ಕಲಬುರಗಿ: ‘ಕರ್ನಾಟಕ ಹೈಕೋರ್ಟ್‌ನ ಗುಲಬರ್ಗಾ ಪೀಠದ ಆದೇಶದ ಪ್ರಕಾರ ನಾಯಕ, ವಾಲ್ಮಿಕಿ, ಬೇಡ, ಬೇಡರ ಜಾತಿಗಳನ್ನು ಅನುಸೂಚಿತ ಬುಡಕಟ್ಟು ಪಟ್ಟಿಯಿಂದ ಕೈ ಬಿಡಬೇಕು’ ಎಂದು ಕರ್ನಾಟಕ ರಾಜ್ಯ ತಳವಾರ ಎಸ್.ಟಿ ಹೋರಾಟ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಸರ್ದಾರ್ ರಾಯಪ್ಪ ಆಗ್ರಹಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರಗಿ ಪೀಠವು 2012ರಲ್ಲಿ ಈ ಜಾತಿಗಳನ್ನು ಅನುಸೂಚಿತ ಪಟ್ಟಿಗೆ ಸೇರ್ಪಡೆ ಮಾಡಿದ್ದು ತಪ್ಪು ಎಂದು ಹೇಳಿದೆ. ನಾಯಕ ಪದ ನಾಯ್ಕಡ ಜಾತಿಯ ಉಪಜಾತಿಗಳು ಎಂದು ದಾರಿ ತಪ್ಪಿಸಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆದೇಶದಲ್ಲಿ ಹೇಳಿದೆ’ ಎಂದರು.
‘ನಾಯಕ ಸಮುದಾಯದವರು ವಾಮಮಾರ್ಗದಿಂದ ಎಸ್‌ಟಿಗೆ ಸೇರಿ, ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ಸಿಗುತ್ತಿರುವ ಸೌಲಭ್ಯ ಸಿಗದಂತೆ ಮಾಡುತ್ತಿದ್ದಾರೆ. ತಳವಾರ ಪದವನ್ನು ಹಲವಾರು ಸಮುದಾಯಗಳೊಂದಿಗೆ ತಳಕು ಹಾಕುತ್ತಾ ನಮ್ಮ ಸಮಾಜವನ್ನು ವಂಚಿಸುವ ದುರುದ್ದೇಶದಿಂದ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಜಾತಿ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಕೆಲವರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಾ ಅಧಿಕಾರಿಗಳಿಗೆ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೇವಣಸಿದ್ಧಪ್ಪಗೌಡ ಎಂ. ಕಮಾನಮನಿ, ಸಿದ್ದು ಜಮಾದಾರ, ಈರಣ್ಣ ಎಸ್. ಹೊಸಮನಿ, ಸೂರ್ಯಕಾಂತ ಹೇರೂರ, ಭೀಮರಾಯ ತಳವಾರ, ಬಾಬುಗೌಡ ಎಸ್. ಪಾಟೀಲ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.