ADVERTISEMENT

ಕಲಬುರಗಿ: ಮಂಬೈನಿಂದ ಬಂದಿದ್ದ 8 ವರ್ಷದ ಬಾಲಕಿಗೆ ಕೋವಿಡ್ ದೃಢ

ಜಿಲ್ಲೆಯಲ್ಲಿ ಒಂದೂವರೆ ವರ್ಷದ ಬಳಿಕ ಮತ್ತೆ ಕಾಣಿಸಿಕೊಂಡ ಕೋವಿಡ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 8:18 IST
Last Updated 26 ಡಿಸೆಂಬರ್ 2023, 8:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಲಬುರಗಿ: ಮಂಬೈನಿಂದ ಬಂದಿದ್ದ 8 ವರ್ಷದ ಬಾಲಕಿಗೆ ಕೋವಿಡ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸುಮಾರು ಒಂದೂವರೆ ವರ್ಷದ ಬಳಿಕ ಮತ್ತೆ ಕೋವಿಡ್ ಕಾಣಿಸಿಕೊಂಡಿದೆ.

‘ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ ಬಾಲಕಿ ಕ್ಷಯರೋಗ (ಟಿಬಿ) ಚಿಕಿತ್ಸೆಗಾಗಿ ಡಿಸೆಂಬರ್ 23ರಂದು ಜಿಮ್ಸ್‌ಗೆ ದಾಖಲಾಗಿದ್ದಳು. ಸೋಮವಾರ ಶಂಕಿತ 22 ಜನರ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆ ಮಾಡಿದಾಗ, ಬಾಲಕಿಯಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ’ ಎಂದು ಡಿಎಚ್‌ಒ ಡಾ.ರಾಜಶೇಖರ ಮಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್ ಮುನ್ನೆಚ್ಚರಿಕೆಯ ಕ್ರಮವಾಗಿ ಈಗಾಗಲೇ ಪರೀಕ್ಷೆಯನ್ನು ಆರಂಭಿಸಲಾಗಿದೆ. ಮೊದಲ ದಿನ 22 ಜನರ ಮಾದರಿ ಪರೀಕ್ಷೆಗೆ ಒಳಪಡಿಸಿದ್ದೇವೆ. ಸೋಂಕಿತ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟಿಬಿಗೂ ಚಿಕಿತ್ಸೆ ನೀಡಿದ್ದೇವೆ. ಕೋವಿಡ್ ಎದುರಿಸಲು ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

ಮಾಸ್ಕ್ ಧರಿಸಿ: ಕೋವಿಡ್ ಉಪತಳಿ ಜೆ.ಎನ್-1 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿ, ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಸೇರಿದಂತೆ ಕೋವಿಡ್ ಸುರಕ್ಷಾ ನಿಯಮ ಪಾಲಿಸಬೇಕು ಎಂದು ಡಾ.ರಾಜಶೇಖರ ಮಾಲಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

60 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಹಿರಿಯರು, ಕಿಡ್ನಿ, ಹೃದಯ, ಲಿವರ್ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ವಿಶೇಷವಾಗಿ ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರು ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು. ಸಾರ್ವಜನಿಕರು ಅಗತ್ಯ ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ತೆರಳಬಾರದು ಎಂದಿದ್ದಾರೆ.

ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ಭೇಟಿ ತಪಾಸಣೆ ಮಾಡಿಕೊಳ್ಳಬೇಕು. ಜತೆಗೆ ವೈದ್ಯಕೀಯ ಸಲಹೆ ಪಡೆಯಬೇಕು. ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು. ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಮನೆಯಲ್ಲಿರುವುದು ಸೂಕ್ತ. ಹಿರಿಯರು, ದುರ್ಬಲ ವ್ಯಕ್ತಿಗಳನ್ನು ಅವಶ್ಯವಿದ್ದಲ್ಲಿ ಮಾತ್ರವೇ ಭೇಟಿ ಮಾಡಬೇಕು ಎಂದಿದ್ದಾರೆ.

ಪ್ರಕರಣಗಳು ಹೆಚ್ಚಾದಂತೆ ಕೋವಿಡ್ ಐಸಿಯು ಹಾಸಿಗೆಗಳನ್ನು ಹೆಚ್ಚಿಸಲಾಗುವುದು. ತಾಲ್ಲೂಕಿನ ಪ್ರತಿ ಆಸ್ಪತ್ರೆಗಳಲ್ಲಿ ತಲಾ 10 ಬೆಡ್‌ಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ.
ಡಾ.ರಾಜಶೇಖರ ಮಾಲಿ, ಡಿಎಚ್‌ಒ

‘ಕೋವಿಡ್‌ ಮಾರ್ಗಸೂಚಿ ಬಂದಿಲ್ಲ’

ಕೋವಿಡ್ ವೈರಾಣುವಿನ ಹೊಸ ಉಪ ತಳಿ ಹರಡಿದ ಬಳಿಕ ಪ್ರಯಾಣಿಕರು ಪಾಲಿಸಬೇಕಾದ ಮಾರ್ಗಸೂಚಿಗಳ ಸಂಬಂಧ ನಾಗರಿಕ ವಿಮಾನಯಾನ ಹಾಗೂ ರೈಲ್ವೆ ಸಚಿವಾಲಯಗಳಿಂದ ಯಾವುದೇ ಗೈಡ್‌ಲೈನ್ಸ್ ಬಂದಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್ ಹೊಸ ಉಪ ತಳಿಯ ಸುದ್ದಿ ಹರಡುತ್ತಿದ್ದಂತೆ ಕಳೆದ ಒಂದು ವಾರದಿಂದ ಮಾಸ್ಕ್‌ ಧರಿಸುವಂತೆ ವಿಮಾನ ನಿಲ್ದಾಣದ ಸಿಬ್ಬಂದಿಗೆ ಸೂಚಿಸಲಾಗಿದೆ. ಶೇ 80ರಷ್ಟು ಸಿಬ್ಬಂದಿ ಮಾಸ್ಕ್ ಧರಿಸುತ್ತಿದ್ದಾರೆ. ಇಂದಿನಿಂದ ಪ್ರಿಯೊಬ್ಬರು ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗುವುದು’ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ ತಿಳಿಸಿದರು.

‘ರೈಲ್ವೆ ಸಚಿವಾಲಯದಿಂದಲೂ ಕೋವಿಡ್ ಮಾರ್ಗಸೂಚಿಗಳು ಬಂದಿಲ್ಲ. ಜಿಲ್ಲೆಯಲ್ಲಿ ಕೋವಿಡ್ ದೃಢಪಟ್ಟಿದ್ದು ಗೊತ್ತಾಗಿದ್ದರಿಂದ ರೈಲ್ವೆಯ ವೈದ್ಯರೊಂದಿಗೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕಲಬುರಗಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಹೇಳಿದರು.

ಪ್ರಯಾಣಿಕರ ನಿಲ್ದಾಣ ಗಡಿಯಲ್ಲಿ ಮುನ್ನೆಚ್ಚರಿಕೆ ಅಗತ್ಯ

ಕಲಬುರಗಿ ಜಿಲ್ಲೆ ಎರಡೂ ಕಡೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಗಡಿ ಹಂಚಿಕೊಂಡಿದೆ. ವಿಮಾನ ರೈಲು ಬಸ್‌ ನಿಲ್ದಾಣಗಳು ಹಾಗೂ ಗಡಿ ಭಾಗದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದು ಸ್ಥಳೀಯರ ಮನವಿ. ನೆರೆಯ ಸೋಲಾಪುರ ಪುಣೆ ಮುಂಬೈ ಹೈದರಾಬಾದ್ ನಗರಗಳಿಂದ ವ್ಯಾಪಾರ–ವಹಿವಾಟಿ ವಲಸಿಗ ಕಾರ್ಮಿಕರ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿದೆ.

ಕೇರಳ ಮೂಲದ ಹಲವು ವೈದ್ಯಕೀಯ ವಿದ್ಯಾರ್ಥಿಗಳು ಜಿಲ್ಲೆಯ ಮೆಡಿಕಲ್ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಕ್ರಿಸ್‌ಮಸ್ ರಜೆ ಮುಗಿಸಿ ಕಾಲೇಜುಗಳಿಗೆ ವಾಪಸ್ ಬರುವ ಮುನ್ನವೇ ತಪಾಸಣೆಯ ವ್ಯವಸ್ಥೆ ಮಾಡಬೇಕು. ಚಳಿ ಹೆಚ್ಚಾಗಿದ್ದರಿಂದ ಮಕ್ಕಳು ಹಿರಿಯ ನಾಗರಿಕರು ಶ್ವಾಸಕೋಶ ಸಂಬಂಧಿತ ರೋಗಿಗಳಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ ಎಂಬುದು ಸ್ಥಳೀಯರ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.