ಚಿಂಚೋಳಿ: ತಾಲ್ಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಜಲಪಾತಗಳು ಮೈದುಂಬಿಕೊಂಡು ಪ್ರವಾಸಿಗರನ್ನು ಸೆಳೆಯುತ್ತಿವೆ.
ಕರ್ನಾಟಕ ತೆಲಂಗಾಣ ಗಡಿಯಲ್ಲಿ ರಾಜ್ಯದ ಗಡಿಗ್ರಾಮದ ಸಂಗಾಪುರ-ಒಂಟಿಚಿಂತಾ ಮಧ್ಯೆ ಬರುವ ಎತ್ತಿಪೋತೆ ಜಲಪಾತದಲ್ಲಿ ಸುವರ್ಣ ವರ್ಣದ ನೀರು ಧುಮ್ಮಿಕ್ಕಿ ಹರಿದು ಪ್ರಕೃತಿ ಆರಾಧಕರು ಮನ ಸೋಲುವಂತೆ ಮಾಡುತ್ತಿದೆ.
ತೆಲಂಗಾಣದಿಂದ ಹರಿದು ಬರುವ ಮಳೆ ನೀರು ಬೃಹತ್ ಕಲ್ಲು ಬಂಡೆಗಳ ಮೇಲಿನಿಂದ ಭೋರ್ಗರೆಯುತ್ತಾ ರಭಸವಾಗಿ ಬೀಳುವ ದೃಶ್ಯ ಮನ ಸೆಳೆಯುತ್ತದೆ.
ಒಂದೆಡೆ ಹಸಿರು ಕಾಡಿನ ಆಹ್ಲಾದತೆ, ದೃಷ್ಟಿಯುದ್ದಕ್ಕೂ ಗೋಚರಿಸುವ ಹಸಿರು ಸಿರಿ ಮಳೆಯಿಂದ ನೆಲವೆಲ್ಲಾ ಹಸಿರುಹೊತ್ತು ಮಿನುಗುತ್ತಿದ್ದರೆ, ಜಲಧಾರೆಗಳು ಸುಂದರ ಪ್ರಕೃತಿಯ ಮಧ್ಯೆ ತನ್ನ ರಮಣೀಯತೆ ಇಮ್ಮಡಿಸಿಕೊಂಡು ಪ್ರವಾಸಿಗರ ಮನಸ್ಸಿಗೆ ಪುಳಕ ಉಂಟು ಮಾಡುತ್ತವೆ.
ಚಿಂಚೋಳಿಯಿಂದ ಕುಂಚಾವರಂ ಮಾರ್ಗವಾಗಿ ಒಂಟಿಚಿಂತಾ ತಲುಪಿ ಗೋಪುನಾಯಕ ತಾಂಡಾ ಕ್ರಾಸ್‌ನಿಂದ ಸಂಗಾಪುರ ಮಾರ್ಗಮಧ್ಯೆ ತೊರೆಯಲ್ಲಿ ಎತ್ತಿಪೋತೆ ಜಲಪಾತ ನೋಡಲು ಸಿಗುತ್ತದೆ. ಪ್ರವಾಸಿಗರು ಕುಡಿಯುವ ನೀರು, ತಿನ್ನಲು ತಿಂಡಿ ತಮ್ಮ ಜತೆಗೆ ತರಬೇಕು ಇಲ್ಲಿ ಏನೂ ಸಿಗುವುದಿಲ್ಲ.
ಮಾಣಿಕಪುರ ಜಲಪಾತ: ವನ್ಯಜೀವಿ ಧಾಮದ ಸೆರಗಿಗೆ ಅಂಟಿಕೊಂಡಂತಿರುವ ಜನವಸತಿ ರಹಿತ ಮಾಣಿಕಪುರ ಗ್ರಾಮದ ಏದುಸಿರಿನಿಂದ ಹರಿಯುವ ರಾಚೇನಹಳ್ಳಿ ನಾಲಾ ಸರಣಿ ಜಲಪಾತಗಳ ಆಗರವಾಗಿದೆ. ಕುಸ್ರಂಪಳ್ಳಿ ಗ್ರಾಮದಿಂದ ಉತ್ತರಕ್ಕೆ 500 ಮೀಟರ್ ಕ್ರಮಿಸಿ ನಂತರ ಬಲಕ್ಕೆ ಕಚ್ಚಾರಸ್ತೆಯಲ್ಲಿ ತೆರಳಿದ ಮೇಲೆ 2.5 ಕಿ.ಮೀ ಕಾಲ್ನಡಿಗೆಯಲ್ಲಿ ಸಂಚರಿಸಿದರೆ ಈ ಜಲಪಾತ ಸಿಗುತ್ತದೆ.
ಜಲಪಾತದಲ್ಲಿ ಕೆಲವು ಪಡ್ಡೆ ಯುವಕರು ಮದ್ಯ ಸೇವನೆ ಮತ್ತು ಜೂಜಾಟದಂತಹ ಕೃತ್ಯ ನಡೆಸುತ್ತಿರುವುದರಿಂದ ವಾಹನಗಳು ಹೋಗದಂತೆ ರಸ್ತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಗೆದಿದ್ದಾರೆ. ಹೀಗಾಗಿ ಈ ಜಲಪಾತ ನೋಡಬೇಕಾದರೆ ಪ್ರವಾಸಿಗರು ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ.
ಸುತ್ತಲೂ ವನ್ಯಜೀವಿ ಧಾಮದ ಕಾಡು, ಅರೆಬರೆ ಕೆಸರಿನ ಕಚ್ಚಾರಸ್ತೆಯಲ್ಲಿ ನಡೆದು ಕಾಡಿನ ಸವಿ ಸವಿಯುತ್ತಾ ಹೆಜ್ಜೆಹಾಕಿದರೆ ನೀರಿನ ಭೋರ್ಗರೆಯುವ ಸದ್ದು ಕಿವಿಗಪ್ಪಳಿಸುತ್ತದೆ.
ಇಲ್ಲಿ ಮೂರು ಕಡೆ ಜಲಪಾತ ನೋಡಲು ಸಿಗುತ್ತವೆ. ಆದರೆ ಇವು ನೋಡಬೇಕಾದರೆ ಎಚ್ಚರಿಕೆ ವಹಿಸುವುದು ಅತಿ ಅಗತ್ಯ. ಇಲ್ಲಿಯೂ ಕೂಡ ತಿನ್ನಲು ತಿಂಡಿ, ತಿನಿಸು, ಕುಡಿಯಲು ನೀರು ಸಿಗುವುದಿಲ್ಲ. ಪ್ರವಾಸಿಗರು ಜತೆಗೆ ತರುವುದು ಉತ್ತಮ.
ಎತ್ತಿಪೊತೆ ಮತ್ತು ಮಾಣಿಕಪುರ ಜಲಪಾತಗಳಿಗೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ. ಮಾಣಿಕಪುರ ಜಲಪಾತ ಅರಣ್ಯದೊಳಗಡೆ ಬರುವುದರಿಂದ ಕುಸ್ರಂಪಳ್ಳಿಯಿಂದ ನಡೆದುಕೊಂಡು ಹೋದರೆ ಚಾರಣದ ಅನುಭೂತಿ ಸಿಗಲಿದೆದೀಪಕನಾಗ್ ಪುಣ್ಯಶೆಟ್ಟಿ ಮಾಜಿ ಅಧ್ಯಕ್ಷ ಜಿ.ಪಂ.ಕಲಬುರಗಿ
ಎತ್ತಿಪೋತೆ ಜಲಪಾತ ಕರ್ನಾಟಕ ತೆಲಂಗಾಣ ಗಡಿಯಲ್ಲಿರುವುದರಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. ಎರಡೂ ರಾಜ್ಯಗಳು ಒಗ್ಗೂಡಿ ಖಾಸಗಿ ಸಹಭಾಗಿತ್ವದಲ್ಲಿ ಸಿಸಿ ರಸ್ತೆ ಪಾರ್ಕಿಂಗ್ ಮತ್ತು ಪರಗೋಲ ಹಾಗೂ ತೂಗು ಸೇತುವೆ ನಿರ್ಮಿಸಬೇಕುರಘುನಾಥ ಚವ್ಹಾಣ ಮುಖಂಡ ಒಂಟಿಚಿಂತಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.