ಕಲಬುರ್ಗಿ: ‘ಬಂಜಾರಾ (ಲಂಬಾಣಿ), ಭೋವಿ, ಕೊರಮ ಹಾಗೂ ಕೊರಚ ಜನಾಂಗದವರ ಮೀಸಲಾತಿ ರಕ್ಷಣೆಗಾಗಿ ನಿರಂತರ ಹೋರಾಟ ಅನಿವಾರ್ಯವಾಗಿದೆ. ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಸೇವಾ ಸಂಘವು ಇದಕ್ಕೆ ಮುಂದಡಿ ಇಟಲಿದೆ’ ಎಂದು ಸಂಘದ ಉಪಾಧ್ಯಕ್ಷ ಸದಸ್ಯ ವಿಠಲ ಜಾಧವ ಹೇಳಿದರು.
‘ಸಾಮಾಜಿಕ ಮತ್ತು ಆರ್ಥಿಕವಾಗಿ ತೀರ ಹಿಂದುಳಿದ ಈ ಮೂರೂ ಸಮುದಾಯಗಳನ್ನು 1936ರಲ್ಲಿಯೇ ಮೈಸೂರು ಮಹಾರಾಜರ ಸಂಸ್ಥಾನ ಮದ್ರಾಸ್ ಪ್ರಾಂತದಲ್ಲಿ ‘ಡಿಪ್ರೆಸ್ಡ್ ಕ್ಲಾಸ್’ ಎಂದು ಗುರುತಿಸಿ ವಿಶೇಷ ಮೀಸಲಾತಿ ನೀಡಿದೆ. ಸಂವಿಧಾನ ಬದ್ಧವಾಗಿ ರಾಜ್ಯದಲ್ಲಿಯೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 101 ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿವೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ರಾಯಚೂರಿನ ಮಹೇಂದ್ರಕುಮಾರ ಮಿತ್ರಾ ಎನ್ನುವವರು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಪಿಟೇಷನ್ ಹಾಕಿದ್ದು, ನ್ಯಾಯಾಲಯವು ಇದೇ ಫೆಬ್ರುವರಿ 14ರಂದು ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗದ ಮುಂದೆ ಇದನ್ನು ಇಡುವಂತೆ ಸೂಚಿಸಿದೆ. ಈ ನಡುವೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಪರಿಶಿಷ್ಟ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದರಂತೆ ಪ್ರಸ್ತುತ ಇರುವ ಶೇಕಡ 18 ಮೀಸಲಾತಿಯನ್ನು ಶೇಕಡ 24ಕ್ಕೆ ಹೆಚ್ಚಿಸುವಂತೆ ಆಯೋಗಕ್ಕೆ ಮನವಿ ಮಾಡಲಾಗುವುದು’ ಎಂದರು.
‘ಇಷ್ಟೆಲ್ಲದರ ಮಧ್ಯೆಯೂ ತುಳಿತಕ್ಕೊಳಗಾದ ಈ ಜನಾಂಗಗಳಲ್ಲೇ ಒಡಕು ಮೂಡಿಸುವ ಹುನ್ನಾರ ನಡೆದಿದೆ. ನಮ್ಮನಮ್ಮಲ್ಲೇ ಅಸ್ಪೃಶ್ಯ– ಸ್ಪೃಶ್ಯ ಎಂಬ ಭೇದಗಳನ್ನು ಹುಟ್ಟುಹಾಕುತ್ತಿದ್ದಾರೆ. ಇಂಥ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟ ನಡೆಯಲಿದೆ’ ಎಂದೂ ಹೇಳಿದರು.
‘ಸಂಸದ ಡಾ.ಉಮೇಶ ಜಾಧವ ಅವರು ಬಂಜಾರ, ಭೋವಿ, ಕೊರಮ ಹಾಗೂ ಕೊರಚ ಸಮಾಜಗಳನ್ನು ಪರಿಶಿಷ್ಟ ಪಂಗಟಕ್ಕೆ ಸೇರಿಸಿ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಕೆಲವರು ಇದನ್ನು ತಿರುಚಿ ಹೇಳಿಕೆ ನೀಡುತ್ತಿರುವುದು ಖಂಡನೀಯ’ ಎಂದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಜಾಧವ, ಬಿ.ಬಿ.ನಾಯಕ, ಮುಖಂಡ ಪ್ರೇಮಕುಮಾರ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.