ADVERTISEMENT

ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸರ್ವೆ ಆರಂಭಿಸಿ: ಕಲಬುರಗಿ ಜಿಲ್ಲಾಧಿಕಾರಿ

ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:39 IST
Last Updated 2 ಜುಲೈ 2024, 15:39 IST
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು   

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಸತಿ ನಿಲಯ ಹಳೆಯದಾಗಿದ್ದು, ಇದನ್ನು ಕೆಡವಿ ಇಲ್ಲಿಯೇ ತಲಾ 50 ಬಾಲಕ-ಬಾಲಕಿಯರ ಪ್ರತ್ಯೇಕ ವಾಸಕ್ಕೆ ಅನುಕೂಲವಾಗುವಂತೆ ಸುಸಜ್ಜಿತ ವಸತಿ ನಿಲಯ ನಿರ್ಮಿಸಬೇಕಿದೆ. ನಿವೇಶನದ ಸರ್ವೆ ಕಾರ್ಯ ಆರಂಭಿಸುವಂತೆ ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಸೌರಭ್ ಅವರಿಗೆ ಸೂಚಿಸಿದರು.

ವಸತಿ ನಿಲಯದಲ್ಲಿ ಅಡುಗೆ ಕೋಣೆ, ಊಟದ ಕೋಣೆ, ವಾಸಸ್ಥಾನ, ಕ್ರೀಡಾ ಸಾಮಗ್ರಿ ಇಟ್ಟುಕೊಳ್ಳಲು ಪ್ರತ್ಯೇಕ ಸ್ಥಳ, ಶೌಚಾಲಯ ಹೀಗೆ ಸಕಲ ಸೌಕರ್ಯ ಒಳಗೊಂಡ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ನಂತರ ಐವಾನ್-ಎ-ಶಾಹಿ ಅತಿಥಿಗೃಹಕ್ಕೆ ಭೇಟಿ ನೀಡಿ ನೂತನ ಅತಿಥಿಗೃಹಗಳ ಕಟ್ಟಡ ದುರಸ್ತಿ, ಅನೆಕ್ಸ್ ಕಟ್ಟಡದಲ್ಲಿ ಎರಡನೇ ಮಹಡಿ ನಿರ್ಮಾಣ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ರಂಗಮಂದಿರ ದುರಸ್ತಿಗೆ ಪಟ್ಟಿ ಕೊಡಿ: ನಂತರ ಡಾ. ಎಸ್.ಎಂ.ಪಂಡಿತ್ ರಂಗಮಂದಿರಕ್ಕೆ ಡಿಸಿ ಅವರು ಭೇಟಿ ನೀಡಿ ಕಟ್ಟಡ ವೀಕ್ಷಿಸಿದರು.

ರಂಗಾಯಣದ ಮಾಜಿ ನಿರ್ದೇಶಕ ಪ್ರೊ. ಆರ್.ಕೆ.ಹುಡಗಿ, ರವೀಂದ್ರ ಶಾಬಾದಿ ಅವರು ಮಾಹಿತಿ ನೀಡಿ, ರಂಗಮಂದಿರದಲ್ಲಿ ಪ್ರತಿನಿತ್ಯ ಸರ್ಕಾರಿ-ಖಾಸಗಿ ಕಾರ್ಯಕ್ರಮ ನಡೆಯುತ್ತವೆ. ಸೌಂಡ್ ಸಿಸ್ಟಮ್ ವ್ಯವಸ್ಥೆ ಇಲ್ಲದ ಕಾರಣ ಹೊರಗಿನಿಂದ ಬಾಡಿಗೆಗೆ ತರಬೇಕಾಗಿದೆ. ಕಿಟಕಿ ಗಾಜು ಒಡೆದಿವೆ ಎಂಬಿತ್ಯಾದಿ ವಿಷಯಗಳನ್ನು ಡಿಸಿ ಗಮನಕ್ಕೆ ತಂದರು.

ಫ.ಗು. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ದತ್ತಪ್ಪ ಸಾಗನೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.