ADVERTISEMENT

ಜೆಸ್ಕಾಂ: ವಿದ್ಯುತ್ ಮಾಪಕಗಳ ಕೊರತೆ

ವಿಳಂಬವಾದ ಟೆಂಡರ್: 45 ದಿನಗಳಿಂದ ಬಾಗಿಲು ಹಾಕಿದ ಔಟ್‌ಲೆಟ್‌ಗಳು!

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 7:05 IST
Last Updated 14 ಜುಲೈ 2023, 7:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ‘ಗೃಹ ಜ್ಯೋತಿ‌’ ಯೋಜನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿರುವ ನಡುವೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ವಿದ್ಯುತ್ ಮಾಪಕಗಳ(ಮೀಟರ್‌) ಕೊರತೆ ಕಾಡುತ್ತಿದೆ.

ಜೆಸ್ಕಾಂನಿಂದ ಮಾನ್ಯತೆ ಪಡೆದ ಎಲ್‌ ಅಂಡ್‌ ಟಿ ತನ್ನ ಔಟ್‌ಲೆಟ್‌ಗಳ ಮೂಲಕ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಿದ್ಯುತ್ ಮಾಪಕಗಳನ್ನು ಪೂರೈಸಬೇಕು. ಆದರೆ, ಕೆಲವು ದಿನಗಳಿಂದ ಔಟ್‌ಲೆಟ್‌ಗಳನ್ನು ಮುಚ್ಚಲಾಗಿದೆ. ಗ್ರಾಹಕರಿಂದ ಅರ್ಜಿ ಮತ್ತು ಮುಂಗಡ ಹಣ ಪಡೆದ ಮಾಪಕಗಳ ಸರಬರಾಜುದಾರರು ನಿತ್ಯದ ಬೇಡಿಕೆ ಪೂರೈಸಲು ಪರದಾಡುತ್ತಿದ್ದಾರೆ.

‘ಜೆಸ್ಕಾಂ ತನ್ನ ಹಣಕಾಸಿನ ಹೊರೆ ತಪ್ಪಿಸಲು ವಿದ್ಯುತ್ ಮಾಪಕಗಳ ತಯಾರಿಕಾ ಕಂಪನಿಗೆ ಎರಡು ವರ್ಷಗಳ ಅವಧಿಗೆ ಪೂರೈಕೆಯ ಟೆಂಡರ್‌ ಕೊಡುತ್ತಿದೆ. ಜೆಸ್ಕಾಂನಲ್ಲಿ ಪರೀಕ್ಷೆಗೆ ಒಳಪಟ್ಟ ಮಾಪಕಗಳನ್ನು ಟೆಂಡರ್ ಪಡೆದ ಕಂಪನಿಯು ತನ್ನ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡುತ್ತದೆ. ಆದರೆ, ಟೆಂಡರ್ ಮುಗಿಯವ ಕೊನೆಯ ಆರು ತಿಂಗಳ ಅವಧಿಯಲ್ಲಿ ನಿರೀಕ್ಷೆಯಷ್ಟು ಮಾಪಕಗಳು ಪೂರೈಕೆ ಆಗುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಮುಬೀನ್ ಅಹಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಳೆದ 45 ದಿನಗಳಿಂದ ಔಟ್‌ಲೆಟ್‌ಗಳು ಬಾಗಿಲು ಹಾಕಿವೆ. ಸಿಂಗಲ್ ಫೇಸ್‌, ತ್ರಿ ಫೇಸ್‌ ಮತ್ತು ವಾಣಿಜ್ಯ ಬಳಕೆಯ ‘ಸಿಟಿ’ ಮೀಟರ್‌ಗಳು ಸಿಗುತ್ತಿಲ್ಲ. ಗ್ರಾಹಕರಿಗೆ ತೊಂದರೆ ಆಗುತ್ತದೆ. ನಮ್ಮ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಜೆಸ್ಕಾಂ ಮುಖ್ಯ ಎಂಜಿನಿಯರ್‌ ಸಂಪರ್ಕಿಸಿದರೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಮೀಟರ್ ಪೂರೈಕ್ಕೆ ನಮ್ಮ ಕೈಯಲ್ಲಿ ಇಲ್ಲ. ವ್ಯವಸ್ಥಾಪಕರನ್ನು ಕೇಳಿ ಎನ್ನುತ್ತಾರೆ. ಮುಂಗಡ ಹಣ ಕೊಟ್ಟ ಗ್ರಾಹಕರು ಮೀಟರ್ ತಂದು ಕೂರಿಸುವಂತೆ ದುಂಬಾಲು ಬಿದ್ದಿದ್ದಾರೆ’ ಎಂದು ಅಲವತ್ತುಕೊಂಡರು.

‘ಕಲಬುರಗಿ ಜಿಲ್ಲೆಗೆ ಪ್ರತಿ ತಿಂಗಳು 3,000ಕ್ಕೂ ಅಧಿಕ ಸಿಂಗಲ್‌ ಫೇಸ್, 150ಕ್ಕೂ ಹೆಚ್ಚು ತ್ರಿ ಫೇಸ್‌ ಹಾಗೂ ಸುಮಾರು 100 ‘ಸಿಟಿ’ ಮೀಟರ್‌ಗಳನ್ನು ಅಳವಡಿಸಲಾಗುತ್ತದೆ. ಗುತ್ತಿಗೆದಾರರು ಸುಮಾರು ಮೂರು ಸಾವಿರ ಗ್ರಾಹಕರಿಂದ ಮುಂಗಡ ಹಣ ಪಡೆದಿದ್ದಾರೆ. ಮಾಪಕಗಳು ಸಿಗದೆ ಜೆಸ್ಕಾಂ ಮತ್ತು ಗ್ರಾಹಕರ ನಡುವೆ ಸಿಲುಕಿ ಒದ್ದಾಡುತ್ತಿದ್ದಾರೆ. ಜೆಸ್ಕಾಂ ವ್ಯಾಪ್ತಿಯ ಬೇರೆ ಜಿಲ್ಲೆಗಳಲ್ಲಿಯೂ ಮೀಟರ್ ಸಿಗುತ್ತಿಲ್ಲ’ ಎಂದರು.

‘ಸಿಂಗಲ್ ಫೇಸ್ ಮೀಟರ್ ಅಳವಡಿಸಿದ ಕಾರಣ ಕೆಲವು ಗೃಹಪ್ರವೇಶ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಮಾಸ್ಟರ್ ಮೀಟರ್ ಇಲ್ಲದ ಹೊಸ ಅಪಾರ್ಟ್‌ಮೆಂಟ್‌ಗಳಿಗೆ ಖರೀದಿದಾರ ನಿವಾಸಿಗಳು ಬರುತ್ತಿಲ್ಲ. ಹೊಸ ವಾಣಿಜ್ಯ ಮಳಿಗೆಗಳು ವ್ಯಾಪಾರ–ವಹಿವಾಟು ಆರಂಭಿಸುತ್ತಿಲ್ಲ. ‘ಸಿಟಿ’ ಮೀಟರ್ ಸಿಗಲಿಲ್ಲವೆಂದು ಡ್ರೈಕ್ಲೀನರ್‌ ಪ್ರಾಂಚೈಸಿ ಒಪ್ಪಂದ ಮುರಿದು ಬಿದ್ದಿದೆ’ ಎಂಬುದು ಗುತ್ತಿಗೆದಾರರೊಬ್ಬರ ಹೇಳಿಕೆ.

ಜೆಸ್ಕಾಂ

‘ಇಲಾಖೆಯ ಅನುಮತಿಗಾಗಿ ಕಾಯುತ್ತಿರುವ ಜೆಸ್ಕಾಂ’

‘ವಿದ್ಯುತ್ ಮಾಪಕಗಳ ಪೂರೈಕೆಯ ಟೆಂಡರ್ ಎಲ್‌ ಅಂಡ್ ಟಿ ಕಂಪನಿಗೆ ನೀಡಲಾಗಿದ್ದು ಇಂಧನ ಇಲಾಖೆಯ ಅಧಿಕೃತ ಅನುಮತಿಗಾಗಿ ಕಾಯುತ್ತಿದ್ದೇವೆ’ ಎಂದು ಜೆಸ್ಕಾಂ ಮುಖ್ಯ ಎಂಜಿನಿಯರ್ ಚಂದ್ರಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ಹಿಂದೆಯೂ ಎಲ್‌ ಅಂಡ್‌ ಟಿ ಕಂಪನಿಗೆ ಟೆಂಡರ್ ಕೊಡಲಾಗಿತ್ತು. ಚುನಾವಣೆ ನೀತಿ ಸಂಹಿತೆ ಬಂದಿದ್ದರಿಂದ ಸ್ವಲ್ಪ ತಡವಾಗಿದೆ. ಎಲ್‌ ಅಂಡ್ ಟಿ ಹೊಸ ಮೀಟರ್‌ಗಳ ವಿನ್ಯಾಸದಲ್ಲಿ ಬದಲಾವಣೆ ಮಾಡಿದೆ. ಇದರಿಂದಲೂ ವಿಳಂಬವಾಗಿದೆ. ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಇಂಧನ ಇಲಾಖೆಯ ಜತೆಗೆ ಮಾತನಾಡಿದ್ದು ಕೆಲವೇ ದಿನಗಳಲ್ಲಿ ಇತ್ಯರ್ಥವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.