ಚಿಂಚೋಳಿ (ಕಲಬುರಗಿ ಜಿಲ್ಲೆ): ‘ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸೇರಿದ ₹2.77 ಲಕ್ಷ ಕೋಟಿಯಷ್ಟು ಆಸ್ತಿ ಒತ್ತುವರಿಯಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ದಿ. ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ, ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರೂ ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಅನ್ವರ್ ಮಣಿಪ್ಪಾಡಿ ವರದಿಯಲ್ಲಿದೆ’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ವಕ್ಫ್ ಭೂಕಬಳಿಕೆ ವಿರೋಧಿ ಜನಜಾಗೃತಿ ಹೋರಾಟದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
‘ನನ್ನ ಹೇಳಿಕೆಯನ್ನು ವಿರೋಧಿಸಿ ಸಿಎಂ ಇಬ್ರಾಹಿಂ ಅವರು ನನಗೆ ಮಾನಹಾನಿ ನೋಟಿಸ್ ನೀಡಿ, ಕ್ಷಮೆಗೆ ಒತ್ತಾಯಿಸಿದ್ದಾರೆ. ವಕ್ಫ್ ಮಂಡಳಿಯ ಖಬರಸ್ಥಾನದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಿದ ಬಗ್ಗೆ ವರದಿಯಲ್ಲಿನ 60ನೇ ಪುಟ ಓದುವಂತೆ ಪ್ರತ್ಯುತ್ತರ ನೀಡಿದ್ದೇನೆ. ನಾನು ಯಾರಿಗೂ ಹೆದರುವ ಮಗನಲ್ಲ’ ಎಂದು ಹೇಳಿದರು.
ಪ್ರಿಯಾಂಕ್ ಮೆದುಳಿಲ್ಲದ ಗಿರಾಕಿ:
‘ಸಚಿವ ಪ್ರಿಯಾಂಕ್ ಖರ್ಗೆ ಅವರ ಅಜ್ಜಿ ಹಾಗೂ ಅತ್ತೆಯನ್ನು (ತಂದೆಯ ತಂಗಿ) ರಜಾಕಾರರು ಸುಟ್ಟು ಹಾಕಿದ್ದರು. ರಜಾಕಾರರು ಮುಸ್ಲಿಮರಲ್ಲ ಎಂದು ಹೇಳಿಕೆ ನೀಡಿದ ಪ್ರಿಯಾಂಕ್ ಅವರು ಮೆದುಳಿಲ್ಲದ ಗಿರಾಕಿ. ದೇಶದಲ್ಲಿ ಇಂತಹ ಗಿರಾಕಿ ರಾಹುಲ್ ಗಾಂಧಿ ಮಾತ್ರ ಎಂದುಕೊಂಡಿದ್ದೆ. ಅಂತಹ ಗಿರಾಕಿ ಕಲಬುರಗಿಯಲ್ಲೂ ಇದ್ದಾರೆ. ಮತಗಳ ಆಸೆಗಾಗಿ ಈ ಪ್ರಮಾಣದ ಓಲೈಕೆ ಸರಿಯಲ್ಲ’ ಎಂದರು.
‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಹೇಳಿಕೊಂಡು ತಿರುಗುತ್ತಿರುವವರು ಸಂವಿಧಾನವೇ ಓದಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ವಕ್ಫ್ ಮಂಡಳಿ ಕಾಯ್ದೆಯೇ ಇಲ್ಲ. ಈ ಬಗ್ಗೆ ಅವರ್‍ಯಾರೂ ಮಾತನಾಡುವುದಿಲ್ಲ. ವಕ್ಫ್ ಹೆಸರಲ್ಲಿ ದಲಿತರ ಜಮೀನು ಕಿತ್ತುಕೊಂಡಿದ್ದರೂ ಕಾಂಗ್ರೆಸ್ಸಿಗರು ತುಟಿ ಬಿಚ್ಚುವುದಿಲ್ಲ’ ಎಂದು ಹೇಳಿದರು.
‘ದಲಿತರು ಕಾಂಗ್ರೆಸ್‌ನಲ್ಲಿ ಇರಬಾರದು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ, ಇಂದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಕೆಲವರು ಸ್ವಾರ್ಥ ಸಾಧಿಸುತ್ತಿದ್ದಾರೆ. ಅಂಬೇಡ್ಕರ್‌ಗೆ ಎರಡು ಬಾರಿ ಸೋಲಿಸಿದ್ದು ಇದೇ ಕಾಂಗ್ರೆಸ್ಸಿಗರು. ಆದರೆ, ಶಾಮಾಪ್ರಸಾದ್ ಮುಖರ್ಜಿ ಅವರು ರಾಜ್ಯಸಭೆ ನಾಮಕರಣಕ್ಕೆ ಅಂಬೇಡ್ಕರ್‌ಗೆ ಬೆಂಬಲಿಸಿದ್ದರು. ಬಿಜೆಪಿ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸುವ ನಿಜವಾದ ಪಕ್ಷ’ ಎಂದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ ‘ನಮ್ಮದು ಜನ ಜಾಗೃತಿಗಾಗಿಯ ಹೋರಾಟ. ಸಂಸತ್ತಿನ ಜಂಟಿ ಸದನ ಸಮಿತಿಯನ್ನು ಜಗದಂಬಿಕಾ ಪಾಲ್ ನೇತೃತ್ವದಲ್ಲಿ ರಚಿಸಲಾಗಿದೆ. ಅವರ ಸೂಚನೆಯಂತೆ ಈ ಜಾಗೃತಿ ಹಮ್ಮಿಕೊಳ್ಳಲಾಗಿದೆ. ಇದು ಯಾರ ವಿರುದ್ಧದ ಹೋರಾಟವಲ್ಲ’ ಎಂದು ಸಮರ್ಥಿಸಿಕೊಂಡರು.
ಶಾಸಕರಾದ ರಮೇಶ ಜಾರಕಿಹೊಳಿ, ಬಿ.ಪಿ ಹರೀಶ್, ಮುಖಂಡರಾದ ಕುಮಾರ ಬಂಗಾರಪ್ಪ, ಜಿ.ಎಂ ಸಿದ್ದೇಶ್ವರ, ರಾಜಕುಮಾರ ಪಾಟೀಲ ತೇಲ್ಕೂರ, ಎನ್.ಆರ್ ಸಂತೋಷ, ಡಾ.ವಿಕ್ರಮ್ ಪಾಟೀಲ, ಆಕಾಶ ಗುತ್ತೇದಾರ, ಶಿವಶರಣಪ್ಪ ಜಾಪಟ್ಟಿ, ಜಗದೀಶ ಪಾಟೀಲ ರಾಜಾಪುರ, ವೀರಣ್ಣ ಗಂಗಾಣಿ ಸೇರಿ ಹಲವರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಮಹಾಂತೇಶ್ವರ ಮಠಕ್ಕೆ ತೆರಳಿ ಅಹವಾಲು ಆಲಿಸಿದರು. ಸಿದ್ಧಸಿರಿ ಎಥನಾಲ್ ಘಟಕ ಆರಂಭಕ್ಕಾಗಿ ನಡೆಯುತ್ತಿರುವ ಧರಣಿ ಸ್ಥಳಕ್ಕೂ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.