ಕಲಬುರಗಿ: ‘ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಕೃಷಿ ಸಂತ ಪ್ರೊ. ಎಸ್.ಎ.ಪಾಟೀಲ ಅವರ ಹೆಸರಿನಲ್ಲಿ ಕೃಷಿ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು’ ಎಂದು ತಡೋಳಾದ ರಾಜಶೇಖರ ಶಿವಾಚಾರ್ಯರು ಹೇಳಿದರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಎಸ್.ಎ.ಪಾಟೀಲ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಧಾರವಾಡ ಕೃಷಿ ವಿಶ್ವವಿದ್ಯಾಲಯ ಮುಚ್ಚುವ ಹಂತಕ್ಕೆ ತಲುಪಿದ್ದಾಗ ವಿ.ವಿ.ಗೆ ಕುಲಪತಿಯಾಗಿ ಬಂದ ಎಸ್.ಎ.ಪಾಟೀಲ ಅವರು ಪುನಶ್ಚೇತನ ಮಾಡಿದರು. ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ, ಹತ್ತಿ ಬೀಜ ಕ್ರಾಂತಿ ಮಾಡಿದರು’ ಎಂದು ಹೇಳಿದರು.
ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ ಮಾತನಾಡಿ, ‘ಎಸ್.ಎ.ಪಾಟೀಲ ಅವರು ಕಲ್ಯಾಣ ಕರ್ನಾಟಕದ ಬಹುದೊಡ್ಡ ಆಸ್ತಿಯಾಗಿದ್ದರು. ಅವರಂತಹ ಪ್ರತಿಭೆಗಳು ನಮ್ಮ ಭಾಗದಲ್ಲಿ ಬಹಳಷ್ಟು ಜನರಿದ್ದಾರೆ. ಅವರನ್ನು ಗುರುತಿಸಬೇಕು. ಬಣ್ಣ ಬಣ್ಣದ ಹತ್ತಿ ಬೆಳೆಯುವ ಪ್ರಯೋಗ ಮಾಡಿದ್ದರು’ ಎಂದರು.
‘ವಿನಯ, ಸರಳತೆ ಮೈಗೂಡಿಸಿಕೊಂಡು ರೈತರೊಂದಿಗೆ ಬೆರೆಯುತ್ತಿದ್ದರಿಂದ ಕೃಷಿಯ ಮೂಲವನ್ನು ಅರಿತ್ತಿದ್ದರು. ನಿವೃತ್ತಿ ನಂತರವೂ ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿಯನ್ನು ಕಂಡುಕೊಂಡಿದ್ದರು’ ಎಂದು ಹೇಳಿದರು.
ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ಭಾರತ ಕೃಷಿ ಪ್ರದಾನ ರಾಷ್ಟ್ರ ಎನ್ನುತ್ತೇವೆ. ಆದರೆ, ಕೃಷಿಗೆ ಮರ್ಯಾದೆ ನೀಡುವುದನ್ನು ಬಿಟ್ಟಿದ್ದೇವೆ. ಕೃಷಿಗೆ ಗೌರವ ಬರುವಂತೆ ಕೆಲಸ ಮಾಡಿದವರು ಎಸ್.ಎ. ಪಾಟೀಲರು’ ಎಂದು ಬಣ್ಣಿಸಿದರು.
ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ನರಿಬೋಳ ಮಾತನಾಡಿ, ‘ಎಸ್.ಎ.ಪಾಟೀಲ ಅವರು ಜೇವರ್ಗಿ ಕೀರ್ತಿ ವಿಶ್ವಕ್ಕೆ ಪರಿಚಯಿಸಿದವರು. ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯಕ್ಕೆ ಎಸ್.ಎ. ಪಾಟೀಲ ಅವರ ಹೆಸರಿಡಬೇಕು’ ಎಂದು ಪ್ರಸ್ತಾಪಿಸಿದರು.
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಗುರುಪಾದಲಿಂಗ ಸ್ವಾಮೀಜಿ, ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ರಾಯಚೂರು ಕೃಷಿ ವಿ.ವಿ ಕುಲಪತಿ ಪ್ರೊ. ಎಂ.ಹಣಮಂತಪ್ಪ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಪ್ರಮುಖರಾದ ಲಿಂಗರಾಜಪ್ಪ ಅಪ್ಪ, ಎಸ್.ವಿ.ನಿಷ್ಠಿ, ಸುರೇಶ ಲಕ್ಷ್ಮಯ್ಯ, ಎನ್.ಮಾದರೆಡ್ಡಿ, ಉಮೇಶ, ದಾನೋಜಿ, ರವೀಂದ್ರ ಗುಂಡಪ್ಪಗೋಳ, ರಾಜು ತೆಗ್ಗೆಳ್ಳಿ, ಸಿದ್ರಾಮಪ್ಪ ಪಾಟೀಲ ದಂಗಾಪುರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.