ಕಲಬುರಗಿ: ‘ಇಡೀ ವರ್ಷದ ಶುಲ್ಕ ಮೊದಲೇ ಕಟ್ಟುತ್ತೇನೆ. ಪಾಲಿಕೆಯವರು ಕಂತುಗಳಲ್ಲಿ ನೀಡಿದಂತೆ ಐದು ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಇದೇ ತಿಂಗಳ ಲೆಕ್ಕಾಚಾರ ಹೇಳುವುದಾದರೆ ಸೆ.6, ಸೆ.12, ಸೆ.17ಕ್ಕೆ ನೀರು ಬಂದಿದೆ. ಸೆ.22ಕ್ಕೆ ಬರಬೇಕಿತ್ತು. ಆದರೆ, ಈ ತನಕ ಬಂದಿಲ್ಲ...’
ಇದು ನಗರದ ಹೃದಯ ಭಾಗದಲ್ಲಿರುವ ವೆಂಕಟೇಶ ನಗರದ ನಿವಾಸಿ ಆರ್.ಐ.ದರ್ಗಾ ಅವರ ಅಳಲು.
‘ನಮ್ಮದು ಸಣ್ಣ ಕುಟುಂಬ, ಸಣ್ಣ ಮನೆ. ಕೊಳವೆಬಾವಿ ಇಲ್ಲ. ನೀರು ಬಂದಾಗ ಇರೊ ಪಾತ್ರೆಗಳೆಲ್ಲ ತುಂಬಿಟ್ಟು, ಲೆಕ್ಕಹಾಕಿ ನೀರು ಬಳಸುತ್ತೇವೆ. ಶೇಖರಿಸಿಟ್ಟ ನೀರನ್ನು ಎಷ್ಟು ದಿನಗಳ ಕಾಲ ಬಳಸಲು ಸಾಧ್ಯ? ಮಳೆಗಾಲದಲ್ಲೂ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ’ ಎಂಬುದು ಅವರ ಸಂಕಟ.
ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ನಿತ್ಯ ಹತ್ತಾರು ದೂರುಗಳು ಪಾಲಿಕೆಯ ಸಹಾಯವಾಣಿಗೆ ಹೋಗುತ್ತವೆ. ಜುಲೈನಲ್ಲಿ 777, ಆಗಸ್ಟ್ 804 ಹಾಗೂ ಸೆಪ್ಟೆಂಬರ್ 20ರ ತನಕ 402 ದೂರುಗಳು ದಾಖಲಾಗಿವೆ. ‘ನೀರೇ ಬಂದಿಲ್ಲ’ ಎಂಬುದೇ ಬಹುತೇಕರ ದೂರು. ಇದು ಯಾವುದೇ ಒಂದು ಭಾಗವಲ್ಲ, ಕಲಬುರಗಿ ಮಹಾನಗರದ ಅಷ್ಟದಿಕ್ಕುಗಳ ಜನರ ಸಂಕಟ, ಸಮಸ್ಯೆ ಇದಕ್ಕಿಂತ ಭಿನ್ನವಿಲ್ಲ.
ಮಂದಗತಿ ಕಾಮಗಾರಿ: ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ವಿಶ್ವಬ್ಯಾಂಕ್ ನೆರವಿನ ‘ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ’ಯಡಿ ಕಲಬುರಗಿಯಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನ ಆಗುತ್ತಿದೆ. ಎಲ್ ಅಂಡ್ ಟಿ ಕಂಪನಿ ಕಾಮಗಾರಿ ಹೊಣೆ ಹೊತ್ತಿದ್ದು, ಕಾಮಗಾರಿ ಮುಗಿಸಲು 2025ರ ವರ್ಷದ ಜೂನ್ ಅಂತ್ಯದ ತನಕ ಕಾಲಾವಧಿ ಇದೆ.
ನಗರದ 55 ವಾರ್ಡ್‌ಗಳನ್ನು 32 ಜಲವಲಯಗಳಾಗಿ ವಿಂಗಡಿಸಿ ಕಂಪನಿ ಕೆಲಸ ಮಾಡುತ್ತಿದೆ. ಇದೀಗ 10 ವಲಯಗಳಲ್ಲಿ ಕೆಲಸ ಸಾಗಿದ್ದು, 22 ವಲಯಗಳಲ್ಲಿ ಇನ್ನಷ್ಟೇ ಕೆಲಸ ಆರಂಭವಾಗಬೇಕಿದೆ. ಒಟ್ಟಾರೆಯಾಗಿ ಸೆ.21ರ ತನಕ ಅಂದಾಜು ಶೇ 44ರಷ್ಟು ಕಾಮಗಾರಿಯಷ್ಟೇ ಮುಗಿದಿದೆ. ‘ಕಾಮಗಾರಿ ತೆವಳುತ್ತ ಸಾಗಿದೆ. ಸಂಪೂರ್ಣ ಕೆಲಸ ಮುಗಿಸಲು ಇನ್ನು ಎಷ್ಟು ವರ್ಷಗಳು ಬೇಕೋ ಏನೋ’ ಎಂಬ ಆತಂಕ ಜನರನ್ನು ಕಾಡುತ್ತಿದೆ.
ಅಲ್ಲಲ್ಲಿ ನಿರಂತರ ನೀರು: ನಗರಕ್ಕೆ ಮೂರು ಶುದ್ಧೀಕರಣ ಘಟಕಗಳಿಂದ ನೀರು ಪೂರೈಕೆಯಾಗುತ್ತದೆ. ಶೋರ್‌ಗುಂಬಜ್ ಶುದ್ಧೀಕರಣ ನಗರಕ್ಕೆ ಮೂರು ಶುದ್ಧೀಕರಣ ಘಟಕಗಳಿಂದ ನೀರು ಪೂರೈಕೆಯಾಗುತ್ತದೆ. ಈ ಶುದ್ಧೀಕರಣ ಘಟಕದಿಂದ ಪಾಲಿಕೆಯ 36 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸದ್ಯ ನಾಲ್ಕೈದು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕೋಟನೂರು ಶುದ್ಧೀಕರಣ ಘಟಕದಿಂದ ಪಾಲಿಕೆಯ7 ವಾರ್ಡ್‌ಗಳಲ್ಲಿ ಐದು ವಾರ್ಡ್‌ಗಳಿಗೆ ಮೂರು ದಿನಗಳಿಗೊಮ್ಮೆ ಹಾಗೂ ಎರಡು ವಾರ್ಡ್‌ಗಳಿಗೆ ದಿನ ಬಿಟ್ಟು ದಿನಕ್ಕೆ ನೀರು ಸಿಗುತ್ತಿದೆ. ಹಳೇ ಫಿಲ್ಟರ್ ಬೆಡ್‌ನಿಂದ 12 ವಾರ್ಡ್‌ಗಳ ಪೈಕಿ ಮೂರು ವಾರ್ಡ್‌ಗಳಲ್ಲಿ ನಾಲ್ಕೈದು ದಿನಕ್ಕೊಮ್ಮೆ ನೀರು ಬಿಟ್ಟರೆ, ವಾರ್ಡ್ ನಂ.24ರಲ್ಲಿ ನಿರಂತರ ನೀರು ಪೂರೈಕೆಯಾಗುತ್ತಿದೆ. ಇದೇ ಪ್ರದೇಶದ 8, 10, 11, 23, 35, 36, 37ನೇ ವಾರ್ಡ್‌ಗಳ ಭಾಗಶಃ ಪ್ರದೇಶದಲ್ಲಿ ಮಾತ್ರವೇ ನಿರಂತರ ನೀರು ಸಿಗುತ್ತಿದೆ.
ಏನಿದು 24x7 ನೀರು ಯೋಜನೆ?
ಕಲಬುರಗಿ ನಗರಕ್ಕೆ ನಿರಂತರ ನೀರು ಪೂರೈಸುವ ಯೋಜನೆ ಇದಾಗಿದೆ. ಬೆಣ್ಣೆತೊರಾ ಜಲಾಶಯದಲ್ಲಿ ನೀರೆತ್ತುವ ಜಾಕ್‌ವೆಲ್ ನಿರ್ಮಾಣ 900 ಕಿಲೊ ವಾಟ್ ಸಾಮರ್ಥ್ಯದ ನಾಲ್ಕು ಪಂಪ್‌ಸೆಟ್‌ಗಳ ಅಳವಡಿಕೆ ಬೆಣ್ಣೆತೊರಾದಿಂದ ಸಲಾಂ ತೇಕಡಿ ತನಕ ನೀರು ಸರಬರಾಜಿಗೆ 13.6 ಕಿ.ಮೀ. ಪೈಪ್‌ಲೈನ್ ಹಾಕುವುದು ಸಲಾಂ ತೇಕಡಿಯಲ್ಲಿ 58.77 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ಸ್ಥಾಪನೆ ಅಲ್ಲಿಂದ ಕಲಬುರಗಿ ತನಕ ಹಾಗೂ ನಗರದ ಒಳಭಾಗದಲ್ಲಿ 35.6 ಕಿಲೊ ಮೀಟರ್ ಶುದ್ಧ ನೀರು ಪೂರೈಕೆಗೆ ಮುಖ್ಯ ಪೈಪ್‌ಲೈನ್ ಅಳವಡಿಸುವುದು ನಗರದಲ್ಲಿ 12 ಮೇಲ್ಮಟ್ಟದ ಜಲಸಂಗ್ರಹಗಾರಗಳ ನಿರ್ಮಾಣ ಹಾಗೂ ನಗರದಲ್ಲಿ ಶುದ್ಧ ನೀರು ಪೂರೈಕೆಗೆ 899 ಕಿಲೊ ಮೀಟರ್ ಪೈಪ್‌ಲೈನ್ ಅಳವಡಿಕೆ ಯೋಜನೆಯ ಕಾಮಗಾರಿಯಲ್ಲಿ ಸೇರಿದೆ.
ಕಾಮಗಾರಿಯ ಪ್ರಗತಿ ಆಮೆಗತಿ
ಬೆಣ್ಣೆತೊರಾದಿಂದ ಸಲಾಂ ತೇಕಡಿ ತನಕ ಕಚ್ಚಾನೀರು ಸರಬರಾಜು ಪೈಪ್‌ಲೈನ್ ಕಾಮಗಾರಿ ಶೇ95ರಷ್ಟು ಮುಗಿದಿದೆ. ಸಲಾಂ ತೇಕಡಿಯಲ್ಲಿ 58.77ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ಕಾಮಗಾರಿಯು ಶೇ43ರಷ್ಟು ಪೂರ್ಣಗೊಂಡಿದೆ. ಸಲಾಂ ತೇಕಡಿಯಿಂದ ಕಲಬುರಗಿ ತನಕ ಹಾಗೂ ನಗರದ ಒಳಗೆ ಶುದ್ಧ ನೀರು ಪೂರೈಕೆಯ ಮುಖ್ಯ ಪೈಪ್‌ಲೈನ್ ಅಳವಡಿಕೆ ಶೇ90ರಷ್ಟು ಮುಗಿದಿದೆ. ನಗರದಲ್ಲಿ ನಿರ್ಮಿಸಬೇಕಿದ್ದ 12 ಮೇಲ್ಮಟ್ಟದ ಜಲಸಂಗ್ರಹಗಾರಗಳ ಪೈಕಿ ಆರು ಪೂರ್ಣಗೊಂಡಿದ್ದು ಇನ್ನೂ ಆರು ಜಲಸಂಗ್ರಹಗಾರಗಳ ನಿರ್ಮಾಣ ಪ್ರಗತಿಯಲ್ಲಿದೆ. ನಗರದಲ್ಲಿ ವಿವಿಧ ಶುದ್ಧೀಕರಣ ಘಟಕಗಳಿಂದ ಮನೆಗಳಿಗೆ ನೀರು ಪೂರೈಸುವ 899 ಕಿ.ಮೀ. ಪೈಪ್‌ಲೈನ್ ಕಾಮಗಾರಿಯಲ್ಲಿ 165 ಕಿ.ಮೀ. ಪೂರ್ಣಗೊಂಡಿದ್ದು ಬರೀ ಶೇ19ರಷ್ಟು ಪ್ರಗತಿ ಸಾಧಿಸಿದೆ. ಈ ನಡುವೆ ಬೆಣ್ಣೆತೊರಾದಲ್ಲಿ ಜಾಕ್‌ವೆಲ್ ನಿರ್ಮಾಣಕ್ಕೆ ಇನ್ನೂ ಸ್ಪಷ್ಟ ಅನುಮತಿಯೇ ಸಿಕ್ಕಿಲ್ಲ!
2025ರ ಜೂನ್ ತನಕ ಅವಧಿ
ಕಲಬುರಗಿಯಲ್ಲಿ ನಿರಂತರ ನೀರು ಪೂರೈಕೆಯ ₹837.43 ಕೋಟಿ ವೆಚ್ಚದ ಯೋಜನೆ ಕಾಮಗಾರಿಯನ್ನು ಚೆನ್ನೈನ ಎಲ್ ಅಂಡ್ ಟಿ ಏಜೆನ್ಸಿ ಗುತ್ತಿಗೆ ಪಡೆದಿದೆ. ಯೋಜನೆಯ ವಿನ್ಯಾಸ ನಿರ್ಮಾಣ ಕಾರ್ಯಾಚರಣೆ ಹಾಗೂ ವರ್ಗಾವಣೆ ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕಿದೆ. ಐದು ವರ್ಷದಲ್ಲಿ ಎಲ್ಲ ಕಾಮಗಾರಿ ಮುಗಿಸಿ ಮುಂದಿನ ಏಳು ವರ್ಷ ನಿರ್ವಹಣೆ ಮಾಡಿ ಬಳಿಕ ಪಾಲಿಕೆಗೆ ಹಸ್ತಾಂತರಿಸಬೇಕಿದೆ. 2020ರ ಜೂನ್‌ನಲ್ಲಿ ಗುತ್ತಿಗೆ ಕರಾರು ನಡೆದಿದ್ದು ನಗರದ ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಣೆಯನ್ನು 2021ರ ಜುಲೈನಲ್ಲಿ ಎಲ್ ಅಂಡ್ ಟಿಗೆ ಹಸ್ತಾಂತರಿಸಲಾಗಿದೆ. ಸಂಪೂರ್ಣ ಕಾಮಗಾರಿ ಮುಗಿಸಲು ಎಲ್ ಅಂಡ್ ಟಿ ಕಂಪನಿಗೆ 2025ರ ವರ್ಷದ ಜೂನ್ ಅಂತ್ಯ ತನಕ ಕಾಲಾವಧಿ ಇದೆ.
ಸರಣಿ ನೋಟಿಸ್ ದಂಡ...
ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ನೀರು ಪೂರೈಕೆಯಲ್ಲಿ ಲೋಪ ಕಳಪೆ ಪೈಪ್‌ಗಳಂಥ ಹಲವು ಕಾರಣಗಳಿಗೆ ಎಲ್ ಅಂಡ್ ಟಿ ಕಂಪನಿಗೆ ಪಾಲಿಕೆಯಿಂದ ಈತನಕ 70 ಅಧಿಕ ನೋಟಿಸ್ ನೀಡಲಾಗಿದೆ. ₹ 18.14 ಕೋಟಿಗಳಷ್ಟು ದಂಡವನ್ನೂ ವಸೂಲಿ ಮಾಡಲಾಗಿದೆ. ಈ ಹಿಂದೆ ಪೈಪ್‌ಲೈನ್‌ಗೆ ಕಳಪೆ ಪೈಪ್ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಎಲ್ ಅಂಡ್ ಟಿ ಕಂಪನಿಯು ನಗರದಲ್ಲಿ ಹಾಕಿದ್ದ 138 ಕಿಲೊ ಮೀಟರ್‌ಗಳಷ್ಟು ಪೈಪ್‌ಲೈನ್ ಮತ್ತೆ ಅಗೆದು ಗುಣಮಟ್ಟದ ಪೈಪ್‌ಗಳನ್ನು ಅಳವಡಿಸಿತ್ತು. ಇದು ಕೂಡ ಕಾಮಗಾರಿ ವಿಳಂಬದ ಕಾರಣಗಳಲ್ಲೊಂದು ಎನ್ನಲಾಗಿದೆ.
‘ಕಾಮಗಾರಿ ಮೇಲೆ ನಿರಂತರ ನಿಗಾ’
‘ನೀರಿನ ಸರಬರಾಜು ಕಾಮಗಾರಿ ನಿಗದಿತ ಅವಧಿಯಲ್ಲೇ ಮುಗಿಸುವಂತೆ ಕಂಪನಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಕಾಮಗಾರಿಯ ಪ್ರಗತಿ ಮೇಲೆ ನಿರಂತರ ನಿಗಾವಹಿಸಿ ನಿಯಮಿತವಾಗಿ ಪರಿಶೀಲನಾ ಸಭೆ ನಡೆಸಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಹೇಳಿದರು. ‘ಬೆಣ್ಣೆತೊರಾ ಜಲಾಶಯದಲ್ಲಿ ಕುಡಿಯುವ ಜಾಕ್‌ವೆಲ್ ನಿರ್ಮಾಣ ಅನುಮತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸಚಿವರೊಂದಿಗೂ ಚರ್ಚಿಸಲಾಗಿದೆ. ಕೆಲವು ಪ್ರಕ್ರಿಯೆಗಳ ಬಳಿಕ ಶೀಘ್ರವೇ ಅನುಮತಿ ಸಿಗಲಿದೆ’ ಎಂದರು. ‘ನಗರದಲ್ಲಿ ನವೆಂಬರ್ 1ರ ಹೊತ್ತಿಗೆ ಎರಡರಿಂದ ಮೂರು ಸಾವಿರ ಮನೆಗಳಿಗೆ 24x7 ಕುಡಿಯುವ ನೀರು ಪೂರೈಸಲು ಚಿಂತನೆ ನಡೆದಿದೆ’ ಎಂದು ಪ್ರತಿಕ್ರಿಯಿಸಿದರು.
ನಾವು ಸಂಪೂರ್ಣ ಯೋಜನೆಯನ್ನು ನಿಗದಿತ ಗಡುವಿನೊಳಗೆ ಮುಗಿಸುವ ವಿಶ್ವಾಸವಿದೆ. ಅದಕ್ಕೆ ತಕ್ಕಂತೆ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗಿದೆ-ಕುಮಾರೇಸನ್, ಯೋಜನಾ ವ್ಯವಸ್ಥಾಪಕ ಎಲ್ ಅಂಡ್ ಟಿ ಕಂಪನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.