯೂ ರಾಘವೇಂದ್ರ ನಗರ ನಿವಾಸಿ ಗಾಯತ್ರಿ ಶಿಲ್ಪಿ ಅವರು ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆ ಪೊಲೀಸರು ಗಾಯತ್ರಿ ಪತಿ ಅಶ್ವಿನ್‌ಕುಮಾರ್ ಪೋದ್ದಾರ, ಅವರ ತಂದೆ ಮಾಣಿಕರಾವ್, ತಾಯಿ ಶಾಂತಾಬಾಯಿ ವಿರುದ್ಧ ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

2007ರ ನವೆಂಬರ್ 18ರಂದು ಅಶ್ವಿನ್‌ಕುಮಾರ್ ಅವರೊಂದಿಗೆ ಮದುವೆಯಾಗಿತ್ತು. ಕೆಲ ದಿನಗಳ ಬಳಿಕ ಬೆಂಗಳೂರಿಗೆ ತೆರಳಿ ಅಲ್ಲಿ ವಾಸವಾಗಿದ್ದಾಗ ಪತಿ ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ, ತವರು ಮನೆಯಿಂದ ವರದಕ್ಷಿಣೆ ತರುವಂತೆ ಒತ್ತಡ ಹೇರಿದ್ದರು. ಆಗ ಕಲಬುರಗಿಗೆ ಮರಳಿ ತವರು ಮನೆಯಲ್ಲಿ ಇದ್ದೆ. ಮತ್ತೆ ಹಿರಿಯರೊಂದಿಗೆ ಪಂಚಾಯಿತಿ ಮಾಡಿ ಬೆಂಗಳೂರಿಗೆ ಕರೆದುಕೊಂಡು ಹೋದರು. 2020ರ ನವೆಂಬರ್ 20ರಂದು ಬೆಂಗಳೂರಿನಲ್ಲಿ ನನ್ನ ಹೆರಿಗೆಯನ್ನು ತಂದೆ ತಾಯಿ ಮಾಡಿಸಿದರು. ಅದಾದ ಒಂದು ತಿಂಗಳಿಗೆ ಪತಿ ಅಶ್ವಿನ್‌ಕುಮಾರ್ ನನ್ನ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಲು ಬಂದಿದ್ದರು. ಆದ್ದರಿಂದ ವಾಪಸ್ ಕಲಬುರಗಿಗೆ ಬಂದೆ. ಕೆಲ ದಿನಗಳ ಬಳಿಕ ಪತಿ ಕಲಬುರಗಿಗೆ ಬಂದಿರುವ ಮಾಹಿತಿ ಪಡೆದು ಭೇಟಿ ಮಾಡಲು ಮನೆಗೆ ಹೋದಾಗ ಗಂಡ, ಅತ್ತೆ, ಮಾವ ಇಲ್ಲಿಗೇಕೆ ಬಂದಿದ್ದಿ ಎಂದು ಜಗಳ ತೆಗೆದು ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ನನ್ನ ತೇಜೋವಧೆ ಮಾಡುವ ಸಲುವಾಗಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ನನ್ನ ಏಳಿಗೆಯನ್ನು ಸಹಿಸದೇ ಅಪಪ್ರಚಾರ ಮಾಡಿದ್ದಾರೆ ಎಂದು ಗಾಯತ್ರಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT