ಕಲಬುರಗಿ: ವೈದ್ಯಕೀಯ ಕ್ಷೇತ್ರವು ತುರ್ತು ಸೇವಾ ಕಾರ್ಯವಾಗಿದ್ದು, ಅಗತ್ಯ ಸಂದರ್ಭದಲ್ಲಿ ಮುಂದೆ ಬಂದು ಸಾರ್ವಜನಿಕ ಸೇವೆ ಮಾಡಬೇಕು. ನಿರಂತರ ನಿಗಾ ವಹಿಸಬೇಕಾದ ಕ್ಷೇತ್ರವಾಗಿದೆ. ಪೊಲೀಸ್ ಇಲಾಖೆಯಂತೆ ಹಗಲು, ರಾತ್ರಿ ಎನ್ನದೇ ನಿರಂತರ ಸೇವೆ ಸಲ್ಲಿಸಬೇಕಾಗುತ್ತದೆ ಎಂದು ಕಲಬುರಗಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ಅಭಿಪ್ರಾಯಪಟ್ಟರು.
ನಗರದ ಇಎಸ್ಐಸಿ ವೈದ್ಯಕೀಯ ಮಹಾವಿದ್ಯಾಲಯದ ನಾಲ್ಕನೇ ವರ್ಷದ ಪದವಿ ದಿನಾಚರಣೆಗೆ ಭಾನುವಾರ ಚಾಲನೆ ನೀಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ನಾನು ಐಪಿಎಸ್ ಅಧಿಕಾರಿಯಾಗಿ ಏನಾದರೂ ಸಾಧಿಸಿದ್ದರೆ ಅದಕ್ಕೆ ಮುಖ್ಯ ಕಾರಣ ವೈದ್ಯಕೀಯ ಶಿಕ್ಷಣವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯಕೀಯ ತರಬೇತಿ ಜತೆ, ವಿವಿಧ ಕ್ಷೇತ್ರದಲ್ಲಿನ ವಿಷಯಗಳ ಕುರಿತು ಕಲಿಯುವುದು ಮುಖ್ಯವಾಗಿದೆ. ವೈದ್ಯಕೀಯ ಕ್ಷೇತ್ರದ ನೈತಿಕ ಅಂಶಗಳನ್ನು ತಮ್ಮ ವೈದ್ಯಕೀಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
‘ವೈದ್ಯರು ಚಿಕಿತ್ಸೆ ನೀಡುವ ಸಮಯದಲ್ಲಿ ರೋಗಿಯ ಸಂಬಂಧಿಕರ ಜತೆ ಸಂಪರ್ಕಿಸುವುದು ಅಗತ್ಯ. ಆದರೆ, ಇಂದಿನ ದಿನಗಳಲ್ಲಿ ರೋಗಿಯ ಹಾಗೂ ಅವರ ಸಂಬಧಿಕರ ಜತೆಯಲ್ಲಿ ಸಂವಹನ ನಡೆಸುವುದೇ ಸವಾಲಾಗಿದೆ. ಸೂಕ್ತ ರೋಗಕ್ಕೆ ಸೂಕ್ತ ಚಿಕಿತ್ಸೆ ಮುಖ್ಯ’ ಎಂದರು.
ಪ್ರತಿಜ್ಞಾವಿಧಿ ಬೋಧಿಸಿದ ಇಎಸ್ಐಸಿ ವೈದ್ಯಕೀಯ ಕಾಲೇಜಿನ ಡೀನ್ ಇವಾನ್ ಲೋಬೊ, ‘ವಿದ್ಯಾರ್ಥಿಗಳ ಇಂದಿನ ಸಾಧನೆ ಹಿಂದೆ ಅವರ ತಂದೆ ತಾಯಿಯ ಅಪಾರ ಪ್ರೋತ್ಸಾಹ, ಬೆಂಬಲ ಹಾಗೂ ಪರಿಶ್ರಮ ಇದೆ’ ಎಂದರು.
ವೈದ್ಯ ಶಿಕ್ಷಣ ಪೂರೈಸಿದ ಸೊಹೆತ್, ಪವನ ಬೀದರ್ ತಮ್ಮ ಅನಿಸಿಕೆ ಹಂಚಿಕೊಂಡರು.
ಮಕ್ಕಳ ಚಿಕಿತ್ಸಾ ವಿಭಾಗದ ಹಿರಿಯ ವೈದ್ಯ ಡಾ. ವೀರಭದ್ರಪ್ಪ ಹರಸಣಗಿ, ಇಎಸ್ಐಸಿ ದಂತ ವೈದ್ಯ ವಿಭಾಗದ ಡೀನ್ ಡಾ. ಎಂ. ನಾಗರಾಜ, ಡೀನ್ ಕೆ.ಪಿ. ಪದ್ಮಜಾ, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ಐ. ಅಮೃತಾ ಸ್ವಾತಿ, ಡಾ. ಅನಿಲ್ ದೊಡ್ಡಮನಿ ಇದ್ದರು.
*
ವಿದ್ಯಾರ್ಥಿಗಳು ಯಶಸ್ವಿ ವೈದ್ಯರಾಗಲು ರೋಗಿಯ ಸಮಸ್ಯೆ ಅರಿತು, ವೃತ್ತಿಪರತೆ, ಬದ್ಧತೆಯಿಂದ ರೋಗಿಗೆ ಚಿಕಿತ್ಸೆ ನೀಡಬೇಕು. ರೋಗಿಗೆ ಸೂಕ್ಷ್ಮ ಮಾಹಿತಿ ನೀಡುವ ಮೂಲಕ ಭರವಸೆ ಮೂಡಿಸಬೇಕು.
-ಡಾ. ಪಿ.ಎಸ್. ಶಂಕರ್,ಹಿರಿಯ ವೈದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.