ಕಲಬುರಗಿ: ವಿವಿಧ ಮಾನದಂಡಗಳಲ್ಲಿ ಬಹಳಷ್ಟು ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವ್ಯಾಪ್ತಿಯ 41 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ತಾಯಿ, ಮಗುವಿನ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಮಂಡಳಿಯ ನೂತನ ಅಧ್ಯಕ್ಷ, ಶಾಸಕ ಡಾ. ಅಜಯ್ ಸಿಂಗ್ ಭರವಸೆ ನೀಡಿದರು.
ಇಲ್ಲಿನ ಮಂಡಳಿ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿಕ್ಷಣ, ಸಾಕ್ಷರತೆ, ಸ್ವಚ್ಛತೆ, ಅಪೌಷ್ಟಿಕತೆ ವಿಚಾರದಲ್ಲಿ ಈ ಭಾಗವು ರಾಜ್ಯದ ಸರಾಸರಿಗಿಂತ ಹಿಂದೆ ಇದೆ. ರಾಜ್ಯದಲ್ಲಿ ಹಿಂದುಳಿದ 114 ತಾಲ್ಲೂಕುಗಳಿವೆ. ಅತಿ ಹಿಂದುಳಿದ 39 ತಾಲ್ಲೂಕುಗಳ ಪೈಕಿ 21 ತಾಲ್ಲೂಕುಗಳು ಕಲ್ಯಾಣ ಕರ್ನಾಟಕದಲ್ಲಿಯೇ ಇವೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ 18ರಷ್ಟು (1.12 ಕೋಟಿ) ಜನಸಂಖ್ಯೆ ಕಲ್ಯಾಣ ಕರ್ನಾಟಕದಲ್ಲಿ ವಾಸಿಸುತ್ತಿದೆ. ಹೀಗಾಗಿ, ಅಭಿವೃದ್ಧಿ ವಿಚಾರದಲ್ಲಿ ವಿಶೇಷ ಗಮನ ಹರಿಸಲು ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಬಾರಿ ₹ 5 ಸಾವಿರ ಕೋಟಿ ಅನುದಾನವನ್ನು ನೀಡಲು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಲಾಗಿತ್ತು. ಅದರಂತೆ ಹಣವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದ್ಧರಾಗಿದ್ದಾರೆ. ಪ್ರತಿ ಬಾರಿ ಮಂಡಳಿಗೆ ನೀಡಿದಷ್ಟು ಅನುದಾನ ಬಳಕೆಯಾಗುತ್ತಿರಲಿಲ್ಲ. ಇದಕ್ಕೆ ಕಾರಣ ಶಾಸಕರು ಕ್ರಿಯಾ ಯೋಜನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿಕೊಡುವುದು ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಆರ್ಥಿಕ ವರ್ಷ ಮುಗಿಯುವ ಆರು ತಿಂಗಳ ಮೊದಲೇ ಕ್ರಿಯಾ ಯೋಜನೆಯನ್ನು ತರಿಸಿಕೊಂಡು ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗುವುದು’ ಎಂದರು.
‘ಕಲ್ಯಾಣ ಕರ್ನಾಟಕದ ವ್ಯಾಪ್ತಿಯಲ್ಲಿ ತಲಾ ₹ 21 ಕೋಟಿ ವೆಚ್ಚದಲ್ಲಿ ತಾಯಿ, ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಇದಕ್ಕಾಗಿ ₹ 860 ಕೋಟಿ ಬೇಕಾಗಲಿದೆ. ಇದರಿಂದ ತಾಯಿ, ಮಗುವಿನ ಮರಣ ಪ್ರಮಾಣ ತಗ್ಗಲಿದೆ. ಹೋಬಳಿ ಮಟ್ಟದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗುವುದು. ಇದಕ್ಕೆ ಮಂಡಳಿಯೇ ಅನುದಾನ ನೀಡಲಿದೆ’ ಎಂದು ಪ್ರಕಟಿಸಿದರು.
‘ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವುದು ತಡವಾಗಿರುವುದರಿಂದ ಕ್ರಿಯಾ ಯೋಜನೆ ಆಗಿಲ್ಲ. ಮುಂದಿನ 15 ದಿನಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿ ಕಾಮಗಾರಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಕೆಕೆಆರ್‌ಡಿಬಿ ಸದಸ್ಯರಾದ ಬಿ.ಆರ್. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಅರವಿಂದ ಅರಳಿ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಇದಕ್ಕೂ ಮುನ್ನ ವಿಮಾನದ ಮೂಲಕ ಕಲಬುರಗಿಗೆ ಬಂದ ಡಾ. ಅಜಯ್ ಸಿಂಗ್ ಅವರನ್ನು ಅದ್ಧೂರಿ ಮೆರವಣಿಗೆಯ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಮಂಡಳಿ ಕಚೇರಿಗೆ ಕರೆ ತಂದರು. ಇದರಿಂದಾಗಿ ಮಧ್ಯಾಹ್ನ 3.30ಕ್ಕೆ ನಡೆಯಬೇಕಿದ್ದ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಂಜೆ 6ಕ್ಕೆ ನಡೆಯಿತು.
‘ಎಂಜಿನಿಯರ್‌ಗಳ ಸಂಖ್ಯೆ ಹೆಚ್ಚಳ’
ಕೆಕೆಆರ್‌ಡಿಬಿಗೆ ಪ್ರತಿ ವರ್ಷ ಅನುದಾನ ಹೆಚ್ಚಳವಾಗುತ್ತಿದೆ. ಇದಕ್ಕೆ ತಕ್ಕಂತೆ ಕಾಮಗಾರಿಗಳಿಗೆ ಅನುಮೋದನೆ ನೀಡಲು ಪರಿಶೀಲನೆ ನಡೆಸಲು ಎಂಜಿನಿಯರ್‌ಗಳ ಅಗತ್ಯವಿದೆ. ವಾಸ್ತವವಾಗಿ 300ಕ್ಕೂ ಅಧಿಕ ಎಂಜಿನಿಯರ್‌ಗಳು ಅಗತ್ಯವಿದೆ. ಆದರೆ 21 ಎಂಜಿನಿಯರ್‌ಗಳನ್ನು ಮಾತ್ರ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಎಂಜಿನಿಯರ್‌ಗಳು ಸೇರಿದಂತೆ ಇತರೆ ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಭರವಸೆ ನೀಡಿದರು.
ಅಧ್ಯಕ್ಷರಿಗೆ ಉಪಸಮಿತಿಯಲ್ಲಿ ಸ್ಥಾನ
ಪ್ರಿಯಾಂಕ್ ‘ಕೆಕೆಆರ್‌ಡಿಬಿಗೆ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಹೆಚ್ಚು ಕೆಲಸಗಳಾಗಲಿವೆ ಎಂದು ನಾವು ಹೇಳಿದ್ದು ನಿಜ. ಏಕೆಂದರೆ ಹಿಂದಿನ ಬಿಜೆಪಿ ಸರ್ಕಾರ ಮಂಡಳಿಗೆ ಇರುವ ಎಲ್ಲ ಅಧಿಕಾರವನ್ನು ಕಿತ್ತುಕೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿವೇಚನಾಧಿಕಾರ ಬಳಸಿ ಶಾಸಕ ಅಜಯ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಅವರಿಗೆ ನಮ್ಮ ಸರ್ಕಾರ ಹೆಚ್ಚಿನ ಅಧಿಕಾರವನ್ನು ನೀಡಲಿದೆ. 371 (ಜೆ) ಕಲಂನಡಿ ಕೈಗೊಳ್ಳಲಿರುವ ಅಭಿವೃದ್ಧಿ ಕೆಲಸಗಳ ಮೇಲ್ವಿಚಾರಣೆ ನಡೆಸಲು ರಚಿಸಿರುವ ಸಂಪುಟ ಉಪಸಮಿತಿಗೆ ನಾನೇ ಅಧ್ಯಕ್ಷ. ಮಂಡಳಿ ಅಧ್ಯಕ್ಷರನ್ನು ಉಪಸಮಿತಿಯ ಅಹ್ವಾನಿತರನ್ನಾಗಿ ಸೇರಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ಮಂಡಳಿಯ ಕೆಲಸಗಳು ಯಾವುದೇ ವಿಘ್ನ ಇಲ್ಲದೇ ನಡೆಯಲಿವೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡಳಿಯ ಶೇ 24ರಷ್ಟು ಅನುದಾನದ ಬಗ್ಗೆ ತೀರ್ಮಾನಿಸಲು ಮಂಡಳಿಗೆ ಅಧಿಕಾರವಿತ್ತು. ಉಳಿದ ಮೊತ್ತ ಖರ್ಚು ಮಾಡುವ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳುತ್ತಿತ್ತು. ಅದನ್ನು ಬದಲಾಯಿಸಿ ಮಂಡಳಿಗೆ ಮೊದಲು ಇದ್ದ ಶೇ 96ರಷ್ಟು ಅನುದಾನ ಬಳಕೆಯ ಅಧಿಕಾರವನ್ನು ನೀಡಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.