ವಾಡಿ: ‘ಹಲಕರ್ಟಿ ಗ್ರಾಮ ಪಂಚಾಯಿತಿ ಸದಸ್ಯ ರಾಕೇಶ ಜಗದೀಶ ಸಿಂಧೆ ಅವರು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರ ಅಧ್ಯಕ್ಷ ಸ್ಥಾನ ರದ್ದು ಮಾಡಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.
ಹಲಕರ್ಟಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಈರಣ್ಣ ರಾವೂರಕರ ಮಾತನಾಡಿ,‘ಸದಸ್ಯ ಸ್ಥಾನಕ್ಕೆ ಬಿಸಿಎ ಗೊಂದಲಿಗ ಪ್ರಮಾಣಪತ್ರ ಸಲ್ಲಿಸಿ ರಾಕೇಶ ಸಿಂಧೆ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಸಿಬಿ ಮರಾಠ ಪ್ರಮಾಣಪತ್ರ ಸಲ್ಲಿಸಿ ಆಯ್ಕೆಯಾಗಿದ್ದಾರೆ. ಶಾಲಾ ದಾಖಲಾತಿಯಲ್ಲಿ ಬಿಸಿಎ ಕೆಟಗರಿಯ ಹಿಂದು ಗೊಂದಲಿಗ ಎಂದಿದೆ’ ಎಂದರು.
‘ಚುನಾವಣೆ ಆಯೋಗ ಹಾಗೂ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು. ಈ ಬಗ್ಗೆ ವಾಡಿ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಒಂದೇ ತಿಂಗಳ ಅಂತರದಲ್ಲಿ ಪಂಚಾಯಿತಿಯ ₹38 ಲಕ್ಷ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಆಪಾದಿಸಿದರು.
ಮುಖಂಡ ಭೀಮು ಕೊಲ್ಕುಂದಿ ಮಾತನಾಡಿ, ಅಧ್ಯಕ್ಷ ರಾಕೇಶ ಸಿಂಧೆ ಹಾಗೂ ಅವರ ತಂದೆ ಜಗದೀಶ ಸಿಂಧೆ ಹಲಕರ್ಟಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಸಚಿವರ ಹೆಸರು ಹೇಳಿ ಜನರನ್ನು ಹೆದರಿಸುತ್ತಿದ್ದಾರೆ. ಇವರ ವಿರುದ್ಧ ಸಂಪೂರ್ಣ ತನಿಖೆ ನಡೆದು ತಕ್ಕ ಶಿಕ್ಷೆ ಆಗಬೇಕು’ ಎಂದು ಒತ್ತಾಯಿಸಿದರು.
ವಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ವೀರೇಶ ಕಪ್ಪರ ಮಾತನಾಡಿ,ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಲ್ಲವಾದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದರು.
ಬಿಜೆಪಿ ಸ್ಥಳೀಯ ಅಧ್ಯಕ್ಷ ಬಸವರಾಜ ಮೇಲಿನಮನಿ, ನೀಲಕಂಠ ಸಂಗಶೆಟ್ಟಿ, ಭಾಗಣ್ಣ ಹೊನಗುಂಟಿ ಹಾಗೂ ಇನ್ನಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.