ADVERTISEMENT

ಕಲಬುರಗಿ‌: ಬ್ಯಾಂಕ್ ನೋಟಿಸ್‌ಗೆ ಹೆದರಿ ಪೆಟ್ರೊಲ್ ಸುರಿದುಕೊಂಡು ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 4:52 IST
Last Updated 27 ಸೆಪ್ಟೆಂಬರ್ 2024, 4:52 IST
<div class="paragraphs"><p>ರೈತ ಪಾಂಡಪ್ಪ</p></div>

ರೈತ ಪಾಂಡಪ್ಪ

   

ಚಿಂಚೋಳಿ (ಕಲಬುರಗಿ‌ ಜಿಲ್ಲೆ): ಸಾಲ ತೀರಿಸುವಂತೆ ಬ್ಯಾಂಕಿನ ಅಧಿಕಾರಿಗಳು ವಕೀಲರ ಮೂಲಕ ಕಳುಹಿಸಿದ ನೋಟಿಸ್‌ಗೆ ಹೆದರಿದ ರೈತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಪೊತಂಗಲನಲ್ಲಿ ಗುರುವಾರ ನಡೆದಿದೆ.

ಗ್ರಾಮದ ಪಾಂಡಪ್ಪ ತಿಪ್ಪಣ್ಣ ಕೋರವನ್ (45) ಆತ್ಮಹತ್ಯೆಗೆ ಶರಣಾದ ರೈತ. 3 ಎಕರೆ ಜಮೀನು ಹೊಂದಿರುವ ಪಾಂಡಪ್ಪ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿಡಗುಂದಾ ಶಾಖೆಯಲ್ಲಿ ₹ 1 ಲಕ್ಷ ಸಾಲ‌ ಪಡೆದಿದ್ದರು ಎಂದು ಮುಖಂಡ ವಿಶ್ವನಾಥರಡ್ಡಿ ಪೊತಂಗಲ ತಿಳಿಸಿದ್ದಾರೆ.

ADVERTISEMENT

ಸಾಲ ತೀರಿಸುವಂತೆ ಬ್ಯಾಂಕ್ ಅಧಿಕಾರಿಗಳು ವಕೀಲರ ಮೂಲಕ ಎರಡು‌ ಬಾರಿ‌ ನೋಟಿಸ್ ನೀಡಿದ್ದರು. ಆಗ ಎತ್ತುಗಳನ್ನು ಮಾರಾಟ ಮಾಡಿ‌ ಸಾಲ ತೀರಿಸಲು‌ ಮುಂದಾದಾಗ ಪತ್ನಿ ವಿರೋಧಿಸಿದ್ದು, ಇದರಿಂದ ದಾರಿ‌ ಕಾಣದೇ ಪೆಟ್ರೋಲ್ ಸುರಿದುಕೊಂಡು‌ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ಯಾಂಕ್ ಸಾಲದ ಜತೆಗೆ ಖಾಸಗಿ ಸಾಲವೂ ಇತ್ತು.

ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಹೊಲದಲ್ಲಿ‌ ಮಳೆಯಿಂದ ತೊಗರಿ‌ ಬೆಳೆ ಹಾಳಾಗಿದೆ. ಇನ್ನೊಂದೆಡೆ ಸಾಲ ತೀರಿಸಲು ಬ್ಯಾಂಕಿನವರು ನೋಟಿಸ್ ನೀಡಿದ್ದರಿಂದ ಕಂಗಾಲಾದ ಪಾಂಡಪ್ಪ‌ 3 ದಿನಗಳಿಂದ ಖಿನ್ನತೆ ಅನುಭವಿಸಿ ಕೊನೆಗೆ ಪೆಟ್ರೊಲ್ ಸುರಿದುಕೊಂಡು ಬೆಂಕಿ‌ ಹಚ್ಚಿಕೊಂಡಿದ್ದಾರೆ.

ಶೇ 70-80 ಸುಟ್ಟ ಗಾಯಗಳಿಂದ ನರಳುತ್ತಿದ್ದ ಅವರನ್ನು ನಿಡಗುಂದಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಸೇಡಂ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲು‌ ಮಾಡಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಕಲಬುರಗಿಗೆ ತೆರಳಿದಾಗ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ನಿಧನರಾದರು. ತಡರಾತ್ರಿ 11ಕ್ಕೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಸುಲೇಪೇಟ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಮರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.