ADVERTISEMENT

‘ಪ್ರಜಾವಾಣಿ ಫೋನ್-ಇನ್’ ಕಾರ್ಯಕ್ರಮ: ‘ನಿರ್ದೇಶನ ಬಂದ ತಕ್ಷಣ ಪಡಿತರ ಚೀಟಿ ವಿತರಣೆ’

ಆಹಾರ ಇಲಾಖೆ ಉಪನಿರ್ದೇಶಕ ಶಾಂತಗೌಡ ಗುಣಕಿ ಅವರೊಂದಿಗೆ ಫೋನ್ ಇನ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 15:05 IST
Last Updated 30 ಅಕ್ಟೋಬರ್ 2021, 15:05 IST
ಶಾಂತಗೌಡ ಗುಣಕಿ
ಶಾಂತಗೌಡ ಗುಣಕಿ   

ಕಲಬುರಗಿ: ‘ಜಿಲ್ಲೆಯಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಕುಟುಂಬಗಳು ಆದ್ಯತಾ ವಲಯದ (ಬಿಪಿಎಲ್‌) ಪಡಿತರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆಹಾರ ಇಲಾಖೆಯಿಂದ ಸೂಚನೆ ಬಂದ ತಕ್ಷಣವೇ ಕಾರ್ಡುಗಳಿಗೆ ಮಂಜೂರಾತಿ ನೀಡಲಾಗುವುದು. ಕೆಲವೇ ದಿನಗಳಲ್ಲಿ ಮಂಜೂರಾತಿ ಸಿಗುವ ನಿರೀಕ್ಷೆ ಇದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶಾಂತಗೌಡ ಗುಣಕಿ ಭರವಸೆ ನೀಡಿದರು.

ಶನಿವಾರ ಆಯೋಜಿಸಿದ್ದ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗಳಿಗೆ ಉತ್ತರಿಸಿದ ಅವರು, ‘ಬಂದ ಅರ್ಜಿಗಳನ್ನು ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದೆ. ಪಡಿತರ ಚೀಟಿದಾರರ ಕುಟುಂಬ ಸದಸ್ಯರ ವಿವರವನ್ನು ಪಡೆದುಕೊಳ್ಳುವ ಪ್ರಕ್ರಿಯೆ ನಡೆದಿದೆ. ತುರ್ತು ಚಿಕಿತ್ಸೆ ಪಡೆಯುವ ಪ್ರಕರಣಗಳಿದ್ದರೆ, ಅಂಥವುಗಳ ಕಾರ್ಡುಗಳನ್ನು ತಕ್ಷಣವೇ ಮಂಜೂರು ಮಾಡಲಾಗುತ್ತಿದೆ‘ ಎಂದರು.

ಒಂದು ಗಂಟೆಯವರೆಗೆ ನಡೆದ ಫೋನ್ ಇನ್‌ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕಿನ ಜನರಲ್ಲದೇ ಬೆಂಗಳೂರು ಮತ್ತು ಜಮಖಂಡಿಯಿಂದಲೂ ಕರೆಗಳು ಬಂದಿದ್ದವು. ಅವುಗಳಲ್ಲಿ ಬಹುತೇಕ ಕರೆಗಳು, ‘ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ತಿಂಗಳಾದರೂ ಏಕೆ ಇನ್ನೂ ಮಂಜೂರಾಗಿಲ್ಲ’ ಎಂಬುವೇ ಆಗಿದ್ದವು.

ADVERTISEMENT

ಕರೆ ಮಾಡಿದವರು ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೆ ನೀಡಲಾದ ಉತ್ತರಗಳ ಸಂಕ್ಷಿಪ್ತ ರೂಪ ಇಲ್ಲಿದೆ.

* ಜಗದೇವಿ ಪರೀಟ್, ಕಲಬುರಗಿ: ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ 4 ತಿಂಗಳಾಯಿತು. ಈವೆರೆಗೆ ಮೊಬೈಲ್‌ಗೆ ಯಾವುದೇ ಸಂದೇಶ ಬಂದಿಲ್ಲ.

–ಕೋವಿಡ್ ಹಾಗೂ ಚುನಾವಣೆ ನೀತಿ ಸಂಹಿತೆ ಕಾರಣ ಹೊಸ ಪಡಿತರ ಚೀಟಿ ನೀಡಲಾಗುತ್ತಿಲ್ಲ. ಸರ್ಕಾರದಿಂದ ನಿರ್ದೇಶನ ಬಂದ ತಕ್ಷಣ ನೀಡುತ್ತೇವೆ.

* ಧರೆಪ್ಪ ಕೊಪ್ಪದ, ಆಳಂದ: ನಮ್ಮ ಪಡಿತರ ಚೀಟಿ ರದ್ದಾಗಿದೆ. ಈ ಕುರಿತು ಕಚೇರಿಯಲ್ಲಿ ಕೇಳಿದರೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ನನ್ನ ಹಾಗೂ ನನ್ನ ತಂದೆಯ ಜಂಟಿ ಹೆಸರಿನಲ್ಲಿ ಜಮೀನು ಇದೆ.

–ಸರ್ಕಾರದ ನಿಯಮಾವಳಿ ಪ್ರಕಾರ, 3 ಹೆಕ್ಟೇರ್ ಜಮೀನು ಇದ್ದರೆ ಪಡಿತರ ಚೀಟಿ ರದ್ದಾಗುತ್ತದೆ. ಒಂದು ವೇಳೆ ಇದಕ್ಕಿಂತ ಕಡಿಮೆ ಜಮೀನು ಇದ್ದರೆ, ನೀವು ಅರ್ಜಿ ಸಲ್ಲಿಸಿ ಆದ್ಯತಾ ಪಡಿತರ ಚೀಟಿ ಪಡೆಯಬಹುದು.

* ಆನಂದ ತೆಗನೂರ, ಕಲಬುರಗಿ: ಕೆಲ ಹಳ್ಳಿಗಳಲ್ಲಿ ನ್ಯಾಯಬೆಲೆ ಅಂಗಡಿಯವರು ಬೇರೆ ಹಳ್ಳಿಯವರಿಗೂ ಪಡಿತರ ನೀಡುವ ಕುರಿತು ದೂರುಗಳು ಇವೆ. ಏನು ಕ್ರಮ ಕೈಗೊಂಡಿದ್ದೀರಿ?

–ಡೀಲರ್‌ ಮೃತಪಟ್ಟ ಅಥವಾ ಅಮಾನತುಗೊಂಡ ಸಂದರ್ಭದಲ್ಲಿ ಆ ಹಳ್ಳಿಯ ಜನರಿಗೆ ತೊಂದರೆ ಆಗದಿರಲಿ ಎಂಬ ದೃಷ್ಟಿಯಿಂದ ಸಮೀಪದ ನ್ಯಾಯಬೆಲೆ ಅಂಗಡಿಯವರಿಗೆ ಪಡಿತರ ಹಂಚಿಕೆ ಮಾಡುವ ಜವಾಬ್ದಾರಿ ನೀಡುತ್ತೇವೆ. ಇದು ತಾತ್ಕಾಲಿಕ ವ್ಯವಸ್ಥೆ. ಒಂದು ವೇಳೆ ಅಕ್ರಮವಾಗಿ ಮಾರುತ್ತಿದ್ದರೆ, ಅಂಥವರ ಬಗ್ಗೆ ಮಾಹಿತಿ ನೀಡಿ. ಕ್ರಮ ಕೈಗೊಳ್ಳುತ್ತೇವೆ.

* ಶಿವಕುಮಾರ ಸುಣಗಾರ, ಚಿತ್ತಾಪುರ: ಬಯೊಮೆಟ್ರಿಕ್‌ನಲ್ಲಿ ಬೆರಳಚ್ಚು ತೆಗೆದುಕೊಳ್ಳದ ಕಾರಣ ಕೆಲವರಿಗೆ ಪಡಿತರ ಸಿಗುತ್ತಿಲ್ಲ. ಒಂದು ತಿಂಗಳು ಪಡಿತರ ನಿಂತರೆ, ಬಡ ಕುಟುಂಬಗಳಿಗೆ ತೀವ್ರ ತೊಂದರೆಯಾಗುತ್ತದೆ.

– ಸಮೀಪದ ಬಯೊಮೆಟ್ರಿಕ್ ಕೇಂದ್ರಗಳಲ್ಲಿ ಪಡಿತರ ಚೀಟಿ ಮಾಹಿತಿ ಅಪ್‌ಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ಬೆರಳಚ್ಚಿನಿಂದ ಸಮಸ್ಯೆ ಎದುರಿಸುತ್ತಿದ್ದರೆ ಅಂಥವರಿಗಾಗಿ ಸರ್ಕಾರ ಐರಿಷ್ (ಕಣ್ಣಿನ ಪಾಪೆ) ಎಂಬ ತಂತ್ರಜ್ಞಾನ ತರಲಿದೆ. ಇದರಿಂದ ಸಮಸ್ಯೆ ಬಗೆಹರಿಯಲಿದೆ.

* ಶ್ರೀಕಾಂತ ಬಿರಾದಾರ, ಆಳಂದ: ಒಂದೂವರೆ ವರ್ಷದಿಂದ ಹೊಸ ಪಡಿತರ ಚೀಟಿ ಕೊಡುತ್ತಿಲ್ಲ. ಇದರಿಂದ ಬಡವರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಸಾವಿರಾರು ಕ್ವಿಂಟಲ್ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಏನು ಕ್ರಮ ಕೈಗೊಂಡಿದ್ದೀರಿ?

– ಸರ್ಕಾರದಿಂದ ನಿರ್ದೇಶನ ಬಂದ ತಕ್ಷಣ ಹೊಸ ಪಡಿತರ ಚೀಟಿಗಳನ್ನು ಕೊಡುತ್ತೇವೆ. ಈಗಾಗಲೇ ಜಿಲ್ಲೆಯ ಹಲವೆಡೆ ದಾಳಿ ನಡೆಸಿ, ಅಕ್ಕಿ ಜಪ್ತಿ ಮಾಡಿದ್ದೇವೆ. ಅಕ್ರಮವಾಗಿ ಪಡಿತರ ನೀಡುವ ನ್ಯಾಯಬೆಲೆ ಅಂಗಡಿಗಳ ಡೀಲರ್‌ಗಳನ್ನು ಅಮಾನತು ಮಾಡಿದ್ದೇವೆ. ಇಂಥ ಅಕ್ರಮಗಳು ಕಂಡು ಬಂದರೆ ತಕ್ಷಣವೇ ನಮ್ಮ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಮಾಹಿತಿ ನೀಡಿದವರಿಗೆಇಲಾಖೆಯಿಂದ ಬಹುಮಾನ ನೀಡಲಾಗುತ್ತದೆ.

* ಸೈದಪ್ಪ ಹೊಸಮನಿ, ಇಜೇರಿ, ಯಡ್ರಾಮಿ ತಾಲ್ಲೂಕು: ನಮ್ಮ ಭಾಗದಲ್ಲಿ ಜೋಳ ಹೆಚ್ಚು ಬಳಸುತ್ತಾರೆ. ಇಲ್ಲಿನ ಜನರಿಗೆ ಜೋಳ ಕೊಡಬಹುದಲ್ಲವೆ? ನಮ್ಮ ಊರಿನಲ್ಲಿ 9 ಸಾವಿರ ಜನಸಂಖ್ಯೆಯಿದ್ದು 3 ನ್ಯಾಯಬೆಲೆ ಅಂಗಡಿಗಳಿವೆ. ಆದರೆ, ನಾವು ಪಡಿತರ ತೆಗೆದುಕೊಳ್ಳಬೇಕಾದ ನ್ಯಾಯಬೆಲೆ ಅಂಗಡಿ ಮನೆಯಿಂದ ತುಂಬಾ ದೂರವಿದೆ. ನಮ್ಮ ಹತ್ತಿರದ ಕೇಂದ್ರದಲ್ಲೇ ಪಡಿತರ ಪಡೆಯಲು ಸಾಧ್ಯವೇ?

– ರೈತರು ಜೋಳ ಹೆಚ್ಚು ಬೆಳೆದು ಮಾರಲು ಮುಂದಾದರೆ, ನಾವು ಖರೀದಿಸಿ, ಅದನ್ನೇ ಜನರಿಗೆ ಕೊಡುತ್ತೇವೆ. ಜನಸಂಖ್ಯೆೆಗೆ ಅನುವಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆದಿದ್ದು, ಹೆಚ್ಚಿನ ಕೇಂದ್ರಗಳು ಬೇಕೆನಿದರೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸುತ್ತೇವೆ. ಹತ್ತಿರದ ಕೇಂದ್ರಗಳಲ್ಲಿ ಪಡಿತರ ಬೇಕಾದರೆ ಈ ಕುರಿತು ಅರ್ಜಿ ಸಲ್ಲಿಸಿ. ಪರಿಶೀಲಿಸುತ್ತೇವೆ.

*ವಿನಯಕುಮಾರ್ ಚಿಂಚೋಳಿ: ಪಡಿತರ ಧಾನ್ಯದ ತೂಕದಲ್ಲಿ ಹೆಚ್ಚು ಕಡಿಮೆಯಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ

–ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳನ್ನು ಅಳವಡಿಸಲಾಗಿದೆ. ಆದಾಗ್ಯೂ ತೂಕದಲ್ಲಿ ಹೆಚ್ಚು ಕಡಿಮೆಯಾದ ಬಗ್ಗೆ ನಿರ್ದಿಷ್ಟ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರೆ ಅಂಥವರ ಲೈಸೆನ್ಸ್ ರದ್ದುಗೊಳಿಸುತ್ತೇವೆ.

* ಚಾಂದ್‌ ಪಟೇಲ್‌, ಯಂಪಳ್ಳಿ ಗ್ರಾಮ, ಚಿಂಚೋಳಿ: ನಮ್ಮ ಊರಿನಲ್ಲಿ ಪ್ರತಿ ತಿಂಗಳು ಪಡಿತರ ಧಾನ್ಯ ನೀಡಲು ತಲಾ ₹ 100 ಹಣ ಪಡೆಯುತ್ತಾರೆ. ಇದನ್ನು ಯಾವುದಕ್ಕೆ ಪಡೆಯುತ್ತೀರಿ ಎಂದು ಕೇಳಿದರೆ ಉತ್ತರ ಹೇಳುವುದಿಲ್ಲ. ಹಣ ಪಡೆಯುವಂತೆ ಅಧಿಕಾರಿಗಳೇ ಹೇಳಿದ್ದಾರೆ ಎನ್ನುತ್ತಾರೆ. ಈ ಬಗ್ಗೆ ಸ್ಪಷ್ಟತೆ ಬೇಕು.

–ಬಿಪಿಎಲ್‌, ಎಪಿಎಲ್‌ ಕಾರ್ಡ್‌ಗಳಿಗೆ ಕನಿಷ್ಠ ಇಂತಿಷ್ಟು ದರ ಎಂಬುದು ಇದೆ. ಆದರೆ, ₹ 100ನ್ನು ಅಂಗಡಿಯವರು ಏಕೆ ಪಡೆಯುತ್ತಾರೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.

ಎಲ್ಲಿ ಬೇಕಾದರೂ ಸಿಗಲಿದೆ ಪಡಿತರ
ಯಾವುದೇ ರಾಜ್ಯ ಅಥವಾ ಜಿಲ್ಲೆಯವರು ಎಲ್ಲಿ ಬೇಕಾದರೂ ಪಡಿತರವನ್ನು ಪಡೆಯುವ ಸೌಲಭ್ಯವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ. ಯಾವುದೇ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಚೀಟಿ ಸಂಖ್ಯೆ ಹಾಗೂ ಬೆರಳಚ್ಚು ನೀಡಿದರೆ ಹಂಚಿಕೆಯಾದಷ್ಟು ಪಡಿತರ ಪಡೆಯಬಹುದು. ಜಿಲ್ಲೆಯಲ್ಲಿ ಶೇ 4ರಷ್ಟು ಕುಟುಂಬಗಳು ಈ ಪೋರ್ಟೆಬಿಲಿಟಿ ಸೌಲಭ್ಯವನ್ನು ಪಡೆಯುತ್ತಿವೆ. ಯಾರಾದರೂ ಪಡಿತರ ನೀಡಲು ನಿರಾಕರಿಸಿದರೆ ಅವರ ಅಂಗಡಿಯ ಲೈಸೆನ್ಸ್‌ ರದ್ದಾಗಲಿದೆ ಎಂದು ಶಾಂತಗೌಡ ಮಾಹಿತಿ ನೀಡಿದರು.

ಪ್ರಶ್ನೆ ಕೇಳಿದವರು
-ವೆಂಕಟೇಶ, ನಾಲವಾರ, ಚಿತ್ತಾಪುರ
-ರವಿ ಕೋರಿ, ಹಾಗರಗಾ
-ಬಸವರಾಜ ರಾವೂರ, ಕಲಬುರಗಿ
-ಸಂತೋಷ ಜಾಬಿನ್, ಸುಲೇಪೇಟ
-ರೇವಪ್ಪ, ಚಿಂಚೋಳಿ
-ಶ್ರವಣಕುಮಾರ, ಆಳಂದ
-ಈಶ್ವರ ಹಿಪ್ಪರಗಿ, ಜೇವರ್ಗಿ
-ಸಂಗಪ್ಪ, ಚಿಂಚೋಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.