ADVERTISEMENT

ಚಿಂಚೋಳಿ | ಕಾಳುಕಟ್ಟದ ಮೆಕ್ಕೆಜೋಳ: ನಕಲಿ ಬೀಜ ಶಂಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2024, 5:15 IST
Last Updated 20 ಮೇ 2024, 5:15 IST
ಚಿಂಚೋಳಿಯ ಜಮೀನಿನಲ್ಲಿ ಮೆಕ್ಕೆ ಜೋಳ ಬೆಳೆ ಅರೆಬರೆ ತೆನೆ ಬಿಟ್ಟಿದ್ದಲ್ಲದೇ ತೆನೆಯಲ್ಲಿ ಕಾಳು ಕಟ್ಟದೇ ನಷ್ಟ ಉಂಟಾಗಿರುವುದು
ಚಿಂಚೋಳಿಯ ಜಮೀನಿನಲ್ಲಿ ಮೆಕ್ಕೆ ಜೋಳ ಬೆಳೆ ಅರೆಬರೆ ತೆನೆ ಬಿಟ್ಟಿದ್ದಲ್ಲದೇ ತೆನೆಯಲ್ಲಿ ಕಾಳು ಕಟ್ಟದೇ ನಷ್ಟ ಉಂಟಾಗಿರುವುದು   

ಚಿಂಚೋಳಿ: ಪಟ್ಟಣದ ರೈತ ನಾಗಪ್ಪ ಪೂಜಾರಿ ಯಲಮಡಗಿ ಅವರು ಗುತ್ತಿಗೆ (ಬೇರೆಯವರ ಜಮೀನು ಕಡತಿ ಹಾಕಿಕೊಂಡ) ಜಮೀನಿನಲ್ಲಿ ಮೆಕ್ಕೆಜೋಳ ಬೇಸಾಯ ಮಾಡಿದ್ದು, ಈವರೆಗೆ ಬೆಳೆಯಲ್ಲಿ ಕಾಳಕಟ್ಟಿಲ್ಲ. ಕಳಪೆ ಬಿತ್ತನೆಬೀಜದಿಂದಾಗಿ ನಷ್ಟಕ್ಕೊಳಗಾಗಿದ್ದಾರೆ.

ಬೀದರ್ ಜಿಲ್ಲೆಯ ಹುಮ್ನಾಬಾದನ ಬಿತ್ತನೆಬೀಜ ಮಾರಾಟಗಾರರಿಂದ 4 ಕೆ.ಜಿ. ಗಾತ್ರದ 5 ಪ್ಯಾಕೆಟ್‌ ಸೇರಿದಂತೆ ಒಟ್ಟು 20 ಕೆ.ಜಿ. ಮೆಕ್ಕೆಜೋಳದ ಬಿತ್ತನೆಬೀಜ ಖರೀದಿಸಿ, ಕೂಲಿ ಕಾರ್ಮಿಕರಿಂದ ಬಿತ್ತನೆ ಮಾಡಿದ್ದಾರೆ.‌ ಆರಂಭದಲ್ಲಿ ಉತ್ತಮವಾಗಿಯೇ ಬೆಳೆ ಬಂದಿದ್ದು, ತೆನೆಬಿಟ್ಟಿಲ್ಲ. ಅಲ್ಲಲ್ಲಿ ತೆನೆ ಬಿಟ್ಟರೂ ತೆನೆಯಲ್ಲಿ ಕಾಳು ಕಟ್ಟಿಲ್ಲ. ಇದಕ್ಕೆ ನಕಲಿ ಬೀಜವೇ ಕಾರಣ ಎಂಬ ಶಂಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.

ಎಕರೆವಾರು ಹಣ ನೀಡಿ, ಬೇಸಾಯಕ್ಕಾಗಿ 4 ಎಕರೆ ಜಮೀನನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಪಡೆದಿದ್ದ ರೈತ ನಾಗಪ್ಪ ಅವರು, ಕಳಪೆ ಬಿತ್ತನೆ ಬೀಜದಿಂದಾಗಿ ಮೆಕ್ಕೆಜೋಳ ಬೇಸಾಯ ಮಾಡಿ ಕೈಸುಟ್ಟುಕೊಂಡಿದ್ದಾರೆ.

ADVERTISEMENT

ಎಕರೆಗೆ 8 ರಿಂದ 9 ಕ್ವಿಂಟಲ್ ಇಳುವರಿ ಬರುತ್ತದೆ ಎಂದು ಬೀಜ ಮಾರಾಟಗಾರರು ತಿಳಿಸಿದ್ದರು. ಆದರೆ ಈಗ ಎಕರೆ ಒಂದು ಕ್ವಿಂಟಲ್‌ ಕೂಡ ಇಳುವರಿ ಬಾರದಂತಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ಒಂದೆಡೆ ಮಾಲೀಕನಿಗೆ ಹಣ ನೀಡಿದ್ದು ಮತ್ತು ಬೀಜ ಖರೀದಿ ಜಮೀನಿನಲ್ಲಿ ಬೆಳೆಯ ನಿರ್ವಹಣೆ ಮತ್ತು ಕಾವಲು ಸೇರಿದಂತೆ ವಿವಿಧ ಕೆಲಸಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಈ ಮೂಲಕ ದುಪ್ಪಟ್ಟು ನಷ್ಟ ಅನುಭವಿಸುವಂತಾಗಿದೆ.

ಮೂಲತಃ ಯಲಮಾಮಡಿ ಗ್ರಾದ ನಿವಾಸಿಯಾದ ನಾಗಪ್ಪ ಪೂಜಾರಿ ಅವರು, ಕೆಳದಂಡೆ ಮುಲ್ಲಾಮಾಯಿ ನಾಗರಾಳ ಜಲಾಶಯದ ಮುಳುಗಡೆ ಸಂತ್ರಸ್ತರಾಗಿದ್ದು, ಗ್ರಾಮ ಮುಳುಗಡೆಯಾದ ನಂತರ ಚಂದಾಪುರಕ್ಕೆ ಬಂದು ನೆಲೆಸಿದ್ದಾರೆ.

ಜಮೀನು ಕಡತಿ ಹಾಕಿಕೊಂಡು ಕೃಷಿ ನಡೆಸುತ್ತಿದ್ದಾರೆ. ಅಣವಾರ ರಸ್ತೆಯಲ್ಲಿರುವ ಜಮೀನಿನಲ್ಲಿ ಮೆಕ್ಕೆಜೋಳ ಬೇಸಾಯ ಮಾಡಿದ್ದ ಅವರು, ನಕಲಿ ಬಿತ್ತನೆ ಬೀಜದಿಂದ ಹಾನಿ ಅನುಭವಿಸಿದ್ದಾರೆ. ಇದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಒಂದೆಡೆ ಬರಗಾಲ ಇನ್ನೊಂದೆಡೆ ನಕಲಿ ಬೀಜ ರೈತರನ್ನು ಹಿಂಡಿ ಹಿಪ್ಪೆ ಮಾಡಿದೆ. ನಷ್ಟ ಅನುಭವಿಸಿದ ರೈತನಿಗೆ ಬೀಜದ ಕಂಪನಿ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಮೂಲಸಿವಾಸಿ ಸಂಘಟನೆ ಗೋಪಾಲ ಗಾರಂಪಳ್ಳಿ ಒತ್ತಾಯಿಸಿದ್ದಾರೆ.

ತೆನೆ ಬಿಡದಿರುವುದಕ್ಕೆ ಮತ್ತು ಕಾಳು ಕಟ್ಟದಿರುವುದಕ್ಕೆ ಅಧಿಕ ತಾಪಮಾನ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈಗಾಗಲೇ ರೈತರು ದೂರು ಸಲ್ಲಿಸಿದ್ದು, ಜಂಟಿ ನಿರ್ದೇಶಕರಿಗೂ ತಿಳಿಸಿದ್ದೇನೆ. ಶೀಘ್ರ ವಿಜ್ಞಾನಿಗಳು ರೈತನ ಹೊಲಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.

ಚಿಂಚೋಳಿಯ ಜಮೀನಿನಲ್ಲಿ ಮೆಕ್ಕೆ ಜೋಳ ಬೆಳೆ ಅರೆಬರೆ ತೆನೆ ಬಿಟ್ಟಿದ್ದಲ್ಲದೇ ತೆನೆಯಲ್ಲಿ ಕಾಳು ಕಟ್ಟದೇ ನಷ್ಟ ಉಂಟಾಗಿರುವುದು
ಮೆಕ್ಕೆಜೋಳ ತೆನೆ ಬಿಡದಿರುವುದು ಕಾಯಿ ಕಟ್ಟದಿರುವುದಕ್ಕೆ ನಕಲಿ ಬೀಜ ಕಾರಣವಾಗಿದೆ. ಕೃಷಿ ಅಧಿಕಾರಿಗಳು ಗಮನ ಹರಿಸಿ ಬೀಜ ಮಾರಾಟಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ರೈತನಿಗಾಗಿರುವ ನಷ್ಟಕ್ಕೆ ಪರಿಹಾರ ಒದಗಿಸಬೇಕು
ಗೋಪಾಲ ಎಂ. ಪೂಜಾರಿ ಮೂಲನಿವಾಸಿ ಸಂಘಟನೆ ಹೋರಾಟಗಾರ ಗಾರಂಪಳ್ಳಿ
ಕಳಪೆ ಮೆಕ್ಕೆಜೋಳ ಬೀಜದಿಂದಾಗಿ ನನಗೆ ಒಂದುವರೆ ಲಕ್ಷದಷ್ಟಯ ನಷ್ಟ ಉಂಟಾಗಿದೆ. ಈ ಕುರಿತು ಕೃಷಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕು
ನಾಗಪ್ಪ ಪೂಜಾರಿ ನಷ್ಟಕ್ಕೊಳಗಾದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.