ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿಯು ರೈಲ್ವೆ ಸಂಚಾರ ಮತ್ತು ಸೇವಾ ಸವಲತ್ತುಗಳಿಂದ ವಂಚಿತವಾಗಿ ನಿತ್ಯ ಸಾವಿರಾರು ಪ್ರಯಾಣಿಕರು ಪರದಾಡುತ್ತಿರುವ ಈ ಸಂದರ್ಭದಲ್ಲಿ ವಿಮಾನಗಳ ಹಾರಾಟದ ಸೇವೆಯಲ್ಲೂ ಕಡಿತವಾಗಿದೆ.
ಉಡಾನ್ ಯೋಜನೆಯಡಿ 2019ರ ನವೆಂಬರ್ 22ರಂದು ಕಲಬುರಗಿ ವಿಮಾನ ನಿಲ್ದಾಣವು ಸಾರ್ವಜನಿಕರ ಸೇವೆಗೆ ತೆರೆದುಕೊಂಡಿತ್ತು. ಕಲಬುರಗಿಯಿಂದ ಹಿಂಡನ್(ದೆಹಲಿ), ಮುಂಬೈ, ಹೈದರಾಬಾದ್ ಮತ್ತು ಮೈಸೂರು ನಡುವೆ ಪ್ರಯಾಣಿಕ ವಿಮಾನಗಳು ಹಾರಾಟ ನಡೆಸಿದ್ದವು. ಸದ್ಯ, ವಾರದಲ್ಲಿ ಕೆಲವು ದಿನಗಳು ಮಾತ್ರ ತಿರುಪತಿ ಮತ್ತು ಬೆಂಗಳೂರು ನಡುವೆ ಮಾತ್ರವೇ ವಿಮಾನಗಳು ಹಾರಾಡುತ್ತಿವೆ.
ಕಲಬುರಗಿ ನಿಲ್ದಾಣದಲ್ಲಿ ಸೋಮವಾರ ಮತ್ತು ಬುಧವಾರ ಯಾವುದೇ ವಿಮಾನದ ಸದ್ದು ಕೇಳುವುದಿಲ್ಲ. ರಾತ್ರಿ ವಿಮಾನ ನಿಲುಗಡೆಗೆ (ನೈಟ್ ಲ್ಯಾಂಡಿಂಗ್) ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದ್ದರೂ ಹಗಲು ಹೊತ್ತಿನಲ್ಲಿನ ವಿಮಾನಗಳ ಸೇವೆ ಕಡಿತವಾಗಿದೆ.
ಸ್ಟಾರ್ ಏರ್ ವಿಮಾನವು ಕಲಬುರಗಿ–ಹಿಂಡನ್ (ದೆಹಲಿ) ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುತ್ತಿತ್ತು. 2022ರ ಜೂನ್ 23ರಿಂದ ವಾರದಲ್ಲಿ ಎರಡು ದಿನಕ್ಕೆ ಸೀಮಿತಗೊಂಡಿತ್ತು. 2022ರ ಡಿಸೆಂಬರ್ 24ರಿಂದ ಅದರ ಹಾರಾಟ ಸ್ಥಗಿತವಾಗಿದೆ. ದೆಹಲಿಗೆ ತೆರಳುತ್ತಿದ್ದ ಉದ್ಯಮಿಗಳು, ಪ್ರವಾಸಿಗರು, ವರ್ತಕರು ರೈಲು, ಹೈದರಾಬಾದ್ ವಿಮಾನ ನಿಲ್ದಾಣದತ್ತ ಮುಖ ಮಾಡಿದ್ದಾರೆ.
ಇದೇ ಸ್ಟಾರ್ ಏರ್ ವಿಮಾನವು ಕಲಬುರಗಿ–ತಿರುಪತಿ ಮಾರ್ಗವಾಗಿ ವಾರದಲ್ಲಿ ನಾಲ್ಕು ದಿನಗಳ ಹಾರಾಟವನ್ನು 2022ರ ಜೂನ್ 23ರಿಂದ ಎರಡು ದಿನಕ್ಕೆ(ಸೋಮವಾರ ಮತ್ತು ಬುಧವಾರ) ಇಳಿಸಿತ್ತು. ಕೆಲವು ತಿಂಗಳಿಂದ ಮತ್ತೆ ವಾರದಲ್ಲಿ ನಾಲ್ಕು ದಿನ(ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ) ಹಾರಾಟ ನಡೆಸುತ್ತಿದೆ.
ಕಲುಬರಗಿ– ಬೆಂಗಳೂರು ನಡುವೆ ವಾರದಲ್ಲಿ ಈ ಹಿಂದೆ ಎಲ್ಲ ದಿನಗಳಲ್ಲಿ ವಿಮಾನ ಹಾರಾಟ ನಡೆಸುತ್ತಿತ್ತು. 2023ರ ಜೂನ್ 1ರಿಂದ ವಾರದಲ್ಲಿ ನಾಲ್ಕು ದಿನಗಳು ಮಾತ್ರ ಸ್ಟಾರ್ ಏರ್ ವಿಮಾನ ಹಾರಾಟ ಮಾಡುತ್ತಿದೆ. ಉಳಿದ ಮೂರು ದಿನ ಬೀದರ್‌ನಿಂದ ಸಂಚರಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಲಯನ್ಸ್ ಏರ್‌ನ ವಿಮಾನಗಳು ಸೋಮವಾರ ಮತ್ತು ಬುಧವಾರ ಹೊರತುಪಡಿಸಿ ಉಳಿದ ದಿನ ಹಾರಾಟ ಮಾಡುತ್ತಿವೆ.
ಕಲಬುರಗಿ ವಿಮಾನ ನಿಲ್ದಾಣ ಸೇವೆಯನ್ನು ವಿಸ್ತರಿಸಲು ನಾಗರಿಕ ವಿಮಾನಯಾನ ಸಚಿವರು ಹಾಗೂ ವಿಮಾನಯಾನ ಸಂಸ್ಥೆಗಳನ್ನು ಭೇಟಿ ಮಾಡಿ ಇಂಡಿಗೊ ಸಂಸ್ಥೆಯನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ- ಡಾ.ಉಮೇಶ ಜಾಧವ, ಸಂಸದ
‘ದೂರದ ಬೆಂಗಳೂರಿಗೆ ಕಡಿಮೆ ಅವಧಿಯಲ್ಲಿ ತಲುಪುಲು ಇರುವ ವಿಮಾನ ಸೇವೆಯ ಹಾರಾಟ ಕಡಿತದಿಂದ ಪ್ರಯಾಣಿಕರಲ್ಲಿ ಆತಂಕ ಶುರುವಾಗಿದೆ. ಬೆಂಗಳೂರು ರೈಲುಗಳು ಸದಾ ಭರ್ತಿಯಾಗಿ ಸಂಚರಿಸುತ್ತಿವೆ. ಎಷ್ಟೇ ಗೋಳಾಡಿದರು ಕಾಯ್ದಿರಿಸಿದ ಆಸನಗಳು ಸಿಗುತ್ತಿಲ್ಲ. ಇಂತಹ ಸಂದಿಗ್ಧತೆಯಲ್ಲಿ ವಿಮಾನಗಳ ಹಾರಾಟ ಕಡಿತವಾಗಿದೆ. ರೈಲ್ವೆ, ವಿಮಾನ ಸೇವೆಯಲ್ಲಿ ಅನ್ಯಾಯ ಆಗುತ್ತಿದ್ದರೂ ಜನಪ್ರತಿನಿಧಿಗಳು ಎನಿಸಿಕೊಂಡುವರು ಏನು ಮಾಡುತ್ತಿದ್ದಾರೆ’ ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.
ನಿತ್ಯ ಬೆಂಗಳೂರು ಮಾರ್ಗದಲ್ಲಿ 300 ಜನರು ಪ್ರಯಾಣಿಸುತ್ತಿದ್ದು ನಿತ್ಯ ವಿಮಾನ ಹಾರಾಟ ಕಡಿತದಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇಡೀ ಪ್ರಯಾಣಿಕ ವ್ಯವಸ್ಥೆ ಸಮಸ್ಯೆಯ ಗೂಡಾಗುತ್ತಿದ್ದರೂ ಕೇಳುವವರಿಲ್ಲ- ಸುನೀಲ ಕುಲಕರ್ಣಿ, ಅಧ್ಯಕ್ಷ ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆ
ಜಿಲ್ಲೆಯಲ್ಲಿ ಸಿಮೆಂಟ್ ಮತ್ತು ಸಕ್ಕರೆ ಕಾರ್ಖಾನೆಗಳು ದಾಲ್‌ಮಿಲ್‌ಗಳು ಸ್ಟೋನ್ ಪಾಲಿಸಿಂಗ್ ಘಟಕಗಳು ವೈದ್ಯಕೀಯ ಕಾಲೇಜುಗಳು ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಿವೆ. ವಿಮಾನ ಹಾರಾಟ ಕಡಿತದಿಂದ ಸ್ಥಳೀಯರು ಸೇರಿದಂತೆ ಉದ್ಯಮಿಗಳು ವ್ಯಾಪಾರಿಗಳು ವರ್ತಕರು ವಿದ್ಯಾರ್ಥಿಗಳಿಗೆ ಐಟಿಬಿಟಿ ನೌಕರರಿಗೆ ಪ್ರವಾಸಿಗಳಿಗೆ ಉಪನ್ಯಾಸಕರಿಗೆ ವೈದ್ಯರಿಗೆ ರಾಜಕಾರಣಿಗಳು ವಿಮಾನ ಸೇವೆಯಿಂದ ವಂಚಿತ ಆಗಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.