ADVERTISEMENT

ಕಲಬುರಗಿ | ಬಿಲ್‌ ಕಟ್ಟದ ಇಲಾಖೆ: ಜೆಸ್ಕಾಂಗೆ ‘ಬರ’

ಸರ್ಕಾರದ ವಿವಿಧ ಇಲಾಖೆಗಳಿಂದ ₹2,941 ಕೋಟಿ ವಿದ್ಯುತ್ ಶುಲ್ಕ ಬಾಕಿ

ಮಲ್ಲಿಕಾರ್ಜುನ ನಾಲವಾರ
Published 19 ಜೂನ್ 2024, 5:04 IST
Last Updated 19 ಜೂನ್ 2024, 5:04 IST
ಕಲಬುರಗಿಯಲ್ಲಿನ ಜೆಸ್ಕಾಂ ಕಚೇರಿ
ಕಲಬುರಗಿಯಲ್ಲಿನ ಜೆಸ್ಕಾಂ ಕಚೇರಿ   

ಕಲಬುರಗಿ: ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಗ್ರಾಮ ಪಂಚಾಯಿತಿಗಳು, ಕುಡಿಯುವ ನೀರು ಸರಬರಾಜು, ನಗರಾಭಿವೃದ್ಧಿ ಇಲಾಖೆ ಸೇರಿ ಇತರೆ ಇಲಾಖೆಗಳು ₹2,941.16 ಕೋಟಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿವೆ. ಇದರಲ್ಲಿ ಗ್ರಾಮ ಪಂಚಾಯಿತಿಗಳದ್ದೇ ಸಿಂಹಪಾಲಿದೆ.

ಜೆಸ್ಕಾಂ ವ್ಯಾಪ್ತಿಯಲ್ಲಿ ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಿವೆ. ಅತಿ ಹೆಚ್ಚು ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡ ಜಿಲ್ಲೆಗಳಲ್ಲಿ ವಿಜಯನಗರ ಮತ್ತು ಯಾದಗಿರಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿವೆ. ಕೊಪ್ಪಳ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಜೆಸ್ಕಾಂ ನೀಡಿದ ಮಾಹಿತಿ ಅನ್ವಯ ಏಳು ಜಿಲ್ಲೆಗಳ ಗ್ರಾಮ ಪಂಚಾಯಿತಿಗಳು ₹2,128 ಕೋಟಿ, ನಗರಾಭಿವೃದ್ಧಿ ಇಲಾಖೆ (ಯುಡಿಡಿ) ₹144 ಕೋಟಿ, ಸಣ್ಣ ಮತ್ತು ಬೃಹತ್ ಏತ ನೀರಾವರಿ ಇಲಾಖೆ ₹ 16.25 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ (ಬಹುಗ್ರಾಮ ಯೋಜನೆ; ಆರ್‌ಡಿಡಬ್ಲ್ಯು& ಎಸ್‌ಡಿ) ಇಲಾಖೆ ₹23.59 ಕೋಟಿ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ತಲಾ ₹1.78 ಕೋಟಿ, ವಸತಿ ಗೃಹ ಮಂಡಳಿ ₹1.08 ಕೋಟಿ ಬಾಕಿ ಉಳಿಸಿಕೊಂಡಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಿಎಸ್‌ಎನ್‌ಎಲ್‌ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಶುಲ್ಕ ಬಾಕಿಯಿಂದ ಹೊರತಾಗಿಲ್ಲ.

ADVERTISEMENT

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿದ್ಯುತ್ ಸರಬರಾಜು ಮಾಡುವ ಹೊಣೆಗಾರಿಗೆ ಜೆಸ್ಕಾಂ ಮೇಲಿದೆ. ಆದರೆ, ವಿವಿಧ ಸರ್ಕಾರಿ ಇಲಾಖೆಗಳು ಕೋಟ್ಯಂತರ ರೂಪಾಯಿ ಶುಲ್ಕ ಬಾಕಿ ಉಳಿಸಿಕೊಂಡ ಕಾರಣ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಖರೀದಿಸುವುದು ಜೆಸ್ಕಾಂಗೆ ಸವಾಲಾಗಿದೆ. ಬೇಸಿಗೆಯ ಕೊನೆಯ ದಿನಗಳಲ್ಲಿ ಬೇಡಿಕೆಯಷ್ಟು ವಿದ್ಯುತ್ ಪೂರೈಕೆ ಮಾಡಲು ಆಗದೆ ಅನಿಯಮಿತ ವಿದ್ಯುತ್ ಕಡಿತವಾಗಿತ್ತು. ಇದರ ನೇರ ಪರಿಣಾಮ ಜನಸಾಮಾನ್ಯರ ಮೇಲೆ ಆಗಿದೆ.

ಜನಸಾಮಾನ್ಯರು ವಿದ್ಯುತ್ ಶುಲ್ಕ ಕಟ್ಟದಿದ್ದರೆ ಜೆಸ್ಕಾಂ ಸಿಬ್ಬಂದಿ ಬಂದು ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುತ್ತಾರೆ. ಆದರೆ, ಸರ್ಕಾರಿ ಇಲಾಖೆಗಳು ನೂರಾರು ಕೋಟಿ ರೂಪಾಯಿ ಶುಲ್ಕ ಪಾವತಿಸಲು ಹಿಂದೇಟು ಹಾಕುತ್ತಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ನಷ್ಟದಿಂದ ಪಾರಾಗಲು ಸಾಮಾನ್ಯ ಗ್ರಾಹಕರ ಮೇಲೆ ದರ ಏರಿಕೆಯ ಹೊರೆ ಹೊರಿಸುತ್ತಿದ್ದಾರೆ ಎಂಬುದು ಗ್ರಾಹಕರ ಬೇಸರ.

₹1,593.26 ಕೋಟಿ ಆದಾಯ ಕೊರತೆ: ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ದರದಲ್ಲಿ ಸಬ್ಸಿಡಿ ನೀಡುತ್ತಿರುವ ಕಾರಣ ₹1,593.26 ಕೋಟಿ ಆದಾಯ ಕೊರತೆಯಾಗಿದೆ. ಈ ನಷ್ಟ ಭರಿಸಲು 2025ನೇ ಹಣಕಾಸು ವರ್ಷದಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಜೆಸ್ಕಾಂ ದರ ಪರಿಷ್ಕರಣೆಗೆ ಫೆಬ್ರುವರಿ ತಿಂಗಳಲ್ಲಿ ಪ್ರಸ್ತಾಪ ಸಲ್ಲಿಸಿತ್ತು.

2015ರಿಂದ ಕೊನೆಯ ಹಣಕಾಸು ವರ್ಷದವರೆಗಿನ ಬಾಕಿ ಉಳಿದಿರುವ ವಿದ್ಯುತ್ ಶುಲ್ಕ ವಸೂಲಿಗೆ ಹಣಕಾಸು ವಿಭಾಗದವರು ಈಗಾಗಲೇ ಮುಂದಾಗಿದ್ದಾರೆ

-ರವೀಂದ್ರ ಕರಲಿಂಗಣ್ಣವರ್ ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ

ಗ್ರಾ.ಪಂ.ಗಳಿಂದ ₹2128 ಕೋಟಿ ಬಾಕಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್‌) ಅಧೀನದ ಗ್ರಾಮ ಪಂಚಾಯಿತಿಗಳದ್ದೇ ಅತ್ಯಧಿಕ ಅಂದರೆ ₹2128 ಕೋಟಿ ಬಿಲ್‌ ವಸೂಲಿ ಆಗಬೇಕಿದೆ. ಬಾಕಿ ಶುಲ್ಕ ಪಾವತಿಗೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಪತ್ರ ಬರೆದರೂ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಏಳು ಜಿಲ್ಲೆಗಳ ಪೈಕಿ ಬೀದರ್‌ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಂದ ಅತ್ಯಧಿಕ ಮೊತ್ತ ₹512 ಕೋಟಿ ಬಾಕಿ ಇದೆ. ಅತಿ ಕಡಿಮೆ ಮೊತ್ತ ಕೊಪ್ಪಳ ಜಿಲ್ಲೆಯ ಗ್ರಾ.ಪಂ.ಗಳಿಂದ ₹100 ಕೋಟಿ ಬರಬೇಕಿದೆ.

ಜಿಲ್ಲಾವಾರು ಗ್ರಾ.ಪಂಗಳ ವಿದ್ಯುತ್ ಶುಲ್ಕ ಬಾಕಿ (₹ ಕೋಟಿಯಲ್ಲಿ) ಜಿಲ್ಲೆಗಳು;ಶುಲ್ಕ ಬಾಕಿ ಬಳ್ಳಾರಿ;282.27 ಬೀದರ್;512.2 ಕಲಬುರಗಿ;429 ಕೊಪ್ಪಳ;100 ರಾಯಚೂರು;272.76 ವಿಜಯನಗರ;418.25 ಯಾದಗಿರಿ;113.73 ಒಟ್ಟು;2128.26

ಜಿಲ್ಲಾವಾರು ವಿವಿಧ ಇಲಾಖೆಗಳ ವಿದ್ಯುತ್ ಶುಲ್ಕ ಬಾಕಿ (₹ ಕೋಟಿಯಲ್ಲಿ) ಜಿಲ್ಲೆಗಳು;ಶುಲ್ಕ ಬಾಕಿ ಬಳ್ಳಾರಿ;302.29 ಬೀದರ್;533.18 ಕಲಬುರಗಿ;479 ಕೊಪ್ಪಳ;107.92 ರಾಯಚೂರು;364.71 ವಿಜಯನಗರ;581 ಯಾದಗಿರಿ;572 ಒಟ್ಟು;2941.16

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.