ಕಲಬುರಗಿ: ‘ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಪರಿವರ್ತಕಗಳನ್ನು ಕೇವಲ 24 ಗಂಟೆಯ ಒಳಗೆ ಮರುಜೋಡಣೆ ಮಾಡುವ ಮೂಲಕ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಆದ್ಯತೆ ನೀಡಲಾಗಿದೆ’ ಎಂದುಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಹೇಳಿದರು.
‘ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಜೆಸ್ಕಾಂನಲ್ಲಿ ಈ ವರ್ಷ 3212 ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿದ್ದು ಅವುಗಳನ್ನು 24 ಗಂಟೆಗಳ ಒಳಗೇ ಬದಲಾಯಿಸಿ, ಹೊಸ ಪರಿವರ್ತಕ ಅಳವಡಿಸಿದ್ದೇವೆ. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು, ಆನ್‌ಲೈನ್ ಸಂಪರ್ಕ ಕೊಂಡಿ ಬೆಸೆಯಲಾಗಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ವಿದ್ಯುತ್ ಸಮಸ್ಯೆ ಬಗ್ಗೆ ದೂರು ನೀಡಲು ಸುಲಭವಾಗುವಂತೆ ‘1912’ ಟೋಲ್ ಫ್ರೀ ಸಂಖ್ಯೆ ನೀಡಲಾಗಿದೆ. ಇದಕ್ಕೆ ಕರೆ ಮಾಡಿ ಹೆಸರು, ಊರು ಹೇಳಿದರೆ ಸಾಕು ಸಂಬಂಧಿಸಿದ ಅಧಿಕಾರಿಗಳಿಗೆ ನೇರವಾಗಿ ಆ ದೂರು ತಲುಪುತ್ತದೆ. ಅಲ್ಲಿಂದಲೇ ಸಮಸ್ಯೆಗೆ ಸ್ಪಂದನೆ ಸಿಗುವಂತೆ ಮಾಡಲಾಗಿದೆ. ರೈತರು ಕೂಡ ತಮ್ಮ ಸಮಸ್ಯೆ ಏನೇ ಇದ್ದರೂ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು. ಕಚೇರಿಗಳಿಗೆ ಅಲೆದು ಸಮಯ ಹಾಳು ಮಾಡುವ ಬದಲು ಈ ಸುಲಭ ಮಾರ್ಗ ಬಳಸಿಕೊಳ್ಳಬೇಕು’ ಎಂದೂ ಅವರು ಹೇಳಿದರು.
‘ರೈತರ ದೂರು ಬಂದ ತಕ್ಷಣ ಇಂತಿಷ್ಟು ಸಮಯದಲ್ಲಿ ಅದು ನೋಂದಣಿ ಆಗಲೇಬೇಕು. ಇದರಲ್ಲಿ ವಿಳಂಬ ಮಾಡಿದರೆ ಅಥವಾ ಸಮಸ್ಯೆ ಬಗೆಹರಿಸಲು ಹಣ ಕೇಳಿದರೆ ರೈತರು ನೇರವಾಗಿ ನಮಗೆ ದೂರು ನೀಡಬಹುದು. ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದರು.
ವಿದ್ಯುತ್ ತಂತಿಗಳ ಮಾಹಿತಿ ನೀಡಿ: ವಸತಿ ಸ್ಥಳದಲ್ಲಿ ಜೋತುಬಿದ್ದ ತಂತಿ, ಶಾಲೆ– ಕಾಲೇಜು ಹತ್ತಿರವಿರುವ ಟ್ರಾನ್ಸ್‌ಫಾರ್ಮರ್, ಕೆಳಮಟ್ಟದಲ್ಲಿರುವ ತಂತಿಗಳನ್ನು ತೆರವುಗೊಳಿಸಲಾಗುತ್ತಿದೆ. ಜನರು ಇದರ ಬಗ್ಗೆಯೂ ಮಾಹಿತಿ ನೀಡಿದರೆ ತುರ್ತು ಕ್ರಮ ಜರುಗಿಸಲಾಗುವುದು’ ಎಂದು ರಾಹುಲ್ ತಿಳಿಸಿದರು.
‘ನಗರದಲ್ಲಿದ್ದ 196 ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಸಿಮೆಂಟ್ ಕಂಬ ಅಳವಡಿಸಲಾಗಿದೆ. ಇನ್ನೂ 46 ಕಂಬಗಳಿದ್ದು, ಶೀಘ್ರದಲ್ಲಿ ಅವುಗಳನ್ನೂ ಬದಲಾಯಿಸಲಾಗುವುದು. ಕೆಲವು ರಸ್ತೆಗಳ ಮಧ್ಯೆ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿರುವ ಕಾರಣ ಬದಲಾಯಿಸಲು ಸಮಯ ತೆಗೆದುಕೊಂಡಿದೆ’ ಎಂದೂ ಮಾಹಿತಿ ನೀಡಿದರು.
‘ಗಂಗಾ ಕಲ್ಯಾಣ ಯೋಜನೆ ಅಡಿ 3548 ರೈತರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇನ್ನೂ 400 ಅರ್ಜಿಗಳು ಬಾಕಿ ಇವೆ. ಕೆಲವು ಹೊಲಗಳಲ್ಲಿ ಬೆಳೆ ಬೆಳೆದುನಿಂತ ಕಾರಣ ಕಾಮಗಾರಿ ವಿಳಂಬವಾಗಿದೆ. ಉಳಿದಂತೆ ಆರೂ ಜಿಲ್ಲೆಗಳು ಸೇರಿ 233 ನೀರು ಸರಬರಾಜು ಘಟಕಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಮುಗಿದಿವೆ’ ಎಂದರು.
ಫೋನ್‌ಪೇ ಮೂಲಕ ವಿದ್ಯುತ್ ಬಿಲ್: ‘ಸದ್ಯ ಕೌಂಟರ್‌ಗಳಲ್ಲಿ ಬಿಲ್ ಪಾವತಿಸಲು ಹಣ ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ಇಲ್ಲಿಯೂ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ವಿವಿಧ ಆ್ಯಪ್‌ಗಳ ಮೂಲಕವೂ ಬಿಲ್ ಭರಿಸಿಕೊಳ್ಳಲು ಬೇಕಾದ ತರಬೇತಿ ನೀಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.