ADVERTISEMENT

ಜೀವ ಹಿಂಡುವ ‘ರಾತ್ರಿ ಕರೆಂಟ್‌’: ಹಗಲಲ್ಲೇ ವಿದ್ಯುತ್‌ ನೀಡುವಂತೆ ರೈತರ ಆಗ್ರಹ

ಬೇಡಿಕೆಗೆ ಕಿವುಡಾದ ಎಸ್ಕಾಂಗಳು

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 0:05 IST
Last Updated 6 ಜೂನ್ 2024, 0:05 IST
ಕಲಬುರಗಿಯ ರಾಜಾಪುರ ಬಳಿ ರಾತ್ರಿ ಹೊತ್ತು ಬೆಳೆಗೆ ನೀರು ಹಾಯಿಸುತ್ತಿರುವ ರೈತ –ಪ್ರಜಾವಾಣಿ ಚಿತ್ರ 
ಕಲಬುರಗಿಯ ರಾಜಾಪುರ ಬಳಿ ರಾತ್ರಿ ಹೊತ್ತು ಬೆಳೆಗೆ ನೀರು ಹಾಯಿಸುತ್ತಿರುವ ರೈತ –ಪ್ರಜಾವಾಣಿ ಚಿತ್ರ    

ಕಲಬುರಗಿ: ಕತ್ತಲಲ್ಲಿ ಎಲ್ಲರಿಗೂ ಬೆಳಕು ಬೇಕೆ ಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ, ವ್ಯಾಪಾರ–ವಹಿವಾಟಿಗೆ, ಜನರ ಸಂಚಾರಕ್ಕೆ ರಾತ್ರಿ ಬೆಳಕಿನ ಅವಶ್ಯಕತೆ ಇದೆ. ಹೀಗಾಗಿ ಪ್ರತಿ ಊರು ಕೂಡ ರಾತ್ರಿ ಝಗಮಗಿಸುತ್ತಿರುತ್ತವೆ. ಆದರೆ, ರಾಜ್ಯದ ರೈತರು ಮಾತ್ರ ‘ಕತ್ತಲಿರುವಾಗ ಕರೆಂಟ್‌ ಬೇಡ’ ಎನ್ನುತ್ತಿದ್ದಾರೆ.

ರೈತರಿಗೆ ಆಗಿರುವ ಕಹಿ ಅನುಭವಗಳೇ ಅವರ ಈ ವಿಚಿತ್ರ ಬೇಡಿಕೆಗೆ ಕಾರಣವಾಗಿವೆ. ಅಂತಹ ಹಲವು ಘಟನೆಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಘಟನೆ 1: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ರಸ್ತೆ ಬದಿ ಕಟ್ಟಿದ್ದ ಎರಡು ಎತ್ತುಗಳು ಕಟ್ಟಿದ್ದಲ್ಲಿಯೇ ಇದ್ದವು. ಮಳೆಗಾಲ ಶುರುವಾಯಿತು ಹೊಲ ಹದ ಮಾಡೋಕೆ ಏಕೆ ಹೋಗಿಲ್ಲ ಎಂದು ‘ಪ್ರಜಾವಾಣಿ’ ಮಾತಿಗಳಿದಾಗ, ಎತ್ತುಗಳ ಮಾಲೀಕನ ಅಣ್ಣನ ಮಗ ಬಸವರಾಜ ವಾಲೀಕಾರ ಭಾವುಕನಾದ. ‘ಇವು ನಮ್ಮ ಚಿಕ್ಕಪ್ಪ ಚಂದಪ್ಪರ ಎತ್ತುಗಳು. ಮೂರು ತಿಂಗಳ ಹಿಂದೆ ಹೊಲದಲ್ಲಿ ನೀರು ಹರಿಸುವಾಗ ನಮ್ಮ ಚಿಕ್ಕಪ್ಪ ವಿದ್ಯುತ್‌ ಶಾಕ್‌ಗೆ ಬಲಿಯಾದ’ ಎಂದು ಕಣ್ಣೀರಿಟ್ಟ. ‌

ADVERTISEMENT

‘ಆಗಿನಿಂದ ನಾವೇ ಎತ್ತುಗಳಿಗೆ ನೀರು ಕುಡಿಸೋದು, ಮೇವು ಹಾಕೋದು ಮಾಡುತ್ತೇವೆ. ನಮ್ಮ ಚಿಕ್ಕಪ್ಪನ ಮಕ್ಕಳೆಲ್ಲಾ ಚಿಕ್ಕವರಿದ್ದಾರೆ. ಅವರ ಮನೆಯಲ್ಲಿ ಗಳೆ ಹೊಡೆಯೋರಿಲ್ಲ’ ಎಂದು ಕಣ್ಣೀರು ಒರೆಸಿಕೊಂಡ.

ನಸುಕಿನಲ್ಲಿ ಕೃಷ್ಣಾ ನದಿ ತಟಕ್ಕೆ ಮೋಟಾರ್‌ ಚಾಲೂ ಮಾಡಲು ಹೋಗಿದ್ದ ರೈತ ಚಂದಪ್ಪ ಕಸದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಮೃತಪಟ್ಟಿದ್ದರು. 

ಘಟನೆ 2: ರೈತರ ಬೆಳೆಗೆ ಬೇಸಿಗೆಯಲ್ಲಿಯೇ ಹೆಚ್ಚು ನೀರು ಬೇಕು. ಆದರೆ ಆ ಸಮಯದಲ್ಲಿಯೇ ಹಾವುಗಳೂ ಹೊರಬರುವುದೂ ಹೆಚ್ಚು. ಯಾದಗಿರಿ ಜಿಲ್ಲೆ ಬಳಿಚಕ್ರ ತಾಂಡಾದಲ್ಲಿ ತಮ್ಮ ಜಮೀನಿನಲ್ಲಿ ರಾತ್ರಿ ಶೇಂಗಾ ಬೆಳೆಗೆ ನೀರುಣಿಸುತ್ತಿದ್ದ ಯುವರೈತ ಬಂಗಾರಪ್ಪ ಚವ್ಹಾಣ ಹಾವು ಕಡಿದು ಮೃತಪಟ್ಟರು. ಬಂಗಾರಪ್ಪಗೂ ನಾಲ್ವರು ಚಿಕ್ಕ, ಚಿಕ್ಕ ಮಕ್ಕಳಿದ್ದಾರೆ. ಅವರ ಮನೆಯಲ್ಲೀಗ ಕೃಷಿಯೇ ನಿಂತುಹೋಗಿದೆ.

ಇವೆಲ್ಲಾ ರಾತ್ರಿ ಕರೆಂಟ್‌ನಿಂದ ಆಗುತ್ತಿರುವ ಅನಾಹುತಗಳ ಕೆಲ ಉದಾಹರಣೆಗಳಷ್ಟೇ. ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರಿನಿಂದ ಹಿಡಿದು ಉತ್ತರದ ಬೀದರ್‌ವರೆಗೆ ರಾಜ್ಯದಲ್ಲಿ ತಿಂಗಳಿಗೊಬ್ಬ ರೈತರಾದರೂ ರಾತ್ರಿ ಕರೆಂಟ್‌ ಶಾಕ್‌ಗೆ, ಇಲ್ಲವೇ ಹಾವು ಕಡಿದು ಮೃತಪಟ್ಟ ಘಟನೆಗಳು ಜರುಗುತ್ತಲೇ ಇವೆ. 

ಸರ್ಕಾರ ಕೃಷಿ ಚಟುವಟಿಕೆಗಳಿಗೆ ನಿತ್ಯ 7 ತಾಸು ತ್ರಿಫೇಸ್‌ ವಿದ್ಯುತ್‌ ನೀಡುತ್ತಿದೆ. ಕೆಲವೆಡೆ ರಾತ್ರಿ ತ್ರಿಫೇಸ್‌ ನೀಡಿದರೆ, ಇನ್ನು ಕೆಲವೆಡೆ ಹಗಲಿನಲ್ಲಿ ನೀಡುತ್ತಿದೆ. ಮತ್ತೊಂದೆಡೆ ಹಗಲಲ್ಲಿ ನಾಲ್ಕು ತಾಸು, ರಾತ್ರಿ ಮೂರು ತಾಸು ವಿದ್ಯುತ್‌ ನೀಡುತ್ತಿದೆ. ವಾರಕ್ಕೊಮ್ಮೆ ಈ ಪದ್ಧತಿಯೂ ಬದಲಾವಣೆಯಾಗುತ್ತದೆ. ಪ್ರಸ್ತುತ ಕೃಷ್ಣಾ ನದಿ ತಟದಲ್ಲಿ ಒಂದು ವಾರ ಬೆಳಿಗ್ಗೆ 11ಕ್ಕೆ ವಿದ್ಯುತ್‌ ನೀಡಿದರೆ, ಮತ್ತೊಂದು ವಾರ ರಾತ್ರಿ 4 ಗಂಟೆಗೆ ವಿದ್ಯುತ್‌ ನೀಡುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ.

ರೈತರಿಗೆ ನಿರಂತರವಾಗಿ ಹಗಲಿನಲ್ಲೇ ವಿದ್ಯುತ್‌ ನೀಡಿ ಎಂದರೆ, ‘ಲೋಡ್‌ ಶೆಡ್ಡಿಂಗ್‌ ತಪ್ಪಿಸುವ ಉದ್ದೇಶದಿಂದ ಪ್ರತಿ ವಲಯದಲ್ಲೂ ತ್ರಿಫೇಸ್‌ ವಿದ್ಯುತ್‌ ಸರಬರಾಜಿನ ಅವಧಿಯಲ್ಲಿ ಬದಲಾವಣೆ ಮಾಡಿರುತ್ತೇವೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಅಧಿಕಾರಿ.

ಬಯಲು ಸೀಮೆಯ ರೈತರು ನದಿಯಿಂದ ಸುಮಾರು 5ರಿಂದ 6 ಕಿಲೋಮೀಟರ್‌ ದೂರದವರೆಗೆ ಪೈಪ್‌ಲೈನ್‌ ಹಾಕಿಕೊಂಡು ನೀರಾವರಿ ಮಾಡಿಕೊಂಡಿರುತ್ತಾರೆ. ರಾತ್ರಿ ವೇಳೆ ನದಿ ದಂಡೆಗೆ ಹೋಗಿ, ಮೋಟಾರ್‌ ಸ್ಟಾರ್ಟ್ ಮಾಡಿ ಅಲ್ಲಿಂದ ಐದಾರು ಕಿಲೋಮೀಟರ್‌ ದೂರದ ಹೊಲಗಳಿಗೆ ಕತ್ತಲಲ್ಲೇ ನಡೆದು ಹೋಗಬೇಕು. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತಿದೆ ಎನ್ನುತ್ತಾರೆ ಕಲಬುರಗಿ ಜಿಲ್ಲೆಯ ರಾಜಾಪುರದ ರೈತ ರವಿ ಬಿರಾದಾರ.

ಬಡಗಲಪುರ ನಾಗೇಂದ್ರ
ಹಗಲು ರೈತರಿಗೆ ರಾತ್ರಿ ಕಾರ್ಖಾನೆಗಳಿಗೆ ವಿದ್ಯುತ್‌ ನೀಡಿ ಎಂದು ನಾವು ಒತ್ತಾಯಿಸುತ್ತಲೇ ಇದ್ದೇವೆ. ವಿದ್ಯುತ್‌ ನಿಗಮದವರು ಅವೈಜ್ಞಾನಿಕವಾಗಿ ವಿದ್ಯುತ್ ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಹೋರಾಟ ರೂಪಿಸಲಾಗುವುದು
ಬಡಗಲಪುರ ನಾಗೇಂದ್ರ ರಾಜ್ಯ ರೈತ ಸಂಘದ ಅಧ್ಯಕ್ಷ

ರಾತ್ರಿ ಕರೆಂಟ್‌ನ ಸಮಸ್ಯೆಗಳೇನು?

* ರಾತ್ರಿ ವೇಳೆ ತುಂಡಾದ ವಿದ್ಯುತ್‌ ತಂತಿ ತುಳಿದು ರೈತರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ

* ಜಮೀನಿನಲ್ಲಿ ನೀರು ಎತ್ತ ಹರಿಯುತ್ತಿದೆ ಎಂಬುದೂ ಗೊತ್ತಾಗುವುದಿಲ್ಲ. ರಾತ್ರಿ ವೇಳೆ ಕಾಡುಪ್ರಾಣಿಗಳ ದಾಳಿ ವಿಷಜಂತುಗಳ ಉಪಟಳ ಇರುತ್ತದೆ

* ರೈತರಿಗೆ ಬೇಸಿಗೆಯಲ್ಲಿಯೇ ನೀರಿನ ಅಗತ್ಯವಿರುವುದರಿಂದ ಆ ವೇಳೆ ಹಾವುಗಳ ಕಾಟ ಕೂಡ ಹೆಚ್ಚಿರುತ್ತದೆ. ಹಾವುಗಳು ಕಚ್ಚಿಯೂ ಎಷ್ಟೋ ರೈತರು ಪ್ರಾಣ ಬಿಟ್ಟಿದ್ದಾರೆ

* ರಾತ್ರಿ ವೇಳೆ ಮೊಸಳೆಗಳೂ ದಂಡೆಗೆ ಬಂದಿರುತ್ತವೆ. ರೈತ ನೀರಿಗಿಳಿದಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.