ADVERTISEMENT

ಅಫಜಲಪುರ: ನದಿ ತೀರದಲ್ಲಿದ್ದರೂ ತೀರದ ಶುದ್ಧ ನೀರಿನ ದಾಹ

ಭೀಮಾ ನದಿಗೆ ಸೇರುತ್ತಿರುವ ಚರಂಡಿ ನೀರು; ಶುದ್ಧೀಕರಣಕ್ಕೆ ವ್ಯವಸ್ಥೆ ಮಾಡಲು ಆಡಳಿತ

ಶಿವಾನಂದ ಹಸರಗುಂಡಗಿ
Published 7 ಅಕ್ಟೋಬರ್ 2024, 6:21 IST
Last Updated 7 ಅಕ್ಟೋಬರ್ 2024, 6:21 IST
ಅಫಜಲಪುರ ಪಟ್ಟಣದ ಮಹಲ್ ಹತ್ತಿರದ ಚರಂಡಿ ನೀರು ಹರಿದು ಭೀಮಾ ನದಿಗೆ ಹೋಗುತ್ತಿರುವುದು
ಅಫಜಲಪುರ ಪಟ್ಟಣದ ಮಹಲ್ ಹತ್ತಿರದ ಚರಂಡಿ ನೀರು ಹರಿದು ಭೀಮಾ ನದಿಗೆ ಹೋಗುತ್ತಿರುವುದು   

ಅಫಜಲಪುರ: ಭೀಮಾ ನದಿಗೆ ದಂಡೆ ಮೇಲಿರುವ ಗ್ರಾಮಗಳ ಚರಂಡಿ ನೀರು ಸೇರುತ್ತಿದೆ. ಅದರಲ್ಲೂ ಅಫಜಲಪುರ ಪಟ್ಟಣ, ಘತ್ತರಗಾ ಸೇರಿ ದೇವಸ್ಥಾನ, ದೊಡ್ಡ ಪಟ್ಟಣಗಳ ಚರಂಡಿ ನೀರೂ ನದಿ ಸೇರುತ್ತಿದೆ. ಅದೇ ನೀರನ್ನು ಜನರು ನೇರವಾಗಿ ಕುಡಿಯಲು ಬಳಕೆ ಮಾಡುತ್ತಿರುವುದರಿಂದ ರೋಗಗಳ ಭಯ ಹೆಚ್ಚಾಗಿದೆ.

ಪುರಸಭೆ ನದಿ ನೀರು ಶುದ್ಧೀಕರಣಕ್ಕೆ ಯಾವುದೇ ವ್ಯವಸ್ಥೆ ಮಾಡಿಲ್ಲ. 20 ವರ್ಷಗಳ ಹಿಂದೆ ಮಾಡಿರುವ ಶುದ್ದೀಕರಣ ಘಟಕದ  ಹಾಳಾಗಿ ಹತ್ತಾರು ವರ್ಷಗಳೇ ಕಳೆದರೂ ದುರಸ್ತಿ ಮಾಡಿಲ್ಲ. ಹೀಗಾಗಿ ಪಟ್ಟಣದ 38 ಸಾವಿರ ಜನ ಮಾಲಿನ್ಯವಾದ ನೀರನ್ನೇ ಕುಡಿಯುತ್ತಿದ್ದಾರೆ.

‘ಪಟ್ಟಣದ ಚರಂಡಿ ನೀರು ಭೀಮಾ ನದಿ ಸೇರುತ್ತದೆ. ಇದೇ ನೀರು ಮರಳಿ ಪಟ್ಟಣಕ್ಕೆ ಪೂರೈಕೆಯಾಗುತ್ತದೆ. ಈ ಬಗ್ಗೆ ಅನೇಕ ಸಂಘಟನೆಗಳು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಬಡದಾಳ ತಿಳಿಸಿದರು.

ADVERTISEMENT

ಭೀಮಾ ತೀರದ ಸುಮಾರು 20 ಗ್ರಾಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿ ಹೋಗಿವೆ.  ಕಾಮಗಾರಿ ಮುಗಿದ ಮೇಲೆ ಅದರ ನಿರ್ವಹಣೆಗಾಗಿ ಗ್ರಾಮ ಪಂಚಾಯತಿಗಳಿಗೆ ವಹಿಸಿಕೊಡುತ್ತಾರೆ ಅವರು ದುರಸ್ತಿ ಮಾಡುವುದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಶುದ್ಧ ನೀರು ಎನ್ನುವುದು ಸಿಗುತ್ತಿಲ್ಲ. ಜನಪ್ರತಿನಿಧಿಗಳೂ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎನ್ನುವುದು ನದಿ ತೀರದ ಗ್ರಾಮಗಳ ಜನರ ಅಳಲು.

ತಾಲ್ಲೂಕಿನಲ್ಲಿ ಕಳೆದ 20 ವರ್ಷಗಳಲ್ಲಿ ಸುಮಾರು 8 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲಾ ಘಟಕಗಳು ಹಾಳುಬಿದ್ದಿವೆ. ಕೆಲವೊಂದಕ್ಕೆ ನೀರು ಇಲ್ಲದಿದ್ದರೆ ಇನ್ನೂ ಕೆಲ ಘಟಕಗಳು ಹಾಳಾಗಿವೆ. ಉಳಿದವುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. 

‘ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದು 20 ವರ್ಷಗಳಿಂದ ಆಡಳಿತ ನಡೆಸಿಕೊಂಡು ಬಂದಿರುವ ಶಾಸಕರು, ಅಧಿಕಾರಿಗಳಿಗೆ ಈ ಕುರಿತು ತಾಕೀತು ಮಾಡಿದರೂ ಯಾವ ಪ್ರಯೋಜನವೂ ಆಗಿಲ್ಲ’ ಎಂದು ಮಾಶಾಳದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಮಾಜಿ ನಿರ್ದೇಶಕ ಶಿವು ಪ್ಯಾಟಿ ಹೇಳುತ್ತಾರೆ

ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಮಾಡುವ ಜೆಎಂಜೆಎಂ ಯೋಜನೆ ಫಲಕಾರಿಯಾಗಿಲ್ಲ. ಕಡೆ ನೀರಿನ ಮೂಲವಿದ್ದರೂ ಕಳಪೆ ಕಾಮಗಾರಿಯಿಂದ ನೀರು ಬರುತ್ತಿಲ್ಲ. 30 ವರ್ಷಗಳಿಂದ ಹಲವಾರು ಯೋಜನೆಗಳು ಅನುಷ್ಠಾನಗೊಂಡರೂ ನೀರು ಪೂರೈಕೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಕುರಿತು ಶಾಸಕರು ಹಲವಾರು ಬಾರಿ ಸಭೆ ನಡೆಸಿದರು ಫಲಕಾರಿಯಾಗಿಲ್ಲ’ ಎನ್ನುವುದು ಪಟ್ಟಣ ಮತ್ತು ನದಿ ತೀರದ ಗ್ರಾಮಗಳ ಜನರ ಮಾತು. 

ಶುದ್ಧೀಕರಣ ಘಟಕ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸುಮಾರು ₹62 ಕೋಟಿ ವೆಚ್ಚದಲ್ಲಿ ಭೀಮಾ ಬ್ಯಾರೇಕ್‌ನಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಮುಗಿಯುವ ಹಂತದಲ್ಲಿದ್ದು ಪೂರ್ಣಗೊಂಡರೆ ನಿರಂತರವಾಗಿ ಪಟ್ಟಣಕ್ಕೆ ಶುದ್ಧ ನೀರು ಪೂರೈಕೆಯಾಗುತ್ತದೆ
ವಿಜಯಮಹಾಂತೇಶ ಹೂಗಾರ ಪುರಸಭೆ ಮುಖ್ಯಾಧಿಕಾರಿ
ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಗಳು ಯಶಸ್ವಿಯಾಗಿಲ್ಲ. ಕೇವಲ ಗುತ್ತಿದಾರರು ಅನುದಾನ ಎತ್ತಿ ಹಾಕಿದ್ದಾರೆ. ಹೀಗಾಗಿ ಬಡವರು ಅನಿವಾರ್ಯವಾಗಿ ಅಶುದ್ಧ ನೀರು ಕುಡಿಯುವಂತಾಗಿದೆ
ಮಹಾಂತೇಶ ಜಮಾದಾರ ರೈತ ಮುಖಂಡ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.