ADVERTISEMENT

ಕಲಬುರಗಿ | ದಸರಾ–ದೀಪಾವಳಿ ಹಬ್ಬಗಳ ಸಡಗರ: 13 ಟನ್‌ ನಂದಿನಿ ಸ್ವೀಟ್ಸ್‌ ಮಾರಾಟ

ಕಲಬುರಗಿ–ಬೀದರ್–ಯಾದಗಿರಿ ಹಾಲು ಒಕ್ಕೂಟ ಸಾಧನೆ

ಬಸೀರ ಅಹ್ಮದ್ ನಗಾರಿ
Published 1 ನವೆಂಬರ್ 2024, 7:14 IST
Last Updated 1 ನವೆಂಬರ್ 2024, 7:14 IST
   

ಕಲಬುರಗಿ: ನಾಡಹಬ್ಬ ದಸರಾ, ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಇಲ್ಲಿನ ಕಲಬುರಗಿ–ಬೀದರ್–ಯಾದಗಿರಿ ಹಾಲು ಒಕ್ಕೂಟವು ಬಗೆಬಗೆಯ ನಂದಿನಿ ಸಿಹಿತಿನಿಸುಗಳ ಮಾರಾಟದಲ್ಲಿ ಗುರಿ ಮೀರಿ ಸಾಧನೆ ತೋರಿದೆ.

ದಸರಾ–ದೀಪಾವಳಿ ಅವಧಿಯಲ್ಲಿ 13 ಟನ್‌ಗೂ ಅಧಿಕ ನಂದಿನಿ ಸ್ಟೀಟ್ಸ್‌ಗಳನ್ನು ಒಕ್ಕೂಟ ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಸಲ ಮೂರು ಪಟ್ಟಿಗೂ ಹೆಚ್ಚು ವಹಿವಾಟು ನಡೆದಿದೆ. ಕಳೆದ ವರ್ಷ ದಸರಾ–ದೀಪಾವಳಿ ಸಂದರ್ಭದಲ್ಲಿ ಎರಡು ಟನ್‌ಗಳಷ್ಟು ಸಿಹಿ ತಿನಿಸುಗಳ ಮಾರಾಟದ ಗುರಿಯನ್ನು ಒಕ್ಕೂಟ ಹಾಕಿಕೊಂಡಿತ್ತು. ಆಗ ಮೂರು ಟನ್‌ಗಳಿಗೂ ಅಧಿಕ ವಹಿವಾಟು ನಡೆಸಿತ್ತು.

ಬೇಡಿಕೆ ಗ್ರಹಿಸಿದ ಒಕ್ಕೂಟ: ‘ಗುಣಮಟ್ಟದಿಂದಾಗಿ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಯಿದೆ. ಅದನ್ನು ಆಧರಿಸಿ ಹಬ್ಬಗಳಿಗೂ ಮೊದಲೇ ತಂಡಗಳನ್ನು ನಿರ್ಮಿಸಿ, ಜಾಗೃತಿ ಮೂಡಿಸಲಾಯಿತು. ಬೈಕ್‌ ಷೋರೂಂ, ಕಾರು ಷೋರೂಂ, ಕೈಗಾರಿಕೆಗಳು ಸೇರಿದಂತೆ 10ಕ್ಕೂ ಹೆಚ್ಚು ಕಾರ್ಮಿಕರಿರುವ ಸಂಘ–ಸಂಸ್ಥೆಗಳನ್ನು ಸಂಪರ್ಕಿಸಿ ನಂದಿನಿ ಸ್ವೀಟ್ಸ್ ಬಗೆಗೆ ಅರಿವು ಮೂಡಿಸಲಾಗಿತ್ತು. ಅದರ ಫಲವಾಗಿ ಈ ಸಲ ಗುರಿಯಾಗಿದ್ದ ಐದು ಟನ್‌ಗಳ ಮೂರು ಪಟ್ಟಗೂ ಅಧಿಕ ಸಿಹಿ ತಿನಿಸುಗಳ ಮಾರಾಟ ನಡೆದಿದೆ’ ಎಂದು ಒಕ್ಕೂಟದ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಫೇಡಾಗೆ ಅಗ್ರಸ್ಥಾನ: ದಸರಾ–ದೀಪಾವಳಿ ಹಬ್ಬಗಳ ಅವಧಿಯಲ್ಲಿ ಒಕ್ಕೂಟದಿಂದ ಕುಂದಾ, ಫೇಡಾ, ಮೈಸೂರು ಪಾಕ್‌, ವಿವಿಧ ಬಗೆಯ ಲಾಡು, ವಿವಿಧ ಬಗೆಯ ಬರ್ಫಿ, ಖೋವಾ, ರಸಗುಲ್ಲಾ, ಜಾಮೂನು ಸೇರಿದಂತೆ ಹಲವು ಬಗೆಯ ಸಿಹಿ ತಿನಿಸುಗಳ ಮಾರಾಟ ನಡೆದಿದೆ. ಈ ಪೈಕಿ ಫೇಡಾ ಅಗ್ರಸ್ಥಾನದಲ್ಲಿದೆ. ನಂದಿನಿ ಫೇಡಾ ಒಂದೇ ಐದು ಟನ್‌ಗೂ ಅಧಿಕ ವಹಿವಾಟು ನಡೆದಿದೆ.

‘ನವೆಂಬರ್‌ ತಿಂಗಳಲ್ಲೂ ಹಬ್ಬಗಳ ಸಂಭ್ರಮ ಮುಂದುವರಿಯಲಿದೆ. ದೀಪಾವಳಿಯ ಬಳಿಕವೂ ಬಹುತೇಕ ವ್ಯಾಪಾರಿಗಳು ಲಕ್ಷ್ಮಿ ಪೂಜೆ ನಡೆಸುತ್ತಾರೆ. ಹೀಗಾಗಿ ನಂದಿನಿ ಸಿಹಿ ತಿನಿಸುಗಳ ಮಾರಾಟ ಇನ್ನಷ್ಟು ಹೆಚ್ಚುವ ನಿರೀಕ್ಷೆಗಳಿವೆ’ ಎಂಬುದು ಅಧಿಕಾರಿಗಳ ವಿಶ್ವಾಸ.

‘ಮುಂದಾಲೋಚನೆ ಶ್ರಮದ ಫಲ’
‘ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ವ್ಯಾಪಕ ಬೇಡಿಕೆಯಿದೆ. ಅದನ್ನು ಅರಿತು ಮುಂದಾಲೋಚನೆಯಿಂದ ಮಾರುಕಟ್ಟೆಯಲ್ಲಿ ಶ್ರಮ ಹಾಕಿದೆವು. ಒಕ್ಕೂಟದ ಅಧಿಕಾರಿಗಳು ಸಿಬ್ಬಂದಿಯು ಉದ್ಯಮಿಗಳು ಷೋರೂಂಗಳು ಕೈಗಾರಿಕೆಗಳನ್ನು ಸಂಪರ್ಕಿಸಿ ನಂದಿನಿ ಸ್ವೀಟ್ಸ್‌ಗಳ ಬಗೆಗೆ ತಿಳಿಸಿದರು. ಅದರ ಫಲವಾಗಿ ನಿರೀಕ್ಷೆ ಮೀರಿ ನಂದಿನಿ ಸಿಹಿತಿನಿಸುಗಳ ವಹಿವಾಟು ಸಾಧ್ಯವಾಗಿದೆ’ ಎಂದು ಕಲಬುರಗಿ–ಬೀದರ್–ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್‌.ಕೆ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. ‘ಒಕ್ಕೂಟದಿಂದ ಎಮ್ಮೆ ಹಾಲಿಗೆ ರೈತರಿಗೆ ಕೊಡುತ್ತಿರುವ ಗರಿಷ್ಠ ಸಹಾಯಧನದ ಫಲವಾಗಿ ಗುಣಮಟ್ಟದ ಎಮ್ಮೆಹಾಲು ಸಿಗುತ್ತಿದೆ. ಅದರಿಂದ ತುಪ್ಪ ಉತ್ಪಾದನೆಯೂ ಹೆಚ್ಚಿದೆ. 50 ಎಂಎಲ್‌ಗಳ ಬಾಟಲ್‌ ಪ್ಯಾಕೇಜಿಂಗ್‌ ಬಳಿಕ ತುಪ್ಪ ಮಾರಾಟ ವೃದ್ಧಿಸಿದೆ’ ಎಂದರು.
ನಂದಿನಿ ತುಪ್ಪಕ್ಕೂ ವ್ಯಾಪಕ ಬೇಡಿಕೆ
ಕಲಬುರಗಿ–ಬೀದರ್–ಯಾದಗಿರಿ ಹಾಲು ಒಕ್ಕೂಟವು ತುಪ್ಪ ಮಾರಾಟದಲ್ಲೂ ಹೊಸ ಮೈಲಿಗಲ್ಲು ನಿರ್ಮಿಸಿದೆ. ದಸರಾ–ದೀಪಾವಳಿ ಅವಧಿಯಲ್ಲಿ ಬರೋಬ್ಬರಿ 23 ಟನ್‌ಗಳಷ್ಟು ತುಪ್ಪವನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಕ್ಕೂಟವು 13 ಟನ್‌ಗಳಷ್ಟು ತುಪ್ಪ ಮಾರಾಟ ಮಾಡಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ 10 ಟನ್‌ ಅಧಿಕ ತುಪ್ಪವನ್ನು ಮಾರಾಟ ಮಾಡಿದೆ. 2023–24ರ ಏಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ ಒಕ್ಕೂಟದಿಂದ 105 ಟನ್‌ಗಳಷ್ಟು ತುಪ್ಪ ಮಾರಾಟವಾಗಿತ್ತು. 2024–25ನೇ ಸಾಲಿನ ಏಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ 140 ಟನ್‌ಗಳಷ್ಟು ತುಪ್ಪ ಮಾರಾಟವಾಗಿದ್ದು ಶೇ 35ರಷ್ಟು ಪ್ರಗತಿ ಸಾಧಿಸಿದೆ. ‘ಎಮ್ಮೆ ಹಾಲು ಪ್ರತ್ಯೇಕ ಶೇಖರಣೆ ಅದಕ್ಕೆ ಒಕ್ಕೂಟದಿಂದ ಹೆಚ್ಚುವರಿ ಬೆಂಬಲ ಬೆಲೆ ನೀಡುತ್ತಿರುವ ಫಲವಾಗಿ ಉತ್ಕೃಷ್ಟ ಗುಣಮಟ್ಟದ ಎಮ್ಮೆ ಹಾಲು ಯಥೇಚ್ಛವಾಗಿ ಒಕ್ಕೂಟಕ್ಕೆ ಪೂರೈಕೆಯಾಗುತ್ತಿದೆ. ಅದರಿಂದ ಸಹಜವಾಗಿಯೇ ತುಪ್ಪ ಉತ್ಪಾದನೆಯೂ ಏರಿಕೆ ಕಂಡಿದೆ. ಮೊದಲಿನಿಂದಲೂ ನಂದಿನಿ ತುಪ್ಪಕ್ಕೆ ಸಾಕಷ್ಟು ಬೇಡಿಕೆ ಇತ್ತು. ಈ ನಡುವೆ ತಿರುಪತಿ ಲಾಡು ವಿವಾದದ ಬಳಿಕ ನಂದಿನಿ ತುಪ್ಪದ ಗುಣಮಟ್ಟದ ಬಗೆಗಿನ ಜನರಲ್ಲಿ ಭರವಸೆ ಮೂಡಿದ್ದು ಅದರಿಂದ ತುಪ್ಪಕ್ಕೆ ಮತ್ತಷ್ಟು ಬೇಡಿಕೆ ವ್ಯಕ್ತವಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷ ಆರ್‌.ಕೆ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.