ADVERTISEMENT

ದಶಕಗಳ ಧಾರ್ಮಿಕ ಪರಂಪರೆ: ಬೆನಕನಹಳ್ಳಿಯಲ್ಲಿ ‘ಪರಿಸರ ಸ್ನೇಹಿ ಬೆನಕ’

ಅವಿನಾಶ ಬೋರಂಚಿ
Published 7 ಸೆಪ್ಟೆಂಬರ್ 2024, 6:29 IST
Last Updated 7 ಸೆಪ್ಟೆಂಬರ್ 2024, 6:29 IST
ಬೆನಕನಹಳ್ಳಿ ಗ್ರಾಮದ ಬೆನಕನ ದೇವಾಲಯ
ಬೆನಕನಹಳ್ಳಿ ಗ್ರಾಮದ ಬೆನಕನ ದೇವಾಲಯ   

ಸೇಡಂ: ತಾಲ್ಲೂಕಿನ ಬೆನಕನಹಳ್ಳಿ ಗ್ರಾಮವು ‘ಪರಿಸರ ಸ್ನೇಹಿ ಬೆನಕ’ನ (ಮಣ್ಣಿನ ಗಣಪ) ಪ್ರತಿಷ್ಠಾಪನೆಗೆ ಪ್ರಸಿದ್ಧಿ ಪಡೆದು ಧಾರ್ಮಿಕ ಕಾರ್ಯಗಳಲ್ಲಿ ಛಾಪು ಮೂಡಿಸಿದ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅನೇಕ ದಶಕಗಳಿಂದ ಗ್ರಾಮದಲ್ಲಿ ‘ಪರಿಸರ ಸ್ನೇಹಿ ಬೆನಕ’ನನ್ನೆ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿರುವುದರಿಂದ ಈ ಗ್ರಾಮಕ್ಕೆ ‘ಬೆನಕನಹಳ್ಳಿ’ ಎಂಬ ಹೆಸರಿರುವ ಪ್ರತೀತಿ ಇದೆ. ಹೀಗಾಗಿ ಈ ಪರಂಪರೆಗೆ ಗ್ರಾಮಸ್ಥರ ಒಕ್ಕೂರಲಿನ ಸಹಕಾರವಿದೆ. ವಿಶೇಷವೆಂದರೆ ಗ್ರಾಮದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣೇಶನ ನಿಷಿದ್ಧವಿದ್ದು, ಗ್ರಾಮದಲ್ಲಿ ದೊಡ್ಡದಾದ ಒಂದೇ ‘ಪರಿಸರ ಸ್ನೇಹಿ ಬೆನಕ’ ಪ್ರತಿಷ್ಠಾಪಿಸಲಾಗುತ್ತದೆ. ಎಲ್ಲರೂ ನಿತ್ಯ ಪೂಜಿಸಿ, ಆರಾಧಿಸುತ್ತಾರೆ. ಗ್ರಾಮದಲ್ಲಿ ಒಂದೇ ಬೆನಕ ಎಲ್ಲರ ಆರಾಧನೆಯ ದೈವವಾಗಿರುವುದು ಗಮನಾರ್ಹ. ಈ ‘ಪರಿಸರ ಸ್ನೇಹಿ ಬೆನಕ’ ಒಂದೇ ದಿನ ಖರೀದಿ ಮಾಡಿ ಪ್ರತಿಷ್ಠಾಪಿಸುವುದಿಲ್ಲ!

ಬದಲಾಗಿ ಗ್ರಾಮಸ್ಥರೇ ಸ್ವತಃ ಪರಿಸರ ಸ್ನೇಹಿ ಗಣೇಶನನ್ನು 18 ದಿನಗಳವರೆಗೆ ತಯಾರಿಸುತ್ತಾರೆ. ಇದಕ್ಕೆ ವಿವಿಧ ಸಮುದಾಯಗಳ ಜನರ ಸಹಕಾರವಿದ್ದು, ಜವಾಬ್ದಾರಿಗೆ ತಕ್ಕ ಕಾರ್ಯ ನಡೆಯುತ್ತಿರುವುದು ಜಾತ್ಯತೀತತೆಗೆ ನಿದರ್ಶನವಾಗಿದೆ. ಗ್ರಾಮದಲ್ಲಿ ಬೆನಕನ ದೇವಾಲಯವೇ ಕಟ್ಟಲಾಗಿದ್ದು, ಅದೇ ದೇವಾಲಯದಲ್ಲಿ ಮೂರ್ತಿ ತಯಾರಿಕೆ ಕಾರ್ಯ ಎರಡು ದಿನಕ್ಕೊಮ್ಮೆ ನಡೆಯುತ್ತದೆ. ದಿನ ಪಾದ, ಬೆರಳು, ಕಾಲು, ಕೈ, ಹೊಟ್ಟೆ, ಭುಜ, ಕುತ್ತಿಗೆ, ಮುಖ, ಕಣ್ಣು, ಕಿವಿ, ತಲೆ, ಕಿರೀಟ, ಹೀಗೆ ಎರಡು ದಿನಕ್ಕೊಮ್ಮೆ ತಯಾರಿಸುತ್ತಾ, 18 ದಿನಗಳವರೆಗೆ ಸಂಪೂರ್ಣ ಮೂರ್ತಿಯನ್ನು ಸಿದ್ಧಪಡಿಸುತ್ತಾರೆ.

ADVERTISEMENT

‘ಕೋಲಿ ಸಮಾಜದವರು ಬೆನಕನ ದೇವಾಲಯ ಸ್ವಚ್ಛಗೊಳಿಸಿ ಸುಣ್ಣ ಮತ್ತು ಬಣ್ಣ ಬಳಿದರೆ, ಕುರುಬ ಸಮಾಜದವರು ಬೆನಕನ ತಯಾರಿಕೆ ಬೇಕಾದ ಕೆಂಪು ಮಣ್ಣನ್ನು ತರುತ್ತಾರೆ. ವೀರಶೈವ ಲಿಂಗಾಯತ ಸಮಾಜದವರು ಮಣ್ಣನ್ನು ಸೋಸಿ ಹದ ಮಾಡುತ್ತಾರೆ. ಬ್ರಾಹ್ಮಣ ಸಮಾಜದವರು ಬೆನಕನ ಮೂರ್ತಿ ತಯಾರಿಸುತ್ತಾರೆ. ಉಳಿದ ಸಮಾಜದವರು ವಿವಿಧ ಕಾರ್ಯಗಳನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಾರೆ. ಗ್ರಾಮದ ಮುಖಂಡರಾದ ಅನಂತೇಶ್ವರರೆಡ್ಡಿ ಪಾಟೀಲ ಮತ್ತು ಶಿವಲಿಂಗರೆಡ್ಡಿ ಪಾಟೀಲ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥರು.

21 ದಿನಗಳ ಕಾಲ ಪ್ರತಿಷ್ಠಾಪಿಸುವ ಬೆನಕನ ದೇವಾಲಯದಲ್ಲಿ ನಿತ್ಯವು ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. 21ನೇ ದಿನ ‘ಅರ್ಥಿ’ ಮಾಡಲಾಗುತ್ತದೆ. ಜೊತೆಗೆ ‘ಬೆನಕೋತ್ಸವ’ ಧಾರ್ಮಿಕ ಕಾರ್ಯಕ್ರಮ ಮಾಡಿ, ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುವುದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿರುತ್ತದೆ. ಬೆನಕನಳ್ಳಿಯಿಂದ ಬೇರೆ ಗ್ರಾಮಕ್ಕೆ ಮದುವೆ ಮಾಡಿಕೊಟ್ಟ ಮಹಿಳೆಯರು ಈ ಹಬ್ಬಕ್ಕೆ ತಪ್ಪದೇ ಆಗಮಿಸಿ, ಆಶೀರ್ವಾದ ಪಡೆದು ಹಬ್ಬದಲ್ಲಿ ಸಮ್ಮಿಲಿತವಾಗುತ್ತಾರೆ.

ಬೆನಕನಹಳ್ಳಿ ಸೇರಿದಂತೆ ಸುತ್ತಲಿನ, ಕೋಡ್ಲಾ, ದಿಗ್ಗಾಂವ, ಕಲಕಂಭ, ಅಳ್ಳೊಳ್ಳಿ, ಸಿಂಧನಮಡು, ಡೋಣಗಾಂವ, ಸಾತನೂರ, ಊಡಗಿ, ಸೇಡಂ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.

ಶಿವಲಿಂಗರೆಡ್ಡಿ ಪಾಟೀಲ
ಗ್ರಾಮಸ್ಥರ ಸಹಕಾರದಿಂದಾಗಿ ಅನೇಕ ದಶಕಗಳಿಂದ ಪರಿಸರ ಸ್ನೇಹಿ ಬೆನಕನನ್ನೇ ಪ್ರತಿಷ್ಠಾಪಿಸಲಾಗುತ್ತಿದೆ. ಎಲ್ಲರ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ.
ಶಿವಲಿಂಗರೆಡ್ಡಿ ಪಾಟೀಲ ಬೆನಕೋತ್ಸವ ಸಮಿತಿ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.