ಕಲಬುರಗಿ: ಆಕಾಶವಾಣಿಯಲ್ಲಿ ನಿವೃತ್ತಿ ಹೊಂದಿದ ಹಿರಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ, ತಾಂತ್ರಿಕ ವಿಭಾಗದ ಅಶೋಕ್ ಕುಮಾರ ಸೋಕಾವಡೆ, ಕುಮಾರ್ ಅಮರಗೊಳ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಡಾ.ಸದಾನಂದ ಪೆರ್ಲ ಅವರು ಮೂಲತಃ ಕಾಸರಗೋಡು ಪೆರ್ಲ ಗ್ರಾಮದವರಾಗಿದ್ದು, 1994ರ ಅಕ್ಟೋಬರ್ 12ರಂದು ಕಲಬುರಗಿ ಆಕಾಶವಾಣಿಯಲ್ಲಿ ಪ್ರಸಾರ ನಿರ್ವಾಹಕರಾಗಿ ಸೇವೆಗೆ ಸೇರಿ 29 ವರ್ಷ 8 ತಿಂಗಳು ಕಾರ್ಯಕ್ರಮ ವಿಭಾಗದಲ್ಲಿ ಸೇವೆ ಸಲ್ಲಿಸಿ ಮೇ 31ರಂದು ನಿವೃತ್ತಿ ಹೊಂದಿದ್ದಾರೆ.
ಕಲಬುರಗಿಯಲ್ಲಿ 20 ವರ್ಷ, ಮಂಗಳೂರು ಆಕಾಶವಾಣಿಯಲ್ಲಿ 10 ವರ್ಷ ಕೆಲಸ ಮಾಡಿ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ಕೇಳುಗ ವೃಂದಕ್ಕೆ ನೀಡಿದ ಹೆಗ್ಗಳಿಕೆ ಅವರದು. ಕಲಬುರಗಿ ಆಕಾಶವಾಣಿಯನ್ನು ಜನಮಾನಸಕ್ಕೆ ಮುಟ್ಟಿಸಿ ಜನಪ್ರಿಯಗೊಳಿಸಿದವರು. ನೇರ ಫೋನ್- ಇನ್ ಸಂವಾದ ಸಂದರ್ಶನ, ರೂಪಕ, ನಾಟಕ, ಮಾತುಕತೆ, ಭಾಷಣ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುವ ದರ್ಪಣ, ಕೃಷಿ ರಂಗ ಮುಂತಾದ ವಿವಿಧ ವಿಭಾಗಗಳಲ್ಲಿ ಜನಾನುರಾಗಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಹೆಸರು ಮಾಡಿದವರು. ಸಾಪ್ತಾಹಿಕ ಸಂಕಿರಣ, ನೀವೇನಂತೀರಿ, ಜೊತೆ ಜೊತೆಯಲಿ ಫೋನ್- ಇನ್ ಕಾರ್ಯಕ್ರಮ, ಹೊಸ ಓದು, ಗಾಂಧಿ ಸ್ಮೃತಿ, ಮಾತೇ...ಕತೆ ಮುಂತಾದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಶ್ರೋತ್ರುಗಳನ್ನು ಮುಟ್ಟಿದವರು. ಅಮೃತ ಸ್ವಾತಂತ್ರ್ಯದ ಹೆಜ್ಜೆಗಳು ಸರಣಿಯನ್ನು ನೇರ ಪ್ರಸಾರದಲ್ಲಿ ಬಿತ್ತರಿಸಿ ಕೃತಿಗೆ ತಂದವರು.
ಪೋಷಣ ಅಭಿಯಾನ ವಿಶೇಷ ಕಾರ್ಯಕ್ರಮಕ್ಕೆ ಪ್ರಶಸ್ತಿ ಲಭಿಸಿದೆ. ಇವರ ಮಾಧ್ಯಮ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು 2013ರಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದುವರೆಗೆ ಆರು ಕೃತಿಗಳನ್ನು ಹೊರತಂದಿದ್ದಾರೆ.
ಕಲರಬುಗಿ ಆಕಾಶವಾಣಿಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಗೌರವಿಸಿ ‘ಪೆರ್ಲ ಅವರ ಸೇವೆ ಈ ಭಾಗಕ್ಕೆ ಇನ್ನಷ್ಟು ಬೇಕಾಗಿದೆ ಮತ್ತು ಅವರ ದೂರದೃಷ್ಟಿ ಆಲೋಚನೆ ಅತ್ಯಂತ ಉಪಯುಕ್ತ’ ಎಂದು ಹೇಳಿದರು.
ಕಲಬುರಗಿ ಆಕಾಶವಾಣಿಯ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಸಂಜೀವ್ ಕುಮಾರ್ ಮಿರ್ಜಿ ಮತ್ತು ತಾಂತ್ರಿಕ ವಿಭಾಗದ ಉಪನಿರ್ದೇಶಕ ಜಿ.ಗುರುಮೂರ್ತಿ ಅವರು ಸನ್ಮಾನಿಸಿ ಬೀಳ್ಕೊಟ್ಟರು.
ಸಂಗಮೇಶ್, ಶಾರದಾ ಜಂಬಲದಿನ್ನಿ, ನಿವೃತ್ತ ಅಧಿಕಾರಿಗಳಾದ ಅನಿಲ್ ಕುಮಾರ್, ರಾಜೇಂದ್ರ ಕುಲಕರ್ಣಿ, ವಿಜಯಕುಮಾರ್, ಗೋವಿಂದ ಕುಲಕರ್ಣಿ, ಪ್ರಭು ನಿಷ್ಟಿ, ಶಿವಯೋಗಿ ಎಂ.ಕೋರಿ, ಮೊಹಮ್ಮದ್ ಅಬ್ದುಲ್ ರವೂಫ್, ಅನಿಲ್ ಕುಮಾರ್, ಶರಣಬಸಪ್ಪ ಬೈರ್ಜಿ, ಅನುಷಾ ಡಿ.ಕೆ, ಸುರೇಶ್ ರಾಂಪುರೆ, ಶ್ರೀಮಂತ ನಾಲವಾರ, ಬಾಳಪ್ಪ, ಶೇಷಗಿರಿ ನಾಮದೇವ, ಅವಿನಾಶ್, ಕುಪೇಂದ್ರ ಶಾಸ್ತ್ರಿ, ಕೃಷ್ಣಮೂರ್ತಿ ಹಳ್ಳಿಖೇಡ್(ಬಿ), ಭೀಮರಾವ್, ಹೇಮನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.