ADVERTISEMENT

ಚಿಂಚೋಳಿ: ಸಿದ್ಧಸಿರಿ ಪರ ಮಾರ್ದನಿಸಿದ ಕೂಗು

ಚಿಂಚೋಳಿ: ಮತ್ತೆ ಬೀದಿಗಿಳಿದ ರೈತರು, ಮಠಾಧೀಶರ ಸಾಥ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 4:25 IST
Last Updated 5 ನವೆಂಬರ್ 2024, 4:25 IST
ಚಿಂಚೋಳಿಯಲ್ಲಿ ಸಿದ್ಧಸಿರಿ ಎಥನಾಲ್ ಘಟಕ ಕಾರ್ಯಾರಂಭಕ್ಕೆ ಒತಾಯಿಸಿ ಕಾಳಗಿ-ಚಿಂಚೋಳಿ ತಾಲ್ಲೂಕಿನ ಮಠಾಧೀಶರ ನೇತೃತ್ವದಲ್ಲಿ ರೈತರು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಸಲ್ಲಿಸಿದರು
ಚಿಂಚೋಳಿಯಲ್ಲಿ ಸಿದ್ಧಸಿರಿ ಎಥನಾಲ್ ಘಟಕ ಕಾರ್ಯಾರಂಭಕ್ಕೆ ಒತಾಯಿಸಿ ಕಾಳಗಿ-ಚಿಂಚೋಳಿ ತಾಲ್ಲೂಕಿನ ಮಠಾಧೀಶರ ನೇತೃತ್ವದಲ್ಲಿ ರೈತರು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಸಲ್ಲಿಸಿದರು   

ಚಿಂಚೋಳಿ: ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮದಿಂದ ಬಂದ್ ಆಗಿರುವ ಪಟ್ಟಣ ಹೊರವಲಯದ ಸಿದ್ಧಸಿರಿ ಎಥನಾಲ್‌ ಮತ್ತು ಪವರ್ ಘಟಕದ ಪರ ತಾಲ್ಲೂಕಿನಲ್ಲಿ ಮತ್ತೆ ಕಬ್ಬು ಬೆಳೆಗಾರರ ಕೂಗು ಮಾರ್ದನಿಸಿದೆ.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ರೈತ ಪರ ಸಂಘಟನೆಗಳು, ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಬರುವ ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು.

‘ಕರ್ನಾಟಕ ಹೈಕೋರ್ಟ್‌ ಸಿದ್ಧಸಿರಿ ಕಂಪನಿ ಕಾರ್ಯಾರಂಭಕ್ಕೆ ಸಮ್ಮತಿ ಪತ್ರ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದ್ದಾಗಿಯೂ ಮಂಡಳಿ ಅದನ್ನು ಕಾರ್ಯರೂಪಕ್ಕೆ ತರದೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ತಾಲ್ಲೂಕಿನ ಕಬ್ಬು ಬೆಳೆಗಾರರ ಗಾಯದ ಮೇಲೆ ಉಪ್ಪು ಸವರಿದೆ. ಹೀಗಾಗಿ ತಕ್ಷಣ ಮಂಡಳಿ ತನ್ನ ಮೇಲ್ಮನವಿ ವಾಪಸ್ ಪಡೆದು ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡಬೇಕು’ ಎಂದು ಅಖಿಲ ಭಾರತ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ಶಿವಶರಣಪ್ಪ ಜಾಪಟ್ಟಿ ಒತ್ತಾಯಿಸಿದರು.

ADVERTISEMENT

ಸೂಗೂರಿನ ಚನ್ನರುದ್ರಮುನಿ ಶಿವಾಚಾರ್ಯರು, ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಚಿಮ್ಮಾಈದಲಾಯಿಯ ವಿಜಯ ಮಹಾಂತ ಶಿವಾಚಾರ್ಯರು, ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಶಿವಾಚಾರ್ಯರು ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಜಗದೀಶ ಪಾಟೀಲ, ಕಾಳಗಿ ತಾಲ್ಲೂಕು ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ ಮೊದಲಾದವರು ಮಾತನಾಡಿದರು.

ರಟಕಲ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು, ಹೊಸಳ್ಳಿಯ ಸಿದ್ಧಲಿಂಗ ಶಿವಾಚಾರ್ಯರು, ಐನಾಪುರದ ಸಿದ್ಧಲಿಂಗ ದೇವರು, ಶಿವಯೋಗಿ ಶರಣರು, ಸುಲೇಪೇಟದ ಪಂಪಾಪತಿ ದೇವರು, ಮುಖಂಡರಾದ ಗೌತಮ ಪಾಟೀಲ, ಆರ್.ಆರ್.ಪಾಟೀಲ, ನಂದಿಕುಮಾರ ಪಾಟೀಲ, ದಿವಾಕರರಾವ್ ಜಹಾಗೀರದಾರ, ವಿಜಯಕುಮಾರ ಚೇಂಗಟಿ, ಸಂತೋಷ ಗಡಂತಿ, ತರುಣಶೇಖರ ಕಂಚನಾಳ, ಕೆ.ಎಂ.ಬಾರಿ, ಚಿತ್ರಶೇಖರ ಪಾಟೀಲ, ನಾರಾಯಣ ನಾಟಿಕಾರ, ಶಶಿಕಾಂತ ಆಡಕಿ, ವಿಜಯಕುಮಾರ ಶಂಕರ, ಸಂಜೀವ ಕೊಂಡ, ಎಲ್.ವೆಂಕಟರಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.

ರೈತರ ಪ್ರತಿಭಟನೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವ್ಯಾಪಕ ಬಂದೋಬಸ್ತ್‌ ಕಲ್ಪಿಸಿದ್ದರು. ಕೆಕೆಆರ್‌ಟಿಸಿ ಬಸ್‌ಗಳು ಚಿಮ್ಮಾಈದಲಾಯಿ ಕ್ರಾಸ್‌ನಿಂದ ಕಲಬುರಗಿಗೆ ವಾಪಸ್ ಮರಳಿದರೆ, ಬೀದರ್ ಮಾರ್ಗದ ಬಸ್ಸುಗಳು ಎಂದಿನಂತೆ ಸಂಚರಿಸಿದವು. ಕೆಲಹೊತ್ತು ತಾಂಡೂರು, ಕುಂಚಾವರಂ ಮಾರ್ಗದ ಬಸ್ ಸಂಚಾರಕ್ಕೆ ತೊಡಕುಂಟಾಗಿತ್ತು.

ಚಿಂಚೋಳಿಯಲ್ಲಿ ವಿವಿಧ ರೈತ ಪರ ಸಂಘಟನೆಗಳು ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ರೈತರು ಸೋಮವಾರ ಪಾಲ್ಗೊಂಡಿದ್ದರು
ಚಿಂಚೋಳಿ ಮತ್ತು ಸುತ್ತಲಿನ ತಾಲ್ಲೂಕುಗಳ ರೈತರ ಪಾಲಿಗೆ ವರವಾಗಿರುವ ಸಿದ್ಧಸಿರಿ ಎಥನಾಲ್ ಘಟಕಕ್ಕೆ ಬೀಗ ಹಾಕಿದ್ದು ಸರಿಯಲ್ಲ. ಸರ್ಕಾರ ಕಂಪನಿಗೆ ಷರತ್ತುಬದ್ಧ ಅನುಮತಿ ನೀಡಿ ರೈತರ ನೆರವಿಗೆ ಧಾವಿಸಬೇಕು
ಚನ್ನರುದ್ರಮುನಿ ಶಿವಾಚಾರ್ಯರು ರುದ್ರಮುನೇಶ್ವರ ಸಂಸ್ಥಾನ ಮಠ ಸೂಗೂರು(ಕೆ)
ಕಂಪನಿ ಇಲ್ಲದೇ ಕಂಗಾಲಾದ ರೈತರಿಗೆ ಸಿದ್ಧಸಿರಿ ಸ್ಥಾಪನೆ ಸಮಾಧಾನ ತಂದಿತ್ತು. ಈಗ ಮತ್ತೆ ಬೀಗ ಹಾಕಿದ್ದು ನೋಡಿದರೆ ತಾಲ್ಲೂಕಿನ ಕಬ್ಬು ಬೆಳೆಗಾರರನ್ನು ಸರ್ಕಾರ ಬಾಣಲೆಯಿಂದ ಬೆಂಕಿಗೆ ಹಾಕಿದೆ
ರಾಮರಾವ್ ಆರ್. ಪಾಟೀಲ ಉಪಾಧ್ಯಕ್ಷ ಅ.ಭಾ.ರೈತ ಹಿತರಕ್ಷಣಾ ಸಂಘ ಚಿಂಚೋಳಿ

ಧರಣಿಗೆ ಅನುಮತಿ ನಿರಾಕರಣೆ

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ರೈತ ಸಂಘಟನೆಗಳಿಗೆ ತಹಶೀಲ್ದಾರ್‌ ಮತ್ತು ಪುರಸಭೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ‘ಬಸವೇಶ್ವರ ವೃತ್ತವು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯ ಸಂಗಮತಾಣವಾಗಿದೆ. ಅಪಘಾತದ ಅಪಾಯವಿರುವುದರಿಂದ ಬಸವೇಶ್ವರ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಅನುಮತಿ ನೀಡಲು ಬರುವುದಿಲ್ಲ’ ಎಂದು ತಹಶೀಲ್ದಾರ ಸುಬ್ಬಣ್ಣ ಜಮಖಂಡಿ ಮತ್ತು ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಪ್ರತ್ಯೇಕವಾಗಿ ಹಿಂಬರಹದ ಮೂಲಕ ತಿಳಿಸಿದ್ದಾರೆ’ ಎಂದು ಅಖಿಲ ಭಾರತ ರೈತ ಹಿತರಕ್ಷಣಾ ಸಂಘದ ಪ್ರಧಾನ ಕಾರ್ಯದರ್ಶಿ ನಂದಿಕುಮಾರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.