ಕಾಳಗಿ: ‘ಪಟ್ಟಣದ ಪ್ರತಿ ವಾರ್ಡಿನ ಸಿಸಿ ರಸ್ತೆಗಳ ಮೇಲೆ ಕೊಳಚೆ ಮತ್ತು ಚರಂಡಿ ನೀರಿನ ದರ್ಬಾರ್ ಕಂಡುಬರುತ್ತಿದೆ. ಈ ನೀರು ಓಡಾಡುವ ಜನ-ಜಾನುವಾರುಗಳಿಗೆ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ನಿತ್ಯ ತೊಂದರೆ ಉಂಟುಮಾಡುತ್ತಿದೆ. ಅಷ್ಟೇ ಅಲ್ಲದೆ, ಸೊಳ್ಳೆಗಳ ಉತ್ಪತಿಯಾಗಿ ಸುತ್ತಲಿನ ಮನೆಗಳಿಗೆ ಮಾರಕವಾಗಿದೆ’ ಎಂದು ಜನರು ದೂರಿದ್ದಾರೆ.
ವಾರ್ಡ್‌ಗಳಲ್ಲಿ ಓಡಾಡಲು ಎಲ್ಲಕಡೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಯಾವೊಂದು ಸಿಸಿ ರಸ್ತೆಯೂ ವೈಜ್ಞಾನಿಕವಾಗಿರದೆ ಕಳಪೆ ಮತ್ತು ಕಾಟಾಚಾರದಿಂದ ನಿರ್ಮಿಸಲಾಗಿದೆ. ರಸ್ತೆಗಳ ಮಧ್ಯೆ ಎಲ್ಲೆಂದರಲ್ಲಿ ಉಬ್ಬುಗಳು ಕಾಣಿಸುತ್ತಿವೆ.
ರಸ್ತೆ ಅಕ್ಕಪಕ್ಕದಲ್ಲಿ ಕೆಲಕಡೆ ಚರಂಡಿ ನಿರ್ಮಿಸಲಾಗಿದ್ದರೂ ಅದು ಯಾವುದೇ ಹೊಂದಾಣಿಕೆ ಆಗದಂತಿವೆ. ಇನ್ನೂ ಕೆಲವೆಡೆ ಚರಂಡಿ ಇಲ್ಲದೆ ಬಚ್ಚಲು ಮತ್ತು ನಳದ ನೀರು ರಸ್ತೆ ಮೇಲೆ ಹರಿದಾಡುತ್ತಿದೆ. ಅನೇಕ ಕಡೆ ರಸ್ತೆಗಳಲ್ಲಿ ತಗ್ಗುಬಿದ್ದು ಕೊಳಚೆ ನೀರು ಸಂಗ್ರಹವಾಗಿ ನಿಂತಲ್ಲೇ ನಿಂತು ದುರ್ವಾಸನೆ ಬೀರುತ್ತಿದೆ. ಇದಲ್ಲದೇ ಎಲ್ಲಿಯೂ ಕಸದ ತೊಟ್ಟಿ ಇಲ್ಲದೆ ಕಸ ಕೊಳಚೆ ನೀರಿನ ಪಾಲಾಗುತ್ತಿದೆ. ಈ ನಡುವೆ ಹಂದಿಗಳ ಹಾವಳಿ ಹೆಚ್ಚಾಗಿದ್ದು ಅವು ಈ ಕೊಳಚೆ ನೀರಿನಲ್ಲಿ ಒದ್ದಾಡುತ್ತ ಪರಿಸರ ಮತ್ತಷ್ಟು ಹದಗೆಡಿಸುತ್ತಿವೆ. ಇದರಿಂದಾಗಿ ಅನಾರೋಗ್ಯದ ವಾತಾವರಣ ಮನೆಮಾಡಿದ್ದು ಡೆಂಗಿ ಮತ್ತು ಚಿಕುನ್ ಗುನ್ಯಾ ಜ್ವರ ಹರಡುವ ಭೀತಿ ಎದುರಾಗಿದೆ. ‘ಕೂಡಲೇ ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಂಡು ಜನತೆಗೆ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಾಲೆಗೆ ದಿನನಿತ್ಯ ಮಕ್ಕಳು ಶಿಕ್ಷಕರು ಪೋಷಕರು ಬರುತ್ತಾರೆ. ಇಲ್ಲಿ ರಸ್ತೆ ಮೇಲೆ ಕೊಳಚೆ ನೀರಿನ ಸಂಗ್ರಹ ಇದ್ದು ಅಕ್ಕಪಕ್ಕದ ಎಲ್ಲರೂ ದುರ್ವಾಸನೆ ತೆಗೆದುಕೊಳ್ಳುವಂತಾಗಿದೆ– ಪರಮೇಶ್ವರ ಮಡಿವಾಳ ಗ್ರಾ.ಪಂ.ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.