ಕಮಲಾಪುರ: ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಚರಿಸುವವರಿಗೆ ಚಾಕು ತೋರಿಸಿ, ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಕಮಲಾಪುರ ಪೊಲೀಸರು ಗುರುವಾರ ಬಂಧಿಸಿದ್ದು, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಲಬುರಗಿಯ ಗಂಗಾನಗರದ ನಿವಾಸಿ ಅಭಿಜಿತ ಮಲ್ಲಾರ ಪಟೇಲ(19), ಮೂಲತಃ ಆಳಂದ ತಾಲ್ಲೂಕಿನ ಹೊದಲೂರ ಗ್ರಾಮದವನಾಗಿದ್ದಾನೆ. ಕಲಬುರಗಿಯ ಶಾಂತಿನಗರದ ನಿವಾಸಿ ಮಹಮ್ಮದ್ ಕೈಫ್ ಮೌಲಾ ಶೇಖ್(20), ಮೂಲತಃ ಕಮಲಾಪುರ ತಾಲ್ಲೂಕಿನ ಜೀವಣಗಿ ಗ್ರಾಮದವನಾಗಿದ್ದಾನೆ. ಕಲಬುರಗಿಯ ಸಿಐಬಿ ಕಾಲೊನಿಯ ನಿವಾಸಿ ನಾಗರಾಜ ಮಲ್ಲಿನಾಥ ಜಾನ್ (21), ಕಮಲಾಪುರ ತಾಲ್ಲೂಕಿನ ಜೀವಣಗಿ ಗ್ರಾಮದ ಚಂದನ ಮಲ್ಲಿಕಾರ್ಜುನ ಸುಗೂರ (20) ಬಂಧಿತರು.
ಆರೋಪಿಗಳಿಂದ ಎರಡು ಸ್ಕೂಟಿ, ಚೂರಿ, ಸುಲಿಗೆ ಮಾಡಿರುವ ಮೊಬೈಲ್ ಫೋನ್ ಜಪ್ತಿ ಮಾಡಿಕೊಳ್ಳಲಾಗಿದೆ. ನಾಲ್ವರು ಸೇರಿ ಕಮಲಾಪುರ ಹೊರ ವಲಯದ ಎಜಿಪಿ ಗ್ಯಾಸ್‌ಪಂಪ್ ಹತ್ತಿರ ಅ. 17ರಂದು, ಆಳಂದ ತಾಲ್ಲೂಕಿನ ಕೊಡಲ ಹಂಗರಗಾ ನಿವಾಸಿ ಸುನೀಲಕುಮಾರ ಚಂದ್ರಕಾಂತ ಗಿಲಕಿ ಎಂಬಾತನಿಗೆ ಕುತ್ತಿಗೆಗೆ ಚಾಕು ಹಿಡಿದು ಸುಲಿಗೆ ಮಾಡಿದ್ದರು. ಈ ಕುರಿತು ಅವರು ಕಮಲಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಿಪಿಐ ಶಿವಶಂಕರ ಸಾಹು ನೇತೃತ್ವದಲ್ಲಿ ಪಿಎಸ್ಐ ಸಂಗೀತಾ ಸಿಂಧೆ, ಶಿವಶಂಕರ ಸುಬೇದಾರ, ಕುಪೇಂದ್ರ, ರಾಜಶೇಖರ, ಹುಸೇನ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.