ADVERTISEMENT

ಕಲಬುರಗಿ: ಸಮಸ್ಯೆಗಳ ಮೂಟೆ ಹೊತ್ತ ಗ್ರಾಮಗಳಿಗೆ ‘ಗಾಂಧಿ ಗ್ರಾಮ’ ಗರಿ!

ರಸ್ತೆ, ಶುದ್ಧ ಕುಡಿಯುವ ನೀರು, ಚರಂಡಿ ವ್ಯವಸ್ಥೆಯಂತಹ ಕನಿಷ್ಠ ಸೌಕರ್ಯ ಇಲ್ಲದ ಗ್ರಾಮಗಳಿಗೂ ಪುರಸ್ಕಾರ

ಮಲ್ಲಿಕಾರ್ಜುನ ನಾಲವಾರ
Published 7 ಅಕ್ಟೋಬರ್ 2024, 6:48 IST
Last Updated 7 ಅಕ್ಟೋಬರ್ 2024, 6:48 IST
ಕಲಬುರಗಿ ತಾಲ್ಲೂಕಿನ ಹರಸೂರ ಗ್ರಾಮದ ರಸ್ತೆಯ ದುಃಸ್ಥಿತಿ
ಕಲಬುರಗಿ ತಾಲ್ಲೂಕಿನ ಹರಸೂರ ಗ್ರಾಮದ ರಸ್ತೆಯ ದುಃಸ್ಥಿತಿ   

ಕಲಬುರಗಿ: ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ, ಚರಂಡಿ ಇಲ್ಲದ ಓಣಿಗಳು, ರಸ್ತೆಯಲ್ಲಿ ಹರಿಯುವ ಕೊಳಚೆ ನೀರು, ರಸ್ತೆ ಬದಿಯಲ್ಲೇ ಬಿದ್ದ ಕಸದ ರಾಶಿ, ಕೆಸರು ಗದ್ದೆಯಂತಾದ ರಸ್ತೆ, ತಂಬಿಗೆ ಹಿಡಿದು ಶಾಲಾ ಆವರಣದ ಗಿಡಗಂಟಿಗಳ ನಡುವೆ ಬಯಲು ಬಹಿರ್ದೆಸೆಗೆ ತೆರಳುವ ಸ್ಥಳೀಯರು...

ಇದು ಯಾವುದೋ ಕುಗ್ರಾಮದ ಚಿತ್ರಣವಲ್ಲ, 2023–24ನೇ ಸಾಲಿನ ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಭಾಜನವಾದ ಕಲಬುರಗಿ ತಾಲ್ಲೂಕಿನ 22 ಕಿ.ಮೀ. ದೂರದಲ್ಲಿರುವ ಹರಸೂರ ಗ್ರಾಮದ ವಾಸ್ತವ ಕಣ್ಣಿಗೆ ರಾಚಿದ ಪರಿ.

ಗುಂಡಿಗಳ ದರ್ಬಾರಿನ ರಸ್ತೆಯನ್ನು ಸರ್ಕಸ್ ಮಾಡುತ್ತಾ ಗ್ರಾಮವನ್ನು ಪ್ರವೇಶಿಸಬೇಕು. ರಸ್ತೆ ಬದಿಯಲ್ಲಿನ ಅವ್ಯವಸ್ಥೆ ಮತ್ತು ಅಸ್ವಚ್ಛತೆಯ ಹೊಲಸು ವಾಸನೆ ಮೂಗಿಗೆ ರಾಚುತ್ತದೆ. ಶಾಲಾ ಆವರಣವು ಹಂದಿಗಳ ಗೂಡಾಗಿದ್ದು, ಆಳೆತ್ತರ ಬೆಳೆದು ನಿಂತ ಗಿಡಗಂಟಿಗಳು ಬಯಲು ಬಹಿರ್ದೆಸೆಗೆ ಇಂಬು ಕೊಡುತ್ತಿವೆ.

ADVERTISEMENT

ನಿಮ್ಮೂರಿಗೆ ‘ಗ್ರಾಂಧಿ ಗ್ರಾಮ’ ಪುರಸ್ಕಾರ ಬಂದಿದೆಯಲ್ಲ ಎಂದು ಗ್ರಾಮದ ಯುವಕ ಅಹಮದ್ ಪಾಸಾಗೆ ಕೇಳಿದರೆ, ‘ನಮಗೆ ಅದರ ಬಗ್ಗೆ ಗೊತ್ತಿಲ್ಲ. ಕ್ಲೀನಾಗಿ ಕಾಣುವ ಪಂಚಾಯಿತಿ ಆಫೀಸ್ ನೋಡಿಯೇ ಅವಾರ್ಡ್‌ ಕೊಟ್ಟಿರಬಹುದು. ಪ್ರಶಸ್ತಿ ಕೊಡುವವರು ಗುಂಡಿಗಳ ರಸ್ತೆ ದಾಟಿ, ಮೂಗು ಮುಚ್ಚಿಕೊಂಡ ಬಂದು ಊರೆಲ್ಲ ನೋಡಿದರೆ ವಾಸ್ತವ ಸ್ಥಿತಿ ಏನಿದೆ ಎಂಬುದು ಗೊತ್ತಾಗುತ್ತಿತ್ತು. ಎಲ್ಲೋ ಕುಳಿತು ಅವಾರ್ಡ್‌ ಕೊಟ್ಟಿರುತ್ತಾರೆ ಬಿಡಿ ಸರ್’ ಎಂದು ಬೇಸರ ವ್ಯಕ್ತಪಡಿಸಿದರು.

ಹರಸೂರ ಗ್ರಾಮ ಮಾತ್ರವಲ್ಲ, ಪುರಸ್ಕಾರ ಪಡೆದ ಬಹುತೇಕ ಗ್ರಾಮಗಳ ವಾಸ್ತವ ಸ್ಥಿತಿ ಅವಲೋಕಿಸಿದರೆ ನಿಜಾಂಶ ಬಯಲಾಗುತ್ತದೆ. ಕೆಲವು ಗ್ರಾಮಗಳು ನರೇಗಾದಂಥ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಪುರಸ್ಕಾರಕ್ಕೆ ಕಳೆ ತಂದಿವೆ.

ಸಮಸ್ಯೆಗಳು ಅಪಾರ

ಶಹಾಬಾದ್: ಗಾಂಧಿ ಗ್ರಾಮ ಪುರಸ್ಕಾರದ ಮುಗುಳನಾಗಾಂವ ಗ್ರಾ.ಪಂ. ಮೂಲಸೌಕರ್ಯಗಳಿಂದ ವಂಚಿತವಾಗಿ ಬಳಲುತ್ತಿದೆ.

ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ, ಕಬ್ಬಿಣದ ರಾಡುಗಳು ಹೊರಬಂದಿವೆ. ಸಮರ್ಪಕ ಚರಂಡಿ ಜಾಲ ಇಲ್ಲದೆ ರಸ್ತೆ ಮೇಲೆ ಕೊಳಚೆ ನೀರು ಹರಿದಾಡಿ ದುರ್ವಾಸನೆ ಬೀರುತ್ತಿದೆ. ರಸ್ತೆಗಳ ಬದಿಯೇ ಬಯಲು ಶೌಚಾಲಯಗಳ ತಾಣವಾಗಿವೆ. ವಾಹನ ಚಾಲಕರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಿದೆ.

ಅಳ್ಳಗಿ (ಬಿ); ಶೂನ್ಯ ಅಭಿವೃದ್ಧಿ

ಅಫಜಲಪುರ: ಗಾಂಧಿ ಗ್ರಾಮ ಪುರಸ್ಕೃತ ಅಳ್ಳಗಿ (ಬಿ) ಗ್ರಾ.ಪಂ. ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಗಳು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. 

ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿಯುತ್ತದೆ. ಶುದ್ಧ ಕುಡಿಯುವ ನೀರಿನ ಘಟಕ ದಶಕಗಳಿಂದ ಗಿಡಗಂಟಿಯಿಂದ ಆವೃತ್ತವಾಗಿದೆ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಯಾವುದೇ ವಾರ್ಡ್‌ನಲ್ಲಿಯೂ ಬೀದ ದೀಪ ವ್ಯವಸ್ಥೆ ಕಾಣಸಿಗದು. ಸಂಪರ್ಕ ರಸ್ತೆಗಳ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ತೆರವಿಗೆ ಮುಂದಾಗುತ್ತಿಲ್ಲ. ಬಯಲು ಬಹಿರ್ದೆಸೆ ಸಾಮಾನ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಸಂಜಯ ಪಾಟೀಲ, ಜಗನ್ನಾಥ ಡಿ. ಶೇರಿಕಾರ, ಮಲ್ಲಿಕಾರ್ಜುನ ಎಚ್.ಎಂ., ಅವಿನಾಶ ಬೋರಂಚಿ, ಮಂಜುನಾಥ ದೊಡಮನಿ, ಗುಂಡಪ್ಪ ಕರೆಮನೋರ, ನಿಂಗಣ್ಣ ಜಂಬಗಿ

ಅಫಜಲಪುರ ತಾಲ್ಲೂಕಿನ ಅಳ್ಳಗಿ (ಬಿ) ಹೊಸ ಗ್ರಾಮದ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಚರಂಡಿ ನೀರು
ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಗ್ರಾಮದ ಚರಂಡಿಯಲ್ಲಿ ಸೇರಿದ ತ್ಯಾಜ್ಯ
ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಮುಖ್ಯ ರಸ್ತೆಯ ದುಃಸ್ಥಿತಿ
ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಖುಷಿ ತಂದಿದ್ದು ಪುರಸ್ಕಾರದ ₹ 5 ಲಕ್ಷವನ್ನು ಮೂಲಸೌಲಭ್ಯಗಳನ್ನು ಒದಗಿಸಲು ಬಳಸಲಾಗುವುದು
ರಾಜಕುಮಾರ ಚವ್ಹಾಣ್ ಆಳಂದ ತಾಲ್ಲೂಕಿನ ಮುನ್ನೋಳ್ಳಿ ಗ್ರಾ.ಪಂ. ಅಧ್ಯಕ್ಷ
ಪ್ರತಿ ವಾರ್ಡ್‌ಗಳಲ್ಲಿ ಮಹಿಳಾ ಶೌಚಾಲಯಗಳು ನಿರ್ಮಾಣವಾದರೆ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಸಸಿಗಳನ್ನು ಬೆಳೆಸಲು ಕ್ರಿಯಾ ಯೋಜನೆ ರೂಪಿಸಬೇಕು
ಸಿದ್ದು ವೇದಶೆಟ್ಟಿ ಮುನ್ನೋಳ್ಳಿ ರೈತ ಮುಖಂಡ
ಪಂಚಾಯಿತಿ ಅಧಿಕಾರಿಗಳು ಅಧ್ಯಕ್ಷರ ಸೂಚನೆ ಮೇರೆಗೆ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸಿಸಿ ರಸ್ತೆ ಕುಡಿಯುವ ನೀರು ಬೀದಿ ದೀಪಗಳ ನಿರ್ವಹಣೆಗೆ ಗಮನ ಕೊಡುತ್ತಿದ್ದಾರೆ
ಶರಣು ಕೋಟ್ರಕಿ ಊಡಗಿ ಗ್ರಾಮಸ್ಥ
ಕಾಗದದ ಮೇಲೆ ಅಭಿವೃದ್ಧಿಯ ಕಾರ್ಯಗಳನ್ನು ತೋರಿಸಿ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದಿರಬಹುದು. ಗ್ರಾಮದಲ್ಲಿ ಓಡಾಡಿದರೆ ಕಣ್ಣಿಗೆ ಸಮಸ್ಯೆಗಳೇ ರಾರಾಜಿಸುತ್ತಿವೆ
ರಾಜು ಪೂಜಾರಿ ಸಾಥಖೇಡ ಗ್ರಾಮಸ್ಥ
ಕೇಂದ್ರಸ್ಥಾನಕ್ಕೆ‌ ಆದ್ಯತೆ
ಸೇಡಂ: ಊಡಗಿ ಗ್ರಾ.ಪಂ. ವ್ಯಾಪ್ತಿಗೆ ಕಲಕಂಭ ಹಂಗನಳ್ಳಿ ಮತ್ತು ಅಳ್ಳೊಳ್ಳಿ ಗ್ರಾಮಗಳು ಬರುತ್ತವೆ. ಕೇಂದ್ರ ಸ್ಥಾನದ ಊಡಗಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದ್ದು ಉಳಿದ ಗ್ರಾಮಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಅಭಿವೃದ್ಧಿಯ ಸ್ಪರ್ಶ ಸಿಕ್ಕಿಲ್ಲ. ಕುಡಿಯುವ ನೀರು ಪೂರೈಕೆ ಬೀದಿ ದೀಪಗಳು ಚರಂಡಿ ಸ್ವಚ್ಛತೆ ನಿರ್ವಹಣೆ ಸಾಂಕ್ರಾಮಿಕ ರೋಗಗಳ ಜಾಗೃತಿ ಸಮರ್ಪಕವಾಗಿದೆ. ಆದರೆ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಸರಿಯಾಗಿಲ್ಲ. ಹೀಗಾಗಿ ಸ್ಥಳೀಯರು ಬಯಲು ಬಹಿರ್ದೆಸೆಯನ್ನು ಅವಲಂಭಿಸಿದ್ದಾರೆ. ಹಂಗನಳ್ಳಿಯಲ್ಲಿ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದರೂ ಪಂಚಾಯಿತಿಯವರು ಗಮನ ಹರಿಸಿಲ್ಲ ಎನ್ನುತ್ತಾರೆ ಸ್ಥಳೀಯರು.
ಸ್ವಚ್ಛತೆಗೆ ಚರಂಡಿ ಅವ್ಯವಸ್ಥೆಯೇ ಸವಾಲು
ಚಿಂಚೋಳಿ: ಚಂದನಕೇರಾ ಗ್ರಾಮಕ್ಕೆ ‘ಗಾಂಧಿ ಗ್ರಾಮ‌’ ಪುರಸ್ಕಾರ ಲಭಿಸಿದ್ದರೂ ಸ್ವಚ್ಛತೆಗೆ ಚರಂಡಿ ಅವ್ಯವಸ್ಥೆಯೇ ಸವಾಲಾಗಿದೆ. ಗ್ರಾಮದಲ್ಲಿ ಸಮಾಧಾನಕರ ರೀತಿಯಲ್ಲಿ ಮೂಲಸೌಕರ್ಯಗಳಿವೆ. ಪಂಚಾಯಿತಿ ವ್ಯಾಪ್ತಿಯ ಸಣ್ಣ ಗ್ರಾಮಗಳು ಹಾಗೂ ತಾಂಡಾಗಳಲ್ಲಿ ಸ್ವಚ್ಛತೆಯ ಜತೆಗೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭ ಮಾಡಬೇಕಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸಲಾಗುತ್ತಿದೆ. ಆದರೆ ನೀರು ಶುದ್ಧೀಕರಣ ಮಾಡದೆ ಪೂರೈಸಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪ. ಶಾಲಾ–ಕಾಲೇಜು ವಸತಿ‌ನಿಲಯ ಹೊಸ ಬಡಾವಣೆಗಳಿಗೆ ಮೂಲಸೌಕರ್ಯ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.
ಗುಂಡಗುರ್ತಿಯಲ್ಲಿ ಸಮಸ್ಯೆಗಳ ಗುಡ್ಡೆ
ಚಿತ್ತಾಪುರ: ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಭಾಜನವಾದ ಗುಂಡಗುರ್ತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಸಮಸ್ಯೆಗಳ ಗುಡ್ಡೆ ಬಿದ್ದಿವೆ. ಗ್ರಾಮದ ಮುಖ್ಯ ರಸ್ತೆಯು ಕೊಳಚೆಯಿಂದ ಆವೃತವಾಗಿದೆ. ಚರಂಡಿಯಲ್ಲಿ ತ್ಯಾಜ್ಯ ತುಂಬಿ ಗಬ್ಬೆದ್ದು ನಾರುತ್ತಿದೆ. ಸ್ಥಳೀಯ ನಿವಾಸಿಗಳಿಗೆ ನಿತ್ಯವೂ ದುರ್ವಾಸನೆಯ ನರಕಯಾತನೆ ತಪ್ಪುತ್ತಿಲ್ಲ. ಕಿರಿಯ ಆರೋಗ್ಯ ಸಹಾಯಕರ ಕೇಂದ್ರದ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಮಹಿಳೆಯರಿಗಾಗಿ ನಿರ್ಮಿಸಿದ ಸಾಮೂಹಿಕ ಶೌಚಾಲಯ ಕಟ್ಟಡ ಇನ್ನೂ ಬಳಕೆಗೆ ನೀಡಿಲ್ಲ. ಸ್ವಲ್ಪ ಮಳೆ ಬಂದರೂ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತದೆ. ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಸ್ವಗ್ರಾಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿಯ ತವರೂರು ಸಚಿವ ಪ್ರಿಯಾಂಕ್ ಖರ್ಗೆ ಅವರ ತಾಯಿಯ ಮನೆಯಿರುವ ಗುಂಡಗುರ್ತಿ ಮಾದರಿ ಗ್ರಾಮವಾಗಿ ಸಮಗ್ರ ಅಭಿವೃದ್ಧಿ ಹೊಂದಬೇಕಿತ್ತು ಎಂಬುದು ಸ್ಥಳೀಯರ ಆಶಯ.
ವರವಾದ ನರೇಗಾ
ಆಳಂದ: ‘ಗಾಂಧಿ ಗ್ರಾಮ’ ಪುರಸ್ಕಾರದ ಮುನ್ನೋಳ್ಳಿ ಗ್ರಾ.ಪಂ. ನರೇಗಾ ಯೋಜನೆ  ಅನುದಾನ ಸದ್ಬಳಕೆ ಮಾಡಿಕೊಂಡಿದೆ. ನರೇಗಾದಿಂದ ಗಂಗಮ್ಮನ ಕೆರೆ ಭರ್ತಿಯಾಗಿದ್ದು ಅಂತರ್ಜಲಮಟ್ಟದಲ್ಲಿ ವೃದ್ಧಿಯಾಗಿದೆ. ಜನ–ಜಾನುವಾರುಗಳಿಗೂ ಅನುಕೂಲವಾಗಿದೆ. ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆಗೆ ಕಂಪೌಂಡ್‌ ನಿರ್ಮಿಸಲಾಗಿದೆ. ಕುಡಿಯುವ ನೀರಿಗಾಗಿ 30 ಕಿರು ನೀರಿನ ಟ್ಯಾಂಕ್‌ಗಳನ್ನು ಕಟ್ಟಲಾಗಿದೆ. ನರೇಗಾದಡಿ ಮುನ್ನೋಳ್ಳಿ ಕುಣಿಸಂಗಾವಿ ರೈತರಿಗೆ 20 ದನದ ಕೊಟ್ಟಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಸ್ವಚ್ಛತೆ ನಿರ್ವಹಣೆಯು ಕಳಪೆಯಾಗಿದೆ. ಬಯಲು ಬಹಿರ್ದೆಸೆಗೆ ಹೋಗುವುದು ತಪ್ಪಿಲ್ಲ. ಎರಡು ಶೌಚಾಲಯಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆಗಾಲ ಬೇಸಿಗೆಯಲ್ಲಿ ಮಹಿಳೆಯರ ಸಂಕಷ್ಟ ಇನ್ನು ತಪ್ಪಿಲ್ಲ ಎನ್ನುತ್ತಾರೆ ಗ್ರಾಮದ ಶೀಲಾಬಾಯಿ
ಸೌಲಭ್ಯಗಳ ಕೊರತೆ ನಿರ್ವಹಣೆ ಬರ
ಕಾಳಗಿ: ಗಾಂಧಿ ಗ್ರಾಮ ಪ್ರಶಸ್ತಿ ಪಡೆದ ಮಾಡಬೂಳ ಗ್ರಾಮದಲ್ಲಿ ಸೌಲಭ್ಯಗಳ ಕೊರತೆಯ ಜತೆಗೆ ನಿರ್ವಹಣೆ ಬರವೂ ಕಾಡುತ್ತಿದೆ. ಜೆಜೆಎಂ ಜತೆಗೆ ಒಂದು ಶುದ್ಧ ಕುಡಿಯುವ ನೀರಿನ ಘಟಕವಿದ್ದು ಅವುಗಳ ಬಳಕೆಯೂ ಆಗುತ್ತಿದೆ. ಆದರೆ ಸೋರಿಕೆಯಾಗುವ ನೀರು ಹರಿಯಲು ಸರಿಯಾದ ಚರಂಡಿಗಳಿಲ್ಲ. ರಸ್ತೆ ಬದಿಯಲ್ಲಿ ತ್ಯಾಜ್ಯ ಬಿದ್ದರೂ ವಿಲೇವಾಡಿ ಮಾಡುವವರಿಲ್ಲ. ತ್ಯಾಜ್ಯದೊಂದಿಗೆ ಚರಂಡಿ ನೀರು ಸೇರಿ ಹಬ್ಬು ವಾಸನೆ ಹಬ್ಬುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಬೀದಿ ದೀಪಗಳು ಹಗಲು ರಾತ್ರಿ ಎನ್ನದೆ ಉರಿಯುತ್ತಿರುತ್ತವೆ. ಕೆಲವು ಕಡೆ ಅವಧಿಗೂ ಮುನ್ನ ಸಿಸಿ ರಸ್ತೆಗಳು ಹಾಳಾಗಿವೆ. ಅನೇಕ ಕಡೆ ಸಿಸಿ ರಸ್ತೆ ಮರೀಚಿಕೆಯಾಗಿದೆ. ಬಯಲು ಬಹಿರ್ದೆಸೆ ಸಾಮಾನ್ಯವಾಗಿದ್ದು ಸಾರ್ವಜನಿಕ ಶೌಚಾಲಯದ ಕೊರತೆ ಎದ್ದುಕಾಣುತ್ತದೆ.
ಇಲ್ಲಗಳ ನಡುವಿನ ಸಾಥಖೇಡ
ಯಡ್ರಾಮಿ: ಗಾಂಧಿ ಗ್ರಾಮ ಪುರಸ್ಕೃತ ಸಾಥಖೇಡ ಗ್ರಾಮದಲ್ಲಿ ಡಾಂಬರು ರಸ್ತೆ ಕಸ ವಿಲೇವಾರಿ ಸಾರ್ವಜನಿಕ ಶೌಚಾಲಯ ಇಲ್ಲ. ಕುಡಿಯುವ ನೀರಿಗೆ ನಿತ್ಯ ಸಮಸ್ಯೆಯಾಗಿದೆ. ಒಳ ಚರಂಡಿ ಹಾಗೂ ಸಿಸಿ ರಸ್ತೆಯೂ ಮರೀಚಿಕೆಯಾಗಿದೆ. ಸಂಪರ್ಕ ರಸ್ತೆಯ ಅಲ್ಲಲ್ಲಿ ಗುಂಡಿಗಳು ಬಿದ್ದು ಎರಡೂ ಬದಿಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಕಸ ಸಂಗ್ರಹಿಸುವ ವಾಹನಗಳು ಪಂಚಾಯಿತಿ ಮುಂದೆ ನಿಲ್ಲುತ್ತವೆ. ತ್ಯಾಜ್ಯ ವಿಲೇವಾರಿ ಆಗದೆ ಗಬ್ಬು ವಾಸನೆ ಬರುತ್ತದೆ. ಬಸ್ ನಿಲ್ದಾಣದ ತುಂಬಾ ಕಸದ ರಾಶಿಯೇ ಬಿದ್ದಿದೆ. ಕೊಳವೆ ಬಾವಿ ಇದ್ದರೂ ಸರಿಯಾಗಿ ನೀರು ಬರುವುದಿಲ್ಲ. ಅವುಗಳ ಸುತ್ತಲೂ ಸ್ವಚ್ಛತೆ ಇಲ್ಲ. ಗ್ರಾ.ಪಂ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಬೀದಿ ದೀಪ ಹೈಮಾಸ್ಟ್‌ ನಿರ್ವಹಣೆಯೂ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.