ಆಳಂದ: ‘ರಾಜ್ಯ ಸರ್ಕಾರ ಒಂದು ವರ್ಗವನ್ನು ಸಮಾಧಾನ ಪಡಿಸಲು ಸರ್ಕಾರಿ ಭೂಮಿಗಳನ್ನು ವಕ್ಫ್ ಭೂಮಿ ಎಂದು ನಮೂದಿಸಲು ಆದೇಶ ನೀಡಿದ್ದು, ಇದನ್ನು ಖಂಡಿಸಿ ಲ್ಯಾಂಡ್ ಜಿಹಾದ್ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು’ ಎಂದು ಜಿ.ಪಂ.ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ತಿಳಿಸಿದರು.
‘ತಾಲ್ಲೂಕಿನ ಸಾವಳೇಶ್ವರ ಗ್ರಾಮಕ್ಕೆ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿದ ಅವರು, ಆಳಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಠ, ಮಂದಿರ, ದೇವಸ್ಥಾನ, ಸರ್ಕಾರಿ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸುವ ಕಾರ್ಯ ನಡೆಯುತ್ತಿದೆ, ಇದನ್ನು ಕೂಡಲೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಶ್ರೀರಾಮ ಮಾರುಕಟ್ಟೆ ಆವರಣದ ವಿವಾದಿತ ಮಸ್ಜೀದ್, ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಇರುವ ಎಪಿಎಂಸಿ ಜಾಗ, ಹಳೆಯ ಅನ್ಸಾರಿ ಮೊಹಲ್ಲಾದಲ್ಲಿರುವ ಸರ್ಕಾರಿ ಗ್ರಂಥಾಲಯ ಕಟ್ಟಡ ಸೇರಿದಂತೆ ಅನೇಕ ಆಸ್ತಿಗಳನ್ನು ಪುರಸಭೆ ಮುಖ್ಯಾಧಿಕಾರಿ ವಕ್ಫ್ ಆಸ್ತಿ ಎಂದು ನಮೂದಿಸುತ್ತಿದ್ದಾರೆ. ಸಾರ್ವಜನಿಕರ ಗಮನಕ್ಕೆ ತರದೇ ಹಳೆಯ ದಿನಾಂಕವನ್ನು ನಮೂದಿಸಿ ನೋಟಿಸ್ ಹೊರ ತಂದಿದ್ದಾರೆ. ನೋಟಿಸ್‌ಗೆ ಆಕ್ಷೇಪಣೆ ಸಲ್ಲಿಸಲು ಕೇವಲ 7 ದಿನ ಕಾಲಾವಕಾಶ ನೀಡಿದ್ದಾರೆ. ಈ ಕುರಿತು ಪುರಸಭೆಯ ಸದಸ್ಯರ ಗಮನಕ್ಕೂ ತಂದಿಲ್ಲ’ ಎಂದು ದೂರಿದರು.
‘ಸಾವಳೇಶ್ವರ ಗ್ರಾಮದ ಸರ್ವೇ ನಂ 2ರ 1 ಎಕರೆ 34 ಗುಂಟೆ ಬೀರದೇವರ ದೇವಸ್ಥಾನ, ಖಜೂರಿ ವಲಯದ ತೀರ್ಥ ಗ್ರಾಮದ ಸರ್ವೇ ನ.4ರ 11 ಎಕರೆ 4 ಗುಂಟೆ ಜಮೀನಿನ ಹಕ್ಕು ಮತ್ತು ಋಣಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ. ಅಲ್ಲದೇ ನಾಗರಿಕರಿಗೆ ಗೊತ್ತಿಲ್ಲದಂತೆ ಹಲವು ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಬಿಂಬಿಸಿದ್ದಾರೆ’ ಎಂದರು.
‘ಆಳಂದ ಪಟ್ಟಣ ಮತ್ತು ಗ್ರಾಮೀಣ ಭಾಗದ ರೈತರು ತಮ್ಮ ಜಮೀನು, ದೇವಸ್ಥಾನ, ಮಠ, ಮಂದಿರಗಳ ಜಾಗಗಳ ಪಹಣಿಗಳನ್ನು ಪರಿಶೀಲಿಸಿಕೊಳ್ಳಬೇಕು. ಏನಾದರೂ ವ್ಯತ್ಯಾಸಗಳು ಕಂಡು ಬಂದರೆ ತಮ್ಮನ್ನು ಸಂಪರ್ಕಿಸಬೇಕು ಅಲ್ಲದೇ ತಾವು ಇದಕ್ಕೆ ಕಾನೂನು ತಜ್ಞರ ತಂಡದೊಂದಿಗೆ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.
ನಿಯೋಗದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿ.ಪಂ. ಮಾಜಿ ಸದಸ್ಯ ದೀಲಿಪ ಪಾಟೀಲ, ಮುಖಂಡರಾದ ಗುಂಡಪ್ಪ ಪೂಜಾರಿ, ಪರಮೇಶ್ವರ ಅಲಗೂಡ, ಕಲ್ಯಾಣಿ ಸಾವಳಗಿ, ಬಾಲಾಜಿ ಘೋಡಕೆ, ಸತೀಶ ಖಜೂರೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.