ADVERTISEMENT

ರೈತರ ಕಬ್ಬಿನ ಬಾಕಿ ಬಿಲ್ ಕೊಡಿಸಲು ಆಗ್ರಹ: ರಸ್ತೆ ಸಂಚಾರ ತಡೆದು ಪ್ರತಿಭಟನೆ

ಎಫ್‌ಆರ್‌ಪಿ ಪ್ರಕಾರ ಬಾಕಿ ಹಣ ಬಿಡುಗಡೆಗೆ ಕಬ್ಬು ಬೆಳೆಗಾರರ ಆಗ್ರಹ; ಸಂಜೆ ತನಕ ನಡೆದ ಧರಣಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 15:44 IST
Last Updated 8 ಆಗಸ್ಟ್ 2024, 15:44 IST
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಗುರುವಾರ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು                 –ಪ್ರಜಾವಾಣಿ ಚಿತ್ರ
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಗುರುವಾರ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು                 –ಪ್ರಜಾವಾಣಿ ಚಿತ್ರ   

ಕಲಬುರಗಿ: ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ಪ್ರಕಾರ ಕೊಡಬೇಕಿದ್ದ ಹಣವನ್ನು ಕೊಡದೇ ಉಳಿಸಿಕೊಂಡ ರೈತರ ಕಬ್ಬಿನ ಬಾಕಿ ಬಿಲ್ ಕೊಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ‌ಕಚೇರಿ ಎದುರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ರೈತರು, ರೈತ ಮುಖಂಡರ ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತನಕ ಸಾಗಿತು. ಅಲ್ಲಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ‘ರೈತರಿಗೆ ಅನ್ಯಾಯ, ಮೋಸ ಮಾಡುತ್ತಿರುವ ಸಕ್ಕರೆ‌ ಕಾರ್ಖಾನೆ‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ‌ಕಚೇರಿ ಆವರಣ ಪ್ರವೇಶಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಪೊಲೀಸರು ಸೂಚಿಸಿದರೂ, ಇದನ್ನು ನಿರಾಕರಿಸಿದ ಪ್ರತಿಭಟನಕಾರರು, ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ತಡೆದರು. ಬಳಿಕ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು. ಇದರಿಂದ ತಿಮ್ಮಾಪುರ ವೃತ್ತದಿಂದ ಜಗತ್ ವೃತ್ತದ ಕಡೆಗೆ ಹೋಗುವ ಹಾಗೂ ಬರುವ ಎರಡೂ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ವಾಹನಗಳ ಸವಾರರು ಪರದಾಡಿದರು. ಅಧಿಕಾರಿಗಳು, ಪೊಲೀಸರು ಮನವೊಲಿಸಿದರೂ ರೈತರು ಜಗ್ಗಲಿಲ್ಲ.

ADVERTISEMENT

‘ರೈತರು ಸುಮ್ಮನೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲ್ಲ. ಅನ್ಯಾಯವಾದಗಲೇ ರಸ್ತೆಗೆ ಇಳಿಯುತ್ತಾರೆ. ನಿದ್ದೆಯಲ್ಲಿರುವ ಸರ್ಕಾರ, ಜಿಲ್ಲಾಡಳಿತ ಎಚ್ಚರಿಸಲು ನಾವೆಲ್ಲ ಬೀದಿಗೆ ಇಳಿದಿದ್ದೇವೆ. ನ್ಯಾಯ ಸಿಗುವ ತನಕ ಹೋರಾಟ ಬಿಡುವ‌ ಪ್ರಶ್ನೆಯೇ ಇಲ್ಲ’ ಎಂದು ರೈತ ಮುಖಂಡರು ಗುಡುಗಿದರು.

15 ನಿಮಿಷಗಳ ಬಳಿಕ ಪೊಲೀಸರು‌ ಪ್ರತಿಭಟನಕಾರರ ಮನವೊಲಿಸಿ ಒಂದು‌ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಕೆಲ ಹೊತ್ತಿನ ಬಳಿಕ ರೈತರ ಪ್ರತಿಭಟನೆ ಜಿಲ್ಲಾಡಳಿತ ಭವನದ ಆವರಣಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಉಪವಿಭಾಗಾಧಿಕಾರಿ ಹಾಗೂ ಆಹಾರ ಇಲಾಖೆ ಉಪನಿರ್ದೇಶಕರು ಬಂದರೂ, ‘ಜಿಲ್ಲಾಧಿಕಾರಿಯೇ ಬಂದು ಮನವಿ ಸ್ವೀಕರಿಸಬೇಕು’ ಎಂದು ಪ್ರತಿಭಟನನಿರತರು ಪಟ್ಟು ಹಿಡಿದರು. ಮಧ್ಯಾಹ್ನ ಪ್ರತಿಭಟನಾ ಸ್ಥಳದಲ್ಲೇ ಊಟ ಮಾಡಿದರು. ಬಳಿಕ  ಸಂಜೆ ತನಕ ಪ್ರತಿಭಟನೆ ಮುಂದುವರಿಸಿದರು. ಅಂತಿಮವಾಗಿ ಸಂಜೆ ವೇಳೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಮನವಿ ಸಲ್ಲಿಸಿದ ಮುಖಂಡರು, ಪ್ರತಿಭಟನೆ ಕೈಬಿಟ್ಟರು.

ಈ ನಡುವೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ‘ರೇಣುಕಾ ಶುಗರ್ಸ್‌ ಹಾಗೂ ಕೆಪಿಆರ್‌ ಸಕ್ಕರೆ ಕಾರ್ಖಾನೆ ಪ್ರತಿ ಟನ್‌ ಕಬ್ಬಿಗೆ ಎಫ್‌ಆರ್‌ಪಿ ಪ್ರಕಾರ ಒಟ್ಟು ₹29 ಕೋಟಿಗಳಷ್ಟು ಹಣವನ್ನು ರೈತರಿಗೆ ನೀಡಬೇಕಿದ್ದು, ಈತನಕ ನೀಡಿಲ್ಲ. ಸಕ್ಕರೆ ಆಯುಕ್ತರು ಹೇಳಿದರೂ ಕಾರ್ಖಾನೆಗಳು ಬಾಕಿ ಕೊಟ್ಟಿಲ್ಲ. ಅದನ್ನು ರೈತರಿಗೆ ಕೊಡಿಸಲು ಜಿಲ್ಲಾಧಿಕಾರಿಗಳೂ ಪ್ರಯತ್ನಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಸಂಘದ ಅಫಜಲಪುರ ತಾಲ್ಲೂಕು ಅಧ್ಯಕ್ಷ ಸಿದ್ದರಾಮ ದಣ್ಣೂರ, ಕಾರ್ಯದರ್ಶಿ ಅಶೋಕ ಹೂಗಾರ ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸಿದ್ದಪ್ಪ ಗುಡ್ಡೆದ ಘತ್ತರಗಾ, ಶ್ರೀಶೈಲ ಅಮಣಿ, ಶ್ರೀಕಾಂತ ಸಿಂಗೆ, ಅರ್ಜುನ ಕುಂಬಾರ ಕೋಳೂರ, ಗೌಡಪ್ಪಗೌಡ ಪಾಟೀಲ, ರುಕ್ಕುಮಸಾಬ್‌ ಮುಲ್ಲಾ , ಮಹಾಲಿಂಗ ಮಾಲಿಂಗಪುರ, ಶಂಕ್ರಪ್ಪ ಮ್ಯಾಕೇರಿ, ದೇಸಾಯಿ ಕಲ್ಲೂರ, ರಾಯಪ್ಪ ಮ್ಯಾಕೇರಿ, ಜಟ್ಟೆಪ್ಪ ಉಕಲಿ, ಶರಣಪ್ಪ ಮ್ಯಾಕೇರಿ, ಜಗ್ಗು ತೇಲ್ಕೂರ, ಈರಪ್ಪ ನೆಲೊಗಿ, ಭೀಮಣ್ಣ ಕೊಳ್ಳೂರ, ದಿಲೀಪ್‌ ನಾಗೂರೆ, ಸಿದ್ದಪ್ಪ ಕಲಗೇಟಿ, ಜಾಫರಸಾಬ್‌ ಮಿರಿಯಾಣ ಸೇರಿದಂತೆ ಹಲವು ಪಾಲ್ಗೊಂಡಿದ್ದರು.

ಜಿಲ್ಲಾಡಳಿತದ ವಿರುದ್ಧ ಆಕ್ರೋಶ

‘ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ರೈತರು ಬೆಳೆಯುವ ಅನ್ನ ತಿನ್ನುವ ಸರ್ಕಾರಗಳು ಅನ್ನದಾತರ ಬೆನ್ನಿಗೆ ಚೂರಿ ಹಾಕುತ್ತಿವೆ. ಸರ್ಕಾರವೇ ನಿಗದಿಪಡಿಸಿದ ಎಫ್‌ಆರ್‌ಪಿಯನ್ನು ರೈತರಿಗೆ ಕೊಡಲು ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಇಷ್ಟಾದರೂ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ. ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಕಾರ್ಖಾನೆಗಳು ಎಫ್‌ಆರ್‌ಪಿ ಪ್ರಕಾರ ಬಾಕಿ ಉಳಿಸಿಕೊಂಡ ಹಣ ರೈತರಿಗೆ ಕೊಡಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಪತ್ರ ಬರೆದಿದ್ದಾರೆ. ಅದಕ್ಕೂ ಜಿಲ್ಲಾಡಳಿತ ಕಿಮ್ಮತ್ತು ಕೊಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.