ಕಲಬುರ್ಗಿ: ‘ಹೊಸ ಪೀಳಿಗೆಗೆ ಗಾಂಧೀಜಿ ಅವರ ಸತ್ಯ, ಅಹಿಂಸೆ ತತ್ವಗಳನ್ನು ತಿಳಿಸಿಕೊಡುವ ಅವಶ್ಯಕತೆ ಇದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಭಾನುವಾರ ಬಂದ ಮಹಾತ್ಮ ಗಾಂಧೀಜಿ ಅವರ ಸ್ತಬ್ಧ ಚಿತ್ರವನ್ನು ಬರಮಾಡಿಕೊಂಡು ಅವರು ಮಾತನಾಡಿದರು.
‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧೀಜಿಯವರ ಸಂದೇಶಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನದಿಂದಾಗಿ ರಾಜ್ಯದಾದ್ಯಂತ ಸ್ತಬ್ಧ ಚಿತ್ರ ಸಂಚರಿಸುತ್ತಿದೆ. ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗ, ಬಲಿದಾನ, ಅವರ ತತ್ವಗಳನ್ನು ಅರಿತು ಅಹಿಂಸಾ ಮಾರ್ಗದ ಮೇಲೆ ಎಲ್ಲರೂ ನಡೆಯಬೇಕು’ ಎಂದು ಆಶಿಸಿದರು.
‘ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಗಾಂಧೀಜಿಯವರ ತತ್ವಗಳನ್ನು ಹಾಗೂ ವಿಚಾರಧಾರೆಗಳನ್ನು ಒಡೆಯುವ ಹಾಗೂ ಅಶಾಂತಿಯನ್ನುಂಟು ಮಾಡುವ ಕಾರ್ಯಗಳು ನಡೆಯುತ್ತಿವೆ. ಇದನ್ನು ತಡೆಯಲು ಎಲ್ಲರೂ ಸರ್ವ ಧರ್ಮ ಸಮಾನ ಹಾಗೂ ಕೂಡಿ ಬಾಳಬೇಕು ಎಂಬ ಸಂದೇಶ ಸಾರಬೇಕಾಗಿದೆ’ ಎಂದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಶಾಸಕ ಎಂ.ವೈ.ಪಾಟೀಲ, ಮಾಜಿ ಮೇಯರ್ ಶರಣಕುಮಾರ ಮೋದಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಶ್ಯಾಮ ನಾಟೀಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.