ಕಲಬುರಗಿ: ಮಹಾರಾಷ್ಟ್ರದ ಉಜ್ಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಕಳೆದ ನಾಲ್ಕು ದಿನಗಳಿಂದ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ಸ್ ನೀರು ಹರಿಸಲಾಗುತ್ತಿದ್ದು, ಅಫಜಲಪುರ ತಾಲ್ಲೂಕಿನ ಘತ್ತರಗಾ ಹಾಗೂ ಗಾಣಗಾಪುರ ಸೇತುವೆಗಳು ಮುಳುಗಡೆಯಾಗಿವೆ. ಎರಡು ದಿನ ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಘತ್ತರಗಾ-ಜೇರಟಗಿ ಮತ್ತು ಗಾಣಗಾಪುರ-ಇಟಗಾ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿದ್ದು, ತಡರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದಂತೆ ಮುಂಜಾಗ್ರತೆಯ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರ ಬಂದ್ ಮಾಡಿದ್ದಾರೆ. ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಗ್ರಾಮಗಳಿಗೆ ಭೇಟಿ ನೀಡಲು ಸೂಚನೆ
ಭೀಮಾ ನದಿಗೆ ತಡರಾತ್ರಿ ಅಪಾರ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಗ್ರಾಮಗಳಗೆ ರಕ್ಷಣಾ ಕಾರ್ಯಚರಣೆ ಮತ್ತು ಕಾಳಜಿ ಕೇಂದ್ರ ತೆರೆಯಲು ಮೇಲುಸ್ತುವಾರಿಗಳನ್ನು ನೇಮಿಸಲಾಗಿದೆ. ಅಫಜಲಪುರ, ಕಲಬುರಗಿ ಹಾಗೂ ಜೇವರ್ಗಿ ತಂಡದ ನೋಡಲ್ ಅಧಿಕಾರಿಗಳು ಎಚ್ಚರದಿಂದ ಇರಬೇಕು. ಕೂಡಲೇ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ತಾಲ್ಲೂಕಿನ ತಹಶೀಲ್ದಾರರು, ಇ.ಒ ಹಾಗೂ ಪೊಲೀಸ್ ಇಲಾಖೆಯು ನೋಡಲ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಸಾಧಿಸಿ ಪ್ರವಾಹದಿಂದ ಯಾವುದೇ ಜನ, ಜಾನುವಾರ ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆಯೂ ತಾಕೀತು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.