ADVERTISEMENT

ಮೌಲ್ಯಯುತ ಶಿಕ್ಷಣಕ್ಕೆ ಒತ್ತು: ಗುರುರಾಜ ಕರಜಗಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 15:45 IST
Last Updated 24 ಡಿಸೆಂಬರ್ 2023, 15:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶವು ವಚನಗಾರರು, ದಾಸರು, ಸೂಫಿಗಳು, ಸಾಹಿತಿಗಳಿಂದ ಕೂಡಿದ್ದ ಶ್ರೀಮಂತ ನಾಡಾಗಿದ್ದು, ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಹೊರಗಿನ ಪ್ರಪಂಚದ ಜ್ಞಾನದ ಕೊರತೆ ಇದೆ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಹೇಳಿದರು.

‘ಈ ಭಾಗದ ಮಕ್ಕಳಿಗೆ ದೂರದ ಧಾರವಾಡ, ಬೆಂಗಳೂರು, ಮಂಗಳೂರಿಗೆ ಹೋಗಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಕೋರ್ಸ್‌ಗಳ ಪ್ರವೇಶಾತಿ ಪರೀಕ್ಷೆಯ ತರಬೇತಿ ಪಡೆಯಲು ಆಗುವುದಿಲ್ಲ. ಇದರ ಕೊರತೆಯನ್ನು ನೀಗಿಸಲು ಪರಿಣಿತ ಉಪನ್ಯಾಸಕರು, ತಂತ್ರಜ್ಞರನ್ನು ಕರೆತಂದು ವೇದಿಕ್ ಇನ್‌ಸ್ಟಿಟ್ಯೂಟ್ ಆಫ್ ಎಕ್ಸ್‌ಲೆನ್ಸ್‌ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ. ಜೊತೆಗೆ ಮೌಲ್ಯಯುತ ಶಿಕ್ಷಣವೂ ಕೊಡಲಾಗುತ್ತಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಐಐಟಿ ಪ್ರವೇಶಕ್ಕೆ ಹೆಚ್ಚುವರಿ ಕೌಶಲ ಬೇಕಾಗುತ್ತದೆ. ಹೀಗಾಗಿ, ಪಿಯು ಪ್ರಥಮ, ದ್ವಿತೀಯ ವರ್ಷ ಸಾಕಾಗುವುದಿಲ್ಲ. ಆದ್ದರಿಂದಲೇ ನಮ್ಮ ಸಂಸ್ಥೆಯಲ್ಲಿ  8, 9 ಮತ್ತು 10ನೇ ತರಗತಿಯವರಿಗೆ ಬುನಾದಿ ತರಬೇತಿ ನೀಡಲಾಗುತ್ತದೆ. ವಿಷಯದೊಂದಿಗೆ ಮಾನಸಿಕ ಸಿದ್ಧತೆ ಮಾಡಲಾಗುತ್ತಿದೆ. ಹೆಚ್ಚಿನ ಯೋಚನಾ ಶಕ್ತಿ ಬೆಳೆಸಲಾಗುತ್ತದೆ. ಡಿಸೆಂಬರ್‌ವರೆಗೆ ತರಬೇತಿ ನೀಡಿ, ನಂತರ ಪರೀಕ್ಷೆಗೆ ಸಿದ್ಧತೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

ವೇದಿಕ್ ಸಂಸ್ಥೆಯು ಜ್ಞಾನ ಪಸರಿಸುವ ಉದ್ದೇಶದೊಂದಿಗೆ ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಬೋಧನೆಯಲ್ಲಿ ತೊಡಗಿದೆ. ನಗರದಲ್ಲಿನ ವೇದಿಕ್ ಸಂಸ್ಥೆಯಲ್ಲಿ ಪ್ರತಿ ವಿಷಯಕ್ಕೆ ಮೂವರು ಉಪನ್ಯಾಸಕರಿದ್ದು, 200 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಬುದ್ಧಿಮತ್ತೆ, ಆರ್ಥಿಕ ಸ್ಥಿತಿ ನೋಡಿಕೊಂಡು ಕೆಲವು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ವಸತಿ ಸಹಿತ ಶಿಕ್ಷಣ ನೀಡಿ, ಮೌಲ್ಯಗಳನ್ನು ಬೆಳೆಸಲಾಗುತ್ತಿದೆ ಎಂದರು.

‘ಶಾಲೆಯಲ್ಲಿ ಪಠ್ಯ ಪುಸ್ತಕ ಬೋಧನೆ ಮಾಡುತ್ತಾರೆ. ಆದರೆ, ವೇದಿಕ್ ಸಂಸ್ಥೆಯಲ್ಲಿ ಬೇರೆ ಬೇರೆ ವಿಷಯಗಳನ್ನು ಬೋಧಿಸುತ್ತಿದ್ದಾರೆ. ಎನ್‌ಸಿಆರ್‌ಟಿ ಮೂಲ ಇರಿಸಿಕೊಂಡು ಬೋಧನೆ ಮಾಡುತ್ತಿದ್ದಾರೆ. ಕೌನ್ಸೆಲಿಂಗ್‌ಗೆ ಬರುತ್ತಾರೆ. ಬುದ್ದಿಗೆ ಕಸರತ್ತು ಕೊಡುವಂತ ಆಟಗಳನ್ನು ಆಡಿಸಲಾಗುತ್ತದೆ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದಿನೇಶ ಕುಲಕರ್ಣಿ, ಸಂತೋಷ ಗೌಡ, ಗಣೇಶ ಹೆಗ್ಗಡೆ, ಮಮತಾ ಪಾಟೀಲ, ಮಂಜುಳಾ ಪಾಟೀಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.