ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಸುಧಾರಣೆಗೆ ಗುರುರಾಜ ಕರಜಗಿ ನೇತೃತ್ವದಲ್ಲಿ ಐದು ಜನರ ತಜ್ಞರ ಸಮಿತಿ ರಚಿಸಲಾಗಿದ್ದು, ಅದು ಅಲ್ಪ ಹಾಗೂ ದೀರ್ಘಾವಧಿಯ ಯೋಜನೆಗಳನ್ನು ರೂಪಿಸಲಿದೆ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಭಾಗದ ಜಿಲ್ಲೆಗಳ ಪ್ರದರ್ಶನ ತೀರಾ ಕಳಪೆಯಾಗಿದೆ. ಅದನ್ನು ಉತ್ತಮಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಈ ಭಾಗದ ಶೈಕ್ಷಣಿಕ ಬೆಳವಣಿಗೆಗೆ ಒತ್ತು ನೀಡುತ್ತಿದ್ದೇವೆ. ಕೆಕೆಆರ್‌ಡಿಬಿಯಿಂದ ಶಿಕ್ಷಣ ಕ್ಷೇತ್ರಕ್ಕೆ ₹1,250 ಕೋಟಿ ಅನುದಾನ ಮೀಸಲಿಡಲಾಗಿದೆ. 2023–24, 2024–25 ಅನ್ನು ಶೈಕ್ಷಣಿಕ ವರ್ಷ ಎಂದು ಘೋಷಿಸಿದ್ದೇವೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕು ಸ್ತಂಭಗಳಲ್ಲಿ ಮಾಧ್ಯಮವೂ ಒಂದು. ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆಯೇಷಾ ಖಾನಂ ನಮ್ಮ ತಂದೆ ಕಾಲದಿಂದಲೂ ಪರಿಚಿತರು. ಅವರು ನಮ್ಮ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಚಾರ. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿರುವುದು ಸಂತಸ ತಂದಿದೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ‘ಬಹುತೇಕರಿಗೆ ನಾನು ಗುಲಬರ್ಗಾದವಳು ಎಂದು ಗೊತ್ತಿರಲಿಲ್ಲ. ಹಿಂದಿ ಚಾನೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾಗ ದೆಹಲಿಯವಳು ಎಂದುಕೊಳ್ಳುತ್ತಿದ್ದರು. ಕಲಬುರಗಿ ನನ್ನ ಗುರುತು. ತವರಿನ ಗೌರವ ಭಾವುಕಳನ್ನಾಗಿ ಮಾಡಿದೆ. ನಿಮ್ಮ ಆತ್ಮೀಯ ಆತಿಥ್ಯ ನನ್ನ ಹೃದಯ ಮುಟ್ಟಿದೆ. ನನ್ನ ತಾಯಿ ಕಲಬುರಗಿ ಭಾಷೆ ಹಾಗೂ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದರು. ಎಲ್ಲಿ ಹೋದರೂ ಈ ನೆಲ ಜೀವನದ ಭಾಗವಾಗಿರುತ್ತದೆ’ ಎಂದು ಹೇಳಿದರು.
‘ಧರ್ಮಸಿಂಗ್ ಅವರು ಸಿಎಂ ಆಗಿದ್ದಾಗ ನನ್ನನ್ನು ‘ಗುಲಬರ್ಗಾ ಕಿ ಬಚ್ಚಿ’ ಎಂದು ಕರೆಯುತ್ತಿದ್ದರು. ಸಿದ್ದರಾಮಯ್ಯನವರೂ ಅದೇ ರೀತಿ ಹೇಳುತ್ತಾರೆ. ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಬೇಕು ಎನ್ನುವ ಕಾರಣಕ್ಕೆ ನಿನ್ನನ್ನು ನೇಮಕ ಮಾಡಲಾಗಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಇದು ನನ್ನ ಜವಾಬ್ದಾರಿ ಹೆಚ್ಚಿಸಿದೆ’ ಎಂದರು.
ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಈ ಭಾಗದಲ್ಲಿ ಅವಕಾಶಗಳಿವೆ. ಅದಕ್ಕೆ ಆದ್ಯತೆ ನೀಡಬೇಕಾದ ಅಗತ್ಯ ಇದೆ. ಕೆಕೆಆರ್‌ಡಿಬಿಯಿಂದ ನೆರವು ಸಿಕ್ಕರೆ ಪತ್ರಿಕೋದ್ಯಮ ಕೌಶಲ ಕಾರ್ಯಾಗಾರ ಆಯೋಜಿಸಲಾಗುವುದು. ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ಎಲೆಮರೆಯ ಕಾಯಿಯಂತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದರು.
ಇಂದು ಎಲ್ಲರೂ ಪತ್ರಕರ್ತರು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಸರ್ಕಾರ ನೀತಿ ರೂಪಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ‘ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳನ್ನು ನೀಡುವ ಸಂದರ್ಭದಲ್ಲಿ ಈ ಭಾಗದವರನ್ನು ಪರಿಗಣಿಸಬೇಕು ಎಂದು ಪತ್ರಕರ್ತರು ಮನವಿ ಮಾಡಿದ್ದರು. ಕಳೆದ ಬಾರಿ ಈ ಭಾಗಕ್ಕೆ ಹೆಚ್ಚು ಪ್ರಶಸ್ತಿಗಳು ಬಂದಿದ್ದವು. ಈ ಭಾಗದವರನ್ನೇ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಆ ಬರ ನೀಗಿಸಲಾಗಿದೆ’ ಎಂದರು.
ಮಾನವ ಕಂಪ್ಯೂಟರ್ ಎಂದು ಖ್ಯಾತರಾದ ಸಿದ್ದು ಎಸ್.ಲೌಟೆ ಉಪನ್ಯಾಸ ನೀಡಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವರಂಜನ್ ಸತ್ಯಂಪೇಟೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವಂತಗಾಂವ, ಸಂಪಾದಕರ ಸಂಘದ ಅಧ್ಯಕ್ಷ ಸಿದ್ದರಾಮಪ್ಪ ಮಾಲಿ ಬಿರಾದಾರ ಹಾಜರಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಾಬುರಾವ ಕೋಬಾಳ ಪ್ರಾರ್ಥಿಸಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಸುರೇಶ ಡಿ. ಬಡಿಗೇರ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಭೀಮಾಶಂಕರ ಫಿರೋಜಾಬಾದ್ ವಂದಿಸಿದರು.
ಯಡ್ರಾಮಿಯಲ್ಲಿ ಕಲಬುರಗಿ ಜಿಲ್ಲಾ ಪತ್ರಕರ್ತರ ಸಮ್ಮೇಳನ ಹಾಗೂ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನ ಆಯೋಜಿಸಲಾಗುತ್ತಿದ್ದು ಡಾ.ಅಜಯ್ ಸಿಂಗ್ ಅವರು ಸಹಕಾರ ನೀಡಬೇಕುಬಾಬುರಾವ ಯಡ್ರಾಮಿ ಜಿಲ್ಲಾಧ್ಯಕ್ಷ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.