ADVERTISEMENT

ಕಲಬುರಗಿ: ಹಿಂದೂ ಮಹಾಗಣಪತಿ ವಿಸರ್ಜನೆ ಇಂದು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 5:11 IST
Last Updated 27 ಸೆಪ್ಟೆಂಬರ್ 2024, 5:11 IST
ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಕಲಬುರಗಿಯ ಪ್ರಮುಖ ರಸ್ತೆಗಳಲ್ಲಿ ಗುರುವಾರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಡಿಸಿಪಿ ಕನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು
ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಕಲಬುರಗಿಯ ಪ್ರಮುಖ ರಸ್ತೆಗಳಲ್ಲಿ ಗುರುವಾರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಡಿಸಿಪಿ ಕನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು   

ಕಲಬುರಗಿ: ‘ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಬಹಮನಿ ಕೋಟೆ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ ವಿಸರ್ಜನೆಯ ಶೋಭಾಯಾತ್ರೆ ಸೆಪ್ಟೆಂಬರ್ 27ರಂದು ಜರುಗಲಿದೆ’ ಎಂದು ಸಮಿತಿಯ ಅಧ್ಯಕ್ಷ ನಾಗೇಂದ್ರ ಕಾಬಡೆ ತಿಳಿಸಿದರು.

‘ಬೆಳಿಗ್ಗೆ 10ಕ್ಕೆ ಹರಾಜು ಪ್ರಕ್ರಿಯೆ, ವಿಶೇಷ ಪೂಜೆ, ಮಹಾ ಮಂಗಳಾರತಿಯ ಬಳಿಕ ಶೋಭಾಯಾತ್ರೆ ಆರಂಭವಾಗಲಿದೆ. ಮೆರವಣಿಗೆಯು ಏಷಿಯನ್ ಪ್ರಕಾಶ್ ಮಾಲ್, ಲೋಹಾರ ಗಲ್ಲಿ, ಕಿರಾಣಾ ಬಜಾರ್, ಹಳೆ ಚೌಕ್ ಪೊಲೀಸ್ ಠಾಣೆ, ಜಗತ್ ವೃತ್ತದ ಮೂಲಕ ಸಾಗಿ ಸಂಜೆ 6.30ಕ್ಕೆ ಅಪ್ಪನ ಕೆರೆ ಬಳಿ ಸಂಪನ್ನಗೊಳ್ಳಲಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಶೋಭಾಯಾತ್ರೆಯಲ್ಲಿ ಸುಮಾರು 20 ಸಾವಿರ ಗಣೇಶನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಲಗೆ, ಡೊಳ್ಳು, ಚಿಟ್ಟ ಹಲಗೆ, ಲಂಬಾಣಿ ನೃತ್ಯ, ಕರಾವಳಿ ಭಾಗದ ಚಂಡಿ ವಾದ್ಯದ ಜತೆಗೆ ಡಿಜೆ ಹಾಡು ಸಹ ಇರಲಿದೆ. ಮೆರವಣಿಗೆಯ ಮಾರ್ಗದಲ್ಲಿ ಭಕ್ತರು, ವ್ಯಾಪಾರಿಗಳು ಗಣೇಶನ ಸ್ವಾಗತಕ್ಕೆ ಅಲಂಕಾರ ಮಾಡುವರು. ಮೂರು ಸ್ಥಳಗಳಲ್ಲಿ ಪ್ರಸಾದ ಹಾಗೂ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದರು.

ADVERTISEMENT

‘ಶೋಭಾಯಾತ್ರೆಯಲ್ಲಿ ತೆಲಂಗಾಣದ ಘೋಷಮಹಲ್ ಕ್ಷೇತ್ರದ ಶಾಸಕ ರಾಜಾಸಿಂಗ್ ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

‘ಮಹಾಗಣಪತಿ ಸಮಿತಿಯು ಪಕ್ಷಾತೀತವಾಗಿದ್ದು, ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ತಮ್ಮ ಭಕ್ತಿಯ ದಾಸೋಹ ಸೇರಿ ಹಲವು ಸೇವೆ ಮಾಡಿದ್ದಾರೆ. ಪಕ್ಷದ ವಿಚಾರವಾಗಿ ಬಹಿರಂಗಪಡಿಸಿಲ್ಲ. ಕೆಲ ರಾಜಕೀಯ ಕಾರಣಗಳಿಂದ ಬರಲು ದರ್ಶನಕ್ಕೂ ಬರಲು ಸಾಧ್ಯವಾಗಿರಲಿಕ್ಕಿಲ್ಲ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಸುರೇಶ್ ಟೆಂಗಳಿ, ಸಿದ್ದರಾಜ ಬಿರಾದಾರ, ಶಿವರಾಜ ಪಾಟೀಲ, ಡಾ.ಶರಣರಾಜ, ರಾಜು ಎಂ.ಸಿ.ಆರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.