ADVERTISEMENT

ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ: ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 16:08 IST
Last Updated 13 ಏಪ್ರಿಲ್ 2024, 16:08 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಕಲಬುರಗಿ: ‘ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಈಡಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದನ್ನು ಖಂಡಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಚಿಂತನೆ ಮಾಡುತ್ತಿದ್ದೇವೆ’ ಎಂದು ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

‘ಕಳೆದ ಮೂರು ವರ್ಷಗಳಿಂದ ಸಮುದಾಯದ ನಾನಾ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ಮಾಡಲಾಗುತ್ತಿದೆ. ಕುದ್ರೋಳಿಯಿಂದ ಬೆಂಗಳೂರುವರೆಗೆ ಹಾಗೂ ಚಿಂಚೋಳಿಯಿಂದ ಕಲಬುರಗಿವರೆಗೆ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಹೋರಾಟದ ವೇಳೆ ಎರಡೂ ಪಕ್ಷಗಳ ನಾಯಕರು ನೀಡಿದ್ದ ಆಶ್ವಾಸನೆಗಳು ಈಗ ಈಡೇರಿಸುತ್ತಿಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಧಿಕಾರಕ್ಕೆ ಬಂದ ಮೇಲೆ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದಾಗಿ ಹೋರಾಟಕ್ಕೆ ಸಹಕಾರ ನೀಡಿದ್ದ ಕಾಂಗ್ರೆಸ್‌, ಈಗ ಯಾವುದೇ ಬೇಡಿಕೆಗಳನ್ನು ಜಾರಿಗೆ ತರುತ್ತಿಲ್ಲ. ಹೀಗಾಗಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಹಾಗೂ ಎಲ್ಲ ತಾಲ್ಲೂಕುಗಳ ಪ್ರತಿನಿಧಿಗಳ, ಸಮುದಾಯದ ಮುಖಂಡರನ್ನು ಕರೆದು ಏಪ್ರಿಲ್ 26 ಅಥವಾ 27ರಂದು ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಚುನಾವಣೆ ಬಹಿಷ್ಕಾರದ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸೇಂದಿ ಇಳಿಸುವ ಕುಲಕಸುಬು ತೆಗೆದುಹಾಕಿದ ನಂತರ ಈಡಿಗ ಸಮುದಾಯದವರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ, ಕುಲಕಸುಬು ಮಾಡಲು ಅನುಮತಿ ನೀಡಬೇಕು. ಇಲ್ಲವೇ ಪ್ರತಿ ಕುಟುಂಬಕ್ಕೆ ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಅದಕ್ಕೆ ಸೂಕ್ತ ಭರವಸೆ ಸಿಕ್ಕಿಲ್ಲ’ ಎಂದರು.

‘ಬಿಜೆಪಿ ಸರ್ಕಾರವು ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಮಗಮ ಸ್ಥಾಪಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಬಜೆಟ್ ಮಂಡಿಸಿದ್ದರೂ ಒಂದು ಬಿಡಿಗಾಸು ಹಣ ನೀಡಿಲ್ಲ. ಈಡಿಗರ ಅಭಿವೃದ್ಧಿಗೆ ನಿಗಮಕ್ಕೆ ₹ 500 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಶಕ್ತಿ ಪೀಠದ ಟ್ರಸ್ಟಿ ಮಹಾದೇವ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಪ್ರಮುಖರಾದ ವೆಂಕಟೇಶ ಗುಂಡಾನೂರು, ರಾಜೇಶ್ ಗುತ್ತೇದಾರ, ನಾಗಯ್ಯ ಗುತ್ತೇದಾರ, ವೆಂಕಟಯ್ಯ ಮುಕ್ತೇದಾರ್, ಶೇಖರ ಗಾರಂಪಳ್ಳಿ, ಮಹೇಶ ಗುತ್ತೇದಾರ, ಸಿದ್ದಲಿಂಗ ಗುತ್ತೇದಾರ, ಮಲ್ಲಯ್ಯ ಗುತ್ತೇದಾರ, ಯಾದಗಿರಿಯ ಬಾಲಾಜಿ ಪೊಲೀಸ್, ಅಂಬಯ್ಯ ಗುತ್ತೇದಾರ, ಜಗದೇವ ಗುತ್ತೇದಾರ, ಭೀಮಯ್ಯ ಗುತ್ತೇದಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.