ADVERTISEMENT

ಸಿಎಂ ನೇತೃತ್ವದಲ್ಲಿ ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನೆ ಜೂನ್ 14ಕ್ಕೆ: ಅಜಯ್ ಸಿಂಗ್

₹5,000 ಕೋಟಿ ಅನುದಾನ, ಖಾಲಿ ಹುದ್ದೆಗಳ ಭರ್ತಿಗೆ ಮನವಿ: ಡಾ.ಅಜಯ್‌ಸಿಂಗ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 14:44 IST
Last Updated 12 ಜೂನ್ 2024, 14:44 IST
ಡಾ.ಅಜಯ್‌ಸಿಂಗ್‌
ಡಾ.ಅಜಯ್‌ಸಿಂಗ್‌   

ಕಲಬುರಗಿ: ‘ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಜೂನ್ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ತಿಳಿಸಿದರು.

‘ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಚಿವರು, ಶಾಸಕರು, ಕೆಕೆಆರ್‌ಡಿಬಿ ಹಾಗೂ ಯೋಜನಾ ಇಲಾಖೆಯ ಕಾರ್ಯದರ್ಶಿಗಳು ಪಾಲ್ಗೊಳ್ಳುವರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿಯ ಕಾರ್ಯಗಳ ಕುರಿತು ಚರ್ಚಿಸಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಐದೂ ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮ ಭಾಗದ ಅಭಿವೃದ್ಧಿಗೆ ಮುಖ್ಯಮಂತ್ರಿಯವರು ಬದ್ಧರಾಗಿದ್ದಾರೆ. ಕೆಕೆಆರ್‌ಡಿಬಿಗೆ ₹ 5,000 ಕೋಟಿ ಅನುದಾನ ನೀಡಲೇಬೇಕು ಹಾಗೂ ಖಾಲಿ ಇರುವ ನಮ್ಮ ಭಾಗದ ಎಲ್ಲ ಹುದ್ದೆಗಳ ಭರ್ತಿಗೆ ಮುಂದಾಗಬೇಕು ಎಂಬ ಪ್ರಸ್ತಾವವನ್ನು ಸಿಎಂ ಮುಂದೆ ಇರಿಸುತ್ತೇವೆ’ ಎಂದರು.

ADVERTISEMENT

‘ಘೋಷಣೆಯಾದ ₹5,000 ಕೋಟಿ ಅನುದಾನದ ಪೈಕಿ ₹3,000 ಕೋಟಿ ಹಂಚಿಕೆಯಾಗಿದೆ. ರಸ್ತೆ, ಚರಂಡಿ ನಿರ್ಮಾಣ, ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಸೇರಿದಂತೆ ಇತರೆ ಯೋಜನೆಗಳಿಗೆ ₹2,009 ಕೋಟಿ ಖರ್ಚು ಮಾಡಲಾಗಿದೆ. ಆಗಸ್ಟ್ ತಿಂಗಳವರೆಗೆ ಉಳಿದ ಅನುದಾನವನ್ನು ಖರ್ಚು ಮಾಡುತ್ತೇವೆ’ ಎಂದು ಹೇಳಿದರು.

‘ನಮ್ಮ ಭಾಗದಲ್ಲಿ ಕಾಯಂ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿಯವರನ್ನು ಒತ್ತಾಯ ಮಾಡಲಾಗುವುದು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅನುಭವಿ ಶಿಕ್ಷಣ ತಜ್ಞರ ಸಮಿತಿ ರಚಿಸಿ, ಅವರ ಸಲಹೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೆಕೆಆರ್‌ಡಿಬಿಯಿಂದ ಅಕ್ಷರ ಆವಿಷ್ಕಾರಕ್ಕೆ ಮೀಸಲಿಟ್ಟ ₹652 ಕೋಟಿ ಅನುದಾನದಲ್ಲಿ ಫಲಿತಾಂಶ‌ ಸುಧಾರಣೆಗಾಗಿ ₹3 ಕೋಟಿ ಖರ್ಚು ಮಾಡಲಾಗಿದೆ. ಮುಂದಿನ‌ ದಿನಗಳಲ್ಲಿ ಈ ಮೊತ್ತವನ್ನು ಹೆಚ್ಚಿಸಲಾಗುವುದು’ ಎಂದು ಅವರು ತಿಳಿಸಿದರು.

ನೀಟ್ ಪರೀಕ್ಷೆ ಫಲಿತಾಂಶದ ಗೊಂದಲಕ್ಕೆ ಪ್ರತಿಕ್ರಿಯಿಸಿದ ಡಾ. ಅಜಯ್ ಸಿಂಗ್, ‘ಚುನಾವಣಾ ಫಲಿತಾಂಶ ದಿನವೇ ನೀಟ್ ಫಲಿತಾಂಶ ಘೋಷಿಸಿದ್ದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅವ್ಯವಹಾರದ ಮಾತುಗಳೂ ಕೇಳಿ ಬರುತ್ತಿವೆ. ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟ ಆಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ‌ ಕೈಗೊಳ್ಳಬೇಕು. ತಮಿಳುನಾಡು ಮಾದರಿಯಲ್ಲಿ ರಾಜ್ಯ ಮಟ್ಟದಲ್ಲಿ ನೀಟ್ ಪರೀಕ್ಷೆ ನಡೆಸುವ ಬಗ್ಗೆ ಮುಖ್ಯಮಂತ್ರಿಯವರು ಪರಿಶೀಲಿಸುವರು’ ಎಂದರು.

ಜೂನ್ 28ಕ್ಕೆ ಕೆಕೆಆರ್‌ಡಿಬಿ ಸಭೆ ನಡೆಸಲು ನಿರ್ಧರಿಸಲಾಗಿದ್ದು 15 ದಿನದೊಳಗೆ ಪ್ರದೇಶದ ಶಾಸಕರಿಂದ ಕ್ರಿಯಾ ಯೋಜನೆ ಪಡೆದು ಪ್ರಸಕ್ತ ಸಾಲಿನ ಕೆಲಸಗಳನ್ನು ಆರಂಭಿಸಲಾಗುವುದು

- ಡಾ.ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ

‘ಮತಗಟ್ಟೆ ಸಮೀಕ್ಷೆ ನಿಷೇಧಿಸಬೇಕು’ ‘ಚುನಾವಣೋತ್ತರ ಸಮೀಕ್ಷೆ ಆಧರಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಲಕ್ಷಾಂತರ ಜನರು ₹30 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳನ್ನು ನಿಷೇಧಿಸಬೇಕು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು. ‘ಸಮೀಕ್ಷೆಯನ್ನು ನಂಬಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಅಮಿತ್ ಶಾ ಅವರು ಬಂದು ಹಣ ಕೊಡುವುದಿಲ್ಲ. ಪ್ರತಿಷ್ಠಿತ ಹೂಡಿಕೆದಾರರು ಇದರ ಲಾಭ ಪಡೆದುಕೊಂಡಿದ್ದಾರೆ. ಚುನಾವಣೆ ನಡೆದ ಬಳಿಕ ಎರಡ್ಮೂರು ದಿನಗಳಲ್ಲಿ ಫಲಿತಾಂಶ ಹೊರ ಬರುತ್ತದೆ. ಸಮೀಕ್ಷೆಗಳಿಂದ ಜನರಿಗೆ ಯಾವುದೇ ಪ್ರಯೋಜನೆ ಇಲ್ಲ’ ಎಂದರು. ‘ಭಾರತ್ ಜೋಡೊ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಬಲ ತಂದುಕೊಟ್ಟಿದ್ದಾರೆ. ಜನಪರವಾದ ಪ್ರಣಾಳಿಕೆಯನ್ನೂ ಕೊಟ್ಟಿದ್ದಾರೆ. ಹೀಗಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದು ಕೋರಿದರು. ‘ರಾಜ್ಯ ಸಚಿವ ಸಂಪುಟ ವಿಸ್ತರಣೆಗೊಂಡು ನನಗೆ ಸಚಿವ ಸ್ಥಾನ ನೀಡಲು ಪಕ್ಷದ ವರಿಷ್ಠರು ನಿರ್ಧರಿಸಿದರೆ ಅದಕ್ಕೆ ನಾನು ಬದ್ಧವಾಗಿರುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.