ಕಲಬುರಗಿ: ಕಲ್ಯಾಣ ಕರ್ನಾಟಕದ ಸರ್ಕಾರಿ ಶಾಲಾ ಮಕ್ಕಳಿಗೆ ಡಿಸೆಂಬರ್ 1ರಿಂದ ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಶುರು ಮಾಡಿದ ಪರಿಣಾಮ ಹಾಜರಾತಿಯಲ್ಲಿ ಏರಿಕೆ ಕಂಡು ಬಂದಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಅಪೌಷ್ಟಿಕ ಮಕ್ಕಳು ಇರುವುದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಂದು ಸಮೀಕ್ಷೆಗಳು ತಿಳಿಸಿದ್ದವು. ಅಲ್ಲದೇ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಡಿಸಿದ ಆಂತರಿಕ ಸಮೀಕ್ಷೆಯಲ್ಲಿ ಬೆಳಿಗ್ಗೆ ಶಾಲೆಗೆ ಬರುವಾಗ ಉಪಾಹಾರ ಮಾಡದೇ ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಿತ್ತು. ಆದ್ದರಿಂದ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಶಾಲಾ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣನ್ನು ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಲಯದ ಹೆಚ್ಚುವರಿ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಡಿ. 1ರಿಂದ ಪ್ರಾಯೋಗಿಕವಾಗಿ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ನೀಡಲು ಸರ್ಕಾರ ಅನುಮೋದನೆ ನೀಡಿತ್ತು.
ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳು ಹಾಗೂ ವಿಜಯಪುರ ಜಿಲ್ಲೆಯಲ್ಲಿ ವಾರಕ್ಕೆ ಮೂರು ದಿನ ಮೊಟ್ಟೆ, ಬಾಳೆಹಣ್ಣು ನೀಡಲಾಗುತ್ತಿದೆ.
ಕಲಬುರಗಿ ಹೊರವಲಯದ ಶಾಲೆಗಳಿಗೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಕಂಡು ಬಂತು.
‘ಕಲಬುರಗಿ ಹೊರವಲಯದ ಜಾಫರಾಬಾದ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 335 ಮಕ್ಕಳು ಪ್ರವೇಶ ಪಡೆದಿದ್ದಾರೆ. ಮೊಟ್ಟೆ ನೀಡುವ ಯೋಜನೆ ಆರಂಭಕ್ಕೂ ಮುನ್ನ 240 ವಿದ್ಯಾರ್ಥಿಗಳು ಬರುತ್ತಿದ್ದರು. ಇದೀಗ 295 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಬಹುತೇಕ ಮಕ್ಕಳು ಕೊಳಚೆ ಪ್ರದೇಶಗಳಾದ ಕೃಷ್ಣಾ ಕಾಲೊನಿ, ಅಂಬೇಡ್ಕರ್ ಆಶ್ರಯ ಕಾಲೊನಿಯಿಂದ ಬರುತ್ತಾರೆ. ಹಾಜರಾತಿಯಲ್ಲಿ ಏರಿಕೆಯಾಗಿದ್ದು ನಮಗೂ ಉತ್ಸಾಹ ತಂದಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಓಗಿ ತಿಳಿಸಿದರು.
ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಮೊಟ್ಟೆ ವಿತರಿಸುತ್ತಿದ್ದ ಜಾಫರಾಬಾದ್ ಸರ್ಕಾರಿ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಮೆಹರುನ್ನೀಸಾ ಬೇಗಂ, ‘292 ಮಕ್ಕಳಲ್ಲಿ 160 ಬಂದರೆ ಹೆಚ್ಚಿತ್ತು. ಇದೀಗ 250ರವರೆಗೂ ಹಾಜರಾತಿ ಇದೆ’ ಎಂದರು.
ಪರ– ವಿರೋಧ ಚರ್ಚೆ: ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ನೀಡುವುದರ ಬಗ್ಗೆ ಪರ– ವಿರೋಧದ ಚರ್ಚೆಗಳು ನಡೆದಿದ್ದು, ಮೊಟ್ಟೆಯ ಬದಲು ಕಾಳು, ಹಣ್ಣು ನೀಡಬೇಕು ಎಂದು ಕೆಲ ಮಠಾಧೀಶರು ಸಲಹೆ ನೀಡಿದ್ದಾರೆ. ಕೆಲ ಸಾಮಾಜಿಕ ಸಂಘಟನೆಗಳ ಮುಖಂಡರು, ಮೊಟ್ಟೆ ಅತಿ ಕಡಿಮೆ ದರದಲ್ಲಿ ದೊರೆಯುವ ಪೌಷ್ಟಿಕ ಆಹಾರವಾಗಿದೆ. ಆದ್ದರಿಂದ ಯೋಜನೆ ನಿಲ್ಲಿಸಬಾರದು ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಬಾಳೆ ಹಣ್ಣಿನ ಬದಲು ಮೊಟ್ಟೆಗೆ ಹೆಚ್ಚು ಬೇಡಿಕೆ ಬರುತ್ತಿದೆ ಎಂದು ಶಾಲೆಯ ಶಿಕ್ಷಕರೊಬ್ಬರು ಮಾಹಿತಿ ನೀಡಿದರು.
14.44 ಲಕ್ಷ ಮಕ್ಕಳಿಗೆ ಪ್ರಯೋಜನ
ಕಲ್ಯಾಣ ಕರ್ನಾಟಕದ ಪ್ರಸ್ತುತ 1ರಿಂದ 8ನೇ ತರಗತಿಯ 14.44 ಲಕ್ಷ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣನ್ನು ನೀಡಲಾಗುತ್ತಿದೆ. ಶೇ 80ರಷ್ಟು ಮಕ್ಕಳು ಮೊಟ್ಟೆಬೇಕು ಎಂದು ಬೇಡಿಕೆ ಇಟ್ಟಿದ್ದು, ಶೇ 20ರಷ್ಟು ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ನಳಿನ್ ಅತುಲ್, ‘ಪ್ರತಿ ತರಗತಿಯಲ್ಲಿ ಬಾಳೆ ಹಣ್ಣು ಬೇಕು ಎಂದಿದ್ದ ನಾಲ್ಕೈದು ಮಕ್ಕಳೂ ಮೊಟ್ಟೆಗೆ ಬೇಡಿಕೆ ಇಡುತ್ತಿರುವ ಬಗ್ಗೆ ಡಿಡಿಪಿಐಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆಯನ್ನು 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಎಸ್‌ಡಿಎಂಸಿ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.