ADVERTISEMENT

ಮಳೆ ಕೊರತೆ | ಉಳ್ಳಾಗಡ್ಡಿ ದರ ದುಪ್ಪಟ್ಟು: ಡಿಸೆಂಬರ್‌ವರೆಗೂ ದರ ಇಳಿಕೆ ಅನುಮಾನ

ಕಿರಣ ನಾಯ್ಕನೂರ
Published 28 ಅಕ್ಟೋಬರ್ 2023, 6:32 IST
Last Updated 28 ಅಕ್ಟೋಬರ್ 2023, 6:32 IST
ಉಳ್ಳಾಗಡ್ಡಿ (ಸಂಗ್ರಹ ಚಿತ್ರ)
ಉಳ್ಳಾಗಡ್ಡಿ (ಸಂಗ್ರಹ ಚಿತ್ರ)   

ಕಲಬುರಗಿ: ಎರಡು ತಿಂಗಳ ಹಿಂದೆ ಬೆಲೆ ಹೆಚ್ಚಿಸಿಕೊಂಡು ಬೀಗುತ್ತಿದ್ದ ಟೊಮೆಟೊ ಜಾಗವನ್ನು ಈಗ ಉಳ್ಳಾಗಡ್ಡಿ ಆಕ್ರಮಿಸಿದೆ. ಉಳ್ಳಾಗಡ್ಡಿ ಬೆಲೆ ಬುಧವಾರಕ್ಕಿಂತ ದುಪ್ಪಟ್ಟಾಗಿದ್ದು ಗ್ರಾಹಕರು ಬೆಚ್ಚಿ ಬೀಳುತ್ತಿದ್ದಾರೆ.

ಬುಧವಾರ ಪ್ರತಿ ಕೆ.ಜಿಗೆ ₹ 30–₹ 40ನಂತೆ ಮಾರಾಟವಾಗಿದ್ದ ಉಳ್ಳಾಗಡ್ಡಿ ಸ್ಥಳೀಯ ಮಾರುಕಟ್ಟೆಯಲ್ಲಿ ಗುರುವಾರ ಪ್ರತಿ ಕೆ.ಜಿಗೆ ₹ 60–₹ 70ನಂತೆ ಮಾರಾಟವಾಗಿದೆ. ಕಣ್ಣಿ ಮಾರುಕಟ್ಟೆ, ತಾಜ್‌ಸುಲ್ತಾನಪುರ ಎಪಿಎಂಸಿಗಳಲ್ಲಿ ₹ 50 ಇತ್ತು (ಗುಣಮಟ್ಟಕ್ಕೆ ತಕ್ಕಂತೆ, ಒಂದೊಂದು ಮಾರುಕಟ್ಟೆಯಲ್ಲಿ ಒಂದೊಂದು ಬೆಲೆ. ಹೆಚ್ಚು ಖರೀದಿಸಿದರೆ ಕಡಿಮೆ ದರ ಇದೆ).

ನಗರದ ಎಪಿಎಂಸಿಗೆ ಪಟ್ಟಣ ಗ್ರಾಮದಿಂದ ಹೊರತುಪಡಿಸಿ ಸ್ಥಳೀಯವಾಗಿ ಬೆಳೆದ ಉಳ್ಳಾಗಡ್ಡಿ ಬರುವುದಿಲ್ಲ. ಮಹಾರಾಷ್ಟ್ರದ ನಾಸಿಕ್‌ನಿಂದ ಹೆಚ್ಚಿನ ಪ್ರಮಾಣದ ಉಳ್ಳಾಗಡ್ಡಿಯನ್ನು ಏಜೆಂಟರು ತರಿಸುತ್ತಾರೆ. ಬುಧವಾರ 30 ಟನ್ (ಕಣ್ಣಿ ಮಾರುಕಟ್ಟೆ ಹೊರತುಪಡಿಸಿ) ಆವಕವಾಗಿದ್ದು ಕ್ವಿಂಟಾಲ್‌ಗೆ ಕನಿಷ್ಠ ₹ 1,500ರಿಂದ ₹ 5000 ಇತ್ತು. ಶನಿವಾರ ಆವಕ ಇದಕ್ಕಿಂತ ಕಡಿಮೆಯಾಗಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ADVERTISEMENT

ಸಧ್ಯ ಕ್ವಿಂಟಾಲ್‌ ಉಳ್ಳಾಗಡ್ಡಿಗೆ ₹ 5,500ಕ್ಕಿಂತ ಹೆಚ್ಚಿನ ಬೆಲೆಯಿದ್ದು ಚಿಲ್ಲರೆ ವ್ಯಾಪಾರಿಗಳು ಸಾಗಾಟದ ವೆಚ್ಚ, ಲಾಭ ಸೇರಿ ಕೆ.ಜಿಗೆ ₹ 60–₹ 70ನಂತೆ ಮಾರಾಟ ಮಾಡುತ್ತಿದ್ದಾರೆ.

‘ಸಮಯಕ್ಕೆ ಸರಿಯಾಗಿ ಮಳೆಯಾಗಿದ್ದರೆ ಈ ಹೊತ್ತಿಗೆ ಹೊಸ ಬೆಳೆ ಮಾರುಕಟ್ಟೆಗೆ ಬರುತ್ತಿತ್ತು. ಹಳೇ ಬೆಳೆ ಇಷ್ಟು ದಿನ ಬಾಳಿಕೆ ಬರುವುದಿಲ್ಲ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮೂಲಕ ಖರೀದಿಸುವ ಚಿಂತನೆಯನ್ನೂ ಸರ್ಕಾರ ಮಾಡುತ್ತಿದೆ’ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

‘ಸ್ಥಳೀಯವಾಗಿ ಹೆಚ್ಚು ಉಳ್ಳಾಗಡ್ಡಿ ಬೆಳೆಯುವುದಿಲ್ಲ, ಮಹಾರಾಷ್ಟ್ರದಿಂದ ಹೆಚ್ಚಿನ ಉತ್ಪನ್ನ ತರಿಸಬೇಕು. ಹೀಗಾಗಿ ಸಾಗಾಟ ವೆಚ್ಚವನ್ನೂ ಮಾರಾಟದ ಬೆಲೆಯಲ್ಲಿ ಸೇರಿಸುತ್ತೇವೆ. ಸದ್ಯ ಗ್ರೇಡ್‌–1 ಉಳ್ಳಾಗಡ್ಡಿ ಲಭ್ಯವಿಲ್ಲ. ಡಿಸೆಂಬರ್‌ ಅಂತ್ರದವರೆಗೂ ಬೆಲೆ ಇಳಿಯುವುದು ಅನುಮಾನ’ ಎಂದು ಸಗಟು ವ್ಯಾಪಾರಿ ಸೈಫ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.