ADVERTISEMENT

ಅಫಜಲಪುರ: ಮುಗಿಯದ ಗ್ರಾಮಸ್ಥರ ನೀರಿನ ಬವಣೆ, ಟ್ಯಾಂಕರ್ ಮೂಲಕ ನೀರು ಪೂರೈಕೆ

ಶಿವಾನಂದ ಹಸರಗುಂಡಗಿ
Published 19 ಮೇ 2024, 7:51 IST
Last Updated 19 ಮೇ 2024, 7:51 IST
<div class="paragraphs"><p>ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್ ವ್ಯವಸ್ಥೆ ಮಾಡಿರುವುದು</p></div>

ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್ ವ್ಯವಸ್ಥೆ ಮಾಡಿರುವುದು

   

ಅಫಜಲಪುರ: ಮಾಶಾಳ ಗ್ರಾ.ಪಂನಲ್ಲಿ 10 ಸಾವಿರ ಜನಸಂಖ್ಯೆಯಿದೆ. ಮಳೆ ಕೊರತೆಯಿಂದಾಗಿ ಗ್ರಾಮದಲ್ಲಿರುವ ಕೊಳವೆ ಬಾವಿಗಳು ಬತ್ತಿವೆ. ತಾಲ್ಲೂಕು ಆಡಳಿತ ನೀರು ಪೂರೈಕೆಗೆ ಒಂದು ಟ್ಯಾಂಕ್ ನೀಡಿದೆ. ಆದರೆ ಗ್ರಾಮಸ್ಥರಿಗೆ ನೀರು ಮಾತ್ರ ಸಾಕಾಗುತ್ತಿಲ್ಲ.

ಗ್ರಾಮದಲ್ಲಿ 12 ವಾರ್ಡ್‌ಗಳಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಮೇ 27ರಂದು ಗ್ರಾಮದಲ್ಲಿ ಚೌಡೇಶ್ವರಿ ಜಾತ್ರೆ ಆರಂಭವಾಗುತ್ತದೆ. ಸುತ್ತಲಿನ ಮೂರು ರಾಜ್ಯಗಳ ಭಕ್ತರು ಬರುತ್ತಾರೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.

ADVERTISEMENT

ಗ್ರಾಮದಲ್ಲಿ ನಾಲ್ಕು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಸರ್ಕಾರ ಮತ್ತು ಗ್ರಾ.ಪಂನವರು ಕೊರೆದಿರುವ ಕೊಳವೆ ಬಾವಿಗಳು ಬತ್ತಿವೆ. ಹೀಗಾಗಿ ಶಾಸಕ ಎಂ.ವೈ. ಪಾಟೀಲ ಹಾಗೂ ಜಿ.ಪಂ ಮಾಜಿ ಸದಸ್ಯ ಅರುಣಕುಮಾರ ಎಂ. ಪಾಟೀಲ ಅವರಿಗೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಿಳಿಸಲಾಯಿತು. ಅವರು ತಕ್ಷಣವೇ ತಹಶೀಲ್ದಾರ್‌ಗೆ ಮಾಹಿತಿ ನೀಡಿ, ನೀರು ಪೂರೈಕೆಗಾಗಿ ಮತ್ತೊಂದು ಟ್ಯಾಂಕರ್‌ ವ್ಯವಸ್ಥೆ ಮಾಡಿದ್ದಾರೆ. ಆದರೆ ಇದು ಸಾಕಾಗುವುದಿಲ್ಲ. ನಮಗೆ ಇನ್ನೂ ಎರಡು ಟ್ಯಾಂಕರ್‌ ವ್ಯವಸ್ಥೆ ಮಾಡಬೇಕು. ಗ್ರಾಮದ ಸುತ್ತ ಎಲ್ಲಿಯೂ ನೀರು ದೊರೆಯುತ್ತಿಲ್ಲ. ಕೆಲವು ರೈತರು ಹಣ ನೀಡಿದರೆ, ನೀರು ಕೊಡುವುದಾಗಿ ತಿಳಿಸಿದ್ದಾರೆ. ನಾವು ಈ ವಿಷಯವನ್ನು ತಹಶೀಲ್ದಾರ್‌ಗೆ ತಿಳಿಸಿದ್ದೇವೆ. ಅವರು ಈ ಕುರಿತು ರೈತರ ಜತೆ ಮಾತನಾಡುತ್ತೇನೆ ಎಂದು ಮಾಶಾಳ ಗ್ರಾಮದ ಮುಖಂಡರಾದ ಶಿವು ಪ್ಯಾಟಿ, ಬಾಳಸಾಬ ಪಾರಗೊಂಡ ಹಾಗೂ ಮರೆಪ್ಪ ಮುಗಳಿ ತಿಳಿಸಿದರು. ಗ್ರಾಮಕ್ಕೆ ಭೀಮಾ ನದಿಯಿಂದ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ನಮಗೆ ನೀರು ಬರುತ್ತಿಲ್ಲ ಎಂದು ಅವರು ತಿಳಿಸಿದರು.

ಜಾತ್ರೆ: ಚೌಡೇಶ್ವರಿ ಜಾತ್ರೆ ಮೇ 27ರಿಂದ ಜೂನ್ 27ರವರೆಗೆ ನಡೆಯುತ್ತದೆ. ಸುತ್ತಲಿನ ರಾಜ್ಯಗಳಿಂದ ಸಾವಿರಾರು ಭಕ್ತರು ಬರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ತಿಂಗಳವರೆಗೆ ನಿರಂತರವಾಗಿ ಟ್ಯಾಂಕರ್‌ ಮೂಲಕ ಸರ್ಕಾರ ಕುಡಿಯುವ ನೀರು ಪೂರೈಕೆ ಮಾಡಬೇಕು. ಈಗಾಗಲೇ ಗ್ರಾಮದಲ್ಲಿ ಬೆಂಗಳೂರಿನ ಅಮ್ಮ ಭಗವಾನ ಸಂಸ್ಥೆಯವರು ಎರಡು ಟ್ಯಾಂಕರ್‌ ಮೂಲಕ ದಿನಕ್ಕೆ 10 ಟ್ಯಾಂಕ್ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೂ ಸಹ ಕುಡಿಯುವ ನೀರು ಸಾಕಾಗುತ್ತಿಲ್ಲ. ಜಾತ್ರೆ ಇರುವುದರಿಂದ ಪ್ರತಿ ಮನೆಗೂ ನೆಂಟರು ಬರುತ್ತಾರೆ. ದಿನಾಲು ದರ್ಶನಕ್ಕಾಗಿ ಬೇರೆ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಅದಕ್ಕಾಗಿ ತಾಲ್ಲೂಕು ಆಡಳಿತ ಕುಡಿಯುವ ನೀರಿಗಾಗಿ ಹೆಚ್ಚಿನ ಗಮನ ಹರಿಸಬೇಕು. ಗ್ರಾ.ಪಂಗೆ ಕುಡಿಯುವ ನೀರಿಗಾಗಿ ಜಿಲ್ಲಾಧಿಕಾರಿಗಳು ವಿಶೇಷ ಅನುದಾನ ನೀಡಬೇಕು ಎಂದು ಮುಖಂಡರಾದ ಶಿವರುದ್ರಪ್ಪ ಅವಟಿ, ಶಿವಣ್ಣ ಪತಾಟೆ, ಧೂಳಪ್ಪ ರಾಜ, ಶಾತಪ್ಪ ಹಡಲಗಿ ಒತ್ತಾಯಿಸಿದರು.

ಪರಿಸ್ಥಿತಿ ತಿಳಿದು ಪೂರೈಕೆ ಪ್ರಮಾಣ ಹೆಚ್ಚಳಕ್ಕೆ ಕ್ರಮ

ಈಗಾಗಲೇ ಮಾಶಾಳದಲ್ಲಿ ಒಂದು ಟ್ಯಾಂಕರ್‌ ಮುಖಾಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಬೆಂಗಳೂರಿನ ಅಮ್ಮ ಭಗವಾನ ಸಂಸ್ಥೆಯವರು ದಿನಕ್ಕೆ 10 ಟ್ರಿಪ್ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಗ್ರಾಮದಲ್ಲಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಲಾಗಿದೆ. ಈ ಸಂಬಂಧ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ನಾನು ಸಹ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿಯ ಪರಿಸ್ಥಿತಿ ತಿಳಿದುಕೊಂಡು ಹೆಚ್ಚುವರಿ ಟ್ರಿಪ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್‌ ಸಂಜೀವಕುಮಾರ ದಾಸರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.