ADVERTISEMENT

ಕಲಬುರಗಿ: ಏರ್ ಕೂಲರ್‌ಗಳಿಗೆ ಹೆಚ್ಚಿದ ಬೇಡಿಕೆ

ಶಾಖ– ಧಗೆ ತಡೆದುಕೊಳ್ಳಲು ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಮೊರೆ

ಓಂಕಾರ ಬಿರಾದಾರ
Published 9 ಮೇ 2024, 5:21 IST
Last Updated 9 ಮೇ 2024, 5:21 IST
ಕಲಬುರಗಿಯ ಸೂಪರ್‌ ಮಾರುಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಏರ್‌ಕೂಲರ್‌ ಮಾರಾಟಕ್ಕೆ ಇಟ್ಟಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್‌
ಕಲಬುರಗಿಯ ಸೂಪರ್‌ ಮಾರುಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಏರ್‌ಕೂಲರ್‌ ಮಾರಾಟಕ್ಕೆ ಇಟ್ಟಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್‌   

ಕಲಬುರಗಿ: ಕೆಂಡದಂಥ ಬಿಸಿಲಿಗೆ ಬಸವಳಿದ ಜನ, ಬಿಸಿಗಾ‌ಳಿ, ಶಾಖ ಹಾಗೂ ಧಗೆ ತಡೆದುಕೊಳ್ಳಲು ವಿವಿಧ ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಕೂಲರ್‌ ಹಾಗೂ ಎಸಿಗಳ ಬಳಕೆ ಹೆಚ್ಚುತ್ತಿದೆ.

ನಗರದ ಸೂಪರ್‌ ಮಾರುಕಟ್ಟೆ ಹಾಗೂ ವಿವಿಧ ಎಲೆಕ್ಟ್ರಾನಿಕ್‌ ಅಂಗಡಿಗಳಲ್ಲಿ ಏರ್‌ ಕೂಲರ್‌, ಎಸಿಗಳ ಮಾರಾಟ ಪ್ರಮಾಣ ಹೆಚ್ಚಿದೆ. ಎಸಿಗಳು ಗಾತ್ರ ಹಾಗೂ ಗುಣಮಟ್ಟದ ಮೇಲೆ ಬೆಲೆ ಇವೆ. ಆದರೆ ಬಡವರ ಎಸಿ ಎಂದು ಹೆಸರು ಪಡೆದ ಕೂಲರ್‌ಗಳ ದರವೂ ₹2,500 ರಿಂದ ₹15 ಸಾವಿರದವರೆಗೆ ಇದೆ.

‘ಏಕಾಏಕಿ ಮೇ 1ರಿಂದ ಬಿಸಿಗಾಳಿ ಪ್ರಮಾಣ ಹೆಚ್ಚಾಗಿರುವುದರಿಂದ ಕೂಲರ್‌ ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಡೀಲರ್‌ಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅಂಗಡಿಗಳಲ್ಲಿ ಸ್ಟಾಕ್ ಕೂಡಾ ಕಡಿಮೆ ಇದೆ. ಗ್ರಾಹಕರಿಗೆ ಬೇಕಾದ ಕೂಲರ್‌ಗಳ ಸ್ಟಾಕ್‌ ಇಲ್ಲ. ಇನ್ನೂ ಬೇಕಾದ ಕಂಪನಿ ಹಾಗೂ ಗಾತ್ರದ ಮೇಲೆ ಕೂಲರ್‌ ಅಂಗಡಿ ಡೀಲರ್‌ಗಳಿಗೆ ಅಡ್ವಾನ್ಸ್‌ ಬೇಡಿಕೆಯೂ ಇದೆ’ ಎನ್ನುತ್ತಾರೆ ವೀಗಾರ್ಡ್‌ ಡೀಲರ್‌ ಅಂಗಡಿ ಸಿಬ್ಬಂದಿ ಶಶಿಕಾಂತ ಗೌಳಿ.

ADVERTISEMENT

‘ಪ್ರತಿಷ್ಟಿತ ಕಂಪನಿಯ ಹೆಸರಿನಲ್ಲಿ ಮಾರಾಟ ಮಾಡುವ ಏರ್‌ ಕೂಲರ್‌ಗಳ ಬೆಲೆಯೂ ಕಳೆದ ವರ್ಷಕ್ಕಿಂತ ಬೇಡಿಕೆ ಹೆಚ್ಚಿದ ಪರಿಣಾಮ ಶೇ 10ರಷ್ಟು ಬೆಲೆ ಹೆಚ್ಚಳವಾಗಿದೆ. 15 ಲೀಟರ್‌ನಿಂದ ಪ್ರಾರಂಭವಾಗಿ 90 ಲೀಟರ್‌ ಸಾಮರ್ಥ್ಯದ ಏರ್‌ ಕೂಲರ್‌ಗಳು ಮಾರಾಟಕ್ಕೆ ಇವೆ. 15 ಲೀಟರ್‌ ಸಾಮರ್ಥ್ಯದ ಕೂಲರ್‌ಗೆ 4,500, 20 ಲೀಟರ್‌ ಸಾಮರ್ಥ್ಯದ ಕೂಲರ್‌ಗೆ ₹5,500, 30 ಲೀಟರ್‌ ಕೂಲರ್‌ಗೆ ₹7,000, 50 ಲೀಟರ್‌ ₹11 ಸಾವಿರ, 55 ಲೀಟರ್‌ ಕೂಲರ್‌ಗೆ ₹15 ಸಾವಿರದವರೆಗೆ ದರ ಇದೆ. ಬಿಸಿಗಾಳಿ ಪರಿಣಾಮ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿರುವುದರಿಂದ ಡೀಲರ್‌ಗಳು ಶೇ 10ರಷ್ಟು ಬೆಲೆಯನ್ನು ಹೆಚ್ಚಳ ಮಾಡುತ್ತಿದ್ದಾರೆ’ ಎನ್ನುತ್ತಾರೆ ಶಶಿಕಾಂತ.

ಇನ್ನೂ ಕೆಲವು ಎಲೆಕ್ಟ್ರಾನಿಕ್‌ ರಿಪೇರಿ ಅಂಗಡಿಗಳಲ್ಲಿ ಸ್ಥಳೀಯವಾಗಿ ತಯಾರಿಸಿ ಕೂಲರ್‌ಗಳು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಇದಕ್ಕೆ ಗ್ಯಾರಂಟಿ, ವಾರಂಟಿ ಇರುವುದಿಲ್ಲ. ಕಚ್ಚಾ ವಸ್ತುಗಳಾದ ಮೋಟರ್‌, ಫ್ಯಾನ್‌, ಪೈ‍ಪ್‌ ಅಳವಡಿಕೆ ಕವರ್‌ಗಳನ್ನು ಹೈದರಾಬಾದ್‌ ಮೂಲಕ ತಂದು ತಯಾರು ಮಾಡುತ್ತಾರೆ. ಕೂಲರ್‌ಗಳ ಬೆಲೆ ₹3 ಸಾವಿರದಿಂದ ₹10 ಸಾವಿರದವರೆಗೆ ದರ ಇದೆ. ಇವುಗಳಿಗೂ ಬೇಡಿಕೆ ಹೆಚ್ಚಿದೆ.

ತಾಪಮಾನ ಹೆಚ್ಚಳ ಬಿಸಿಗಾಳಿಯಿಂದಾಗಿ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಕೂಲರ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಅಗತ್ಯ ಸ್ಟಾಕ್‌ ಕೂಡಾ ಖಾಲಿಯಾಗುತ್ತಿದೆ. ಮುಖ್ಯ ಡೀಲರ್‌ಗಳಿಂದ ಹೆಚ್ಚಿನ ಪ್ರಮಾಣದ ಕೂಲರ್‌ಗಳು ಬರುತ್ತಿಲ್ಲ. ಇದರಿಂದ ದರ ಏರಿಕೆಯಾಗುತ್ತಿದೆ.
ಎಂ.ಡಿ. ಅತಿಖ್‌ ಉಲ್‌ಹಕ್‌ ಎಲೆಕ್ಟ್ರಾನಿಕ್‌ ಅಂಗಡಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.