ADVERTISEMENT

ಜಿಮ್ಸ್‌: ಮುಗಿಯದ ಸರತಿ ಸಾಲು, ರೋಗಿಗಳ ಗೋಳು!

ಜಿಮ್ಸ್‌ನಲ್ಲಿ ಬಿಲ್ ಪಾವತಿಗೆ ಗಂಟೆಗಟ್ಟಲೇ ಕಾಯುವುದು ಅನಿವಾರ್ಯ: ಬೇಡಿಕೆಗೆ ತಕ್ಕಂತಿಲ್ಲ ಹೆಚ್ಚುವರಿ ಕೌಂಟರ್

ಮನೋಜ ಕುಮಾರ್ ಗುದ್ದಿ
Published 19 ಅಕ್ಟೋಬರ್ 2024, 6:52 IST
Last Updated 19 ಅಕ್ಟೋಬರ್ 2024, 6:52 IST
ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ಬಿಲ್ಲಿಂಗ್‌ ಕೌಂಟರ್‌ ಬಳಿ ನೂಕು ನುಗ್ಗಲಿನಲ್ಲೇ ಚೀಟಿ ಪಡೆಯಲು ನಿಂತ ರೋಗಿಗಳ ಸಂಬಂಧಿಕರು
ಪ್ರಜಾವಾಣಿ ಚಿತ್ರ
ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ಬಿಲ್ಲಿಂಗ್‌ ಕೌಂಟರ್‌ ಬಳಿ ನೂಕು ನುಗ್ಗಲಿನಲ್ಲೇ ಚೀಟಿ ಪಡೆಯಲು ನಿಂತ ರೋಗಿಗಳ ಸಂಬಂಧಿಕರು ಪ್ರಜಾವಾಣಿ ಚಿತ್ರ   

ಕಲಬುರಗಿ: ಜಿಲ್ಲೆಯ ಬಡ ರೋಗಿಗಳ ಪಾಲಿನ 'ಅನಿವಾರ್ಯ' ಆಸರೆಯಾಗಿರುವ ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌)ಯಲ್ಲಿ ರೋಗಿಗಳಿಗೆ ಅಗತ್ಯವಿರುವ ವೈದ್ಯಕೀಯ ತಪಾಸಣೆಗಾಗಿ ಬಿಲ್ ಪಾವತಿಸಲು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇದ್ದು, ಇದರಿಂದ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಚಿಕಿತ್ಸೆಯ ಬದಲು ಸರತಿಯಲ್ಲಿ ನಿಲ್ಲುವುದೇ ಒಂದು ಕೆಲಸವಾಗಿದೆ.

ಗಂಟೆಗಟ್ಟಲೇ ಕಾಯುತ್ತಾ ನಿಲ್ಲಬೇಕಿರುವುದರಿಂದ ದೂರದ ಊರಿನಿಂದ ಬಂದ ರೋಗಿಗಳ ಸಂಬಂಧಿಕರು ಜಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹೆಚ್ಚುವರಿ ಕೌಂಟರ್‌ಗಳನ್ನು ಸ್ಥಾಪಿಸುವ ಬೇಡಿಕೆಯನ್ನು ಇಡುತ್ತಿದ್ದಾರೆ.

ತಾಲ್ಲೂಕು ಕೇಂದ್ರಗಳಲ್ಲಿ ಹೆಚ್ಚಿನ ವೈದ್ಯಕೀಯ ಸೇವೆಗಳು ಇಲ್ಲದೇ ಇರುವುದರಿಂದ ಜಿಲ್ಲೆಯ ಜೇವರ್ಗಿ, ಅಫಜಲಪುರ, ಚಿಂಚೋಳಿ, ಆಳಂದ, ಸೇಡಂ ಅಷ್ಟೇ ಅಲ್ಲದೇ ನೆರೆಯ ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ಗುರುಮಠಕಲ್, ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ ತಾಲ್ಲೂಕಿನ ಜನರೂ ವೈದ್ಯಕೀಯ ಚಿಕಿತ್ಸೆಗಾಗಿ ಜಿಮ್ಸ್‌ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ, ಜಿಮ್ಸ್‌ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಅಲ್ಲದೇ, ಅಪಘಾತ, ಗಂಭೀರ ಸ್ವರೂಪದ ಕಾಯಿಲೆಗಳು, ಹೆರಿಗೆ, ಡಯಾಲಿಸಿಸ್, ಮೂಳೆ ಮುರಿತ, ಸಂಧಿವಾತ, ಯಕೃತ್ತಿನ ತೊಂದರೆ ಸೇರಿದಂತೆ ವಿವಿಧ ಕಾಯಿಲೆಗಳಿಗಾಗಿ ಜನರು ಜಿಮ್ಸ್‌ಗೇ ಬರುತ್ತಾರೆ. ಜನದಟ್ಟಣಿ ನಿಭಾಯಿಸಲು ಬೇಕಾದ ಮಾನವ ಸಂಪನ್ಮೂಲ ಜಿಮ್ಸ್‌ ಬಳಿ ಇಲ್ಲದೇ ಇರುವುದರಿಂದ ರೋಗಿಗಳು ಹಾಗೂ ಅವರ ಸಂಬಂಧಿಗಳು ವಿವಿಧ ಬಗೆಯ ತಪಾಸಣೆಗಾಗಿ ಬಿಲ್ ಕಟ್ಟಲು ಕೌಂಟರ್ ಬಳಿ ನಿಲ್ಲಬೇಕಿದೆ.

ADVERTISEMENT

ಸುಮಾರು ಹೊತ್ತು ಕಾಯುವ ‘ಶಿಕ್ಷೆ’ಯಿಂದಾಗಿ ಕೆಲವರು ನಿಂತಲ್ಲಿಯೇ ಬಸವಳಿದು ಕುಸಿದ ಉದಾಹರಣೆಗಳೂ ಇವೆ. 

‘ಪ್ರಜಾವಾಣಿ’ ಶುಕ್ರವಾರ ಮಧ್ಯಾಹ್ನ ಜಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಐಪಿಡಿ (ಒಳ ರೋಗಿಗಳ ವಿಭಾಗ)ಯ ಬಿಲ್ಲಿಂಗ್ ಕೌಂಟರ್‌ನಲ್ಲಿನ ಎರಡು ಕೌಂಟರ್‌ಗಳ ಬಳಿ ನೂರಾರು ಜನರು ಹಣ ಪಾವತಿಗೆ ಕಾದು ನಿಂತಿದ್ದರು. ವೃದ್ಧರು, ಅಂಗವಿಕಲರಿಗಾಗಿ ಇದ್ದ ಎರಡು ಕೌಂಟರ್‌ಗಳು ತೆರೆದಿರಲಿಲ್ಲ.

‘ನಮ್ಮ ಸಂಬಂಧಿಯೊಬ್ಬರನ್ನು ಐಸಿಯುನಲ್ಲಿ ದಾಖಲಿಸಿದ್ದೇವೆ. ಹಲವು ತಪಾಸಣೆಗಾಗಿ ಹಣ ಕಟ್ಟಬೇಕು. ಒಂದರ ಬಿಲ್ ಕಟ್ಟಿ ಹೋಗುವುದರಲ್ಲಿ ಮತ್ತೊಂದು ಬಿಲ್ ಕಟ್ಟುವಂತೆ ಹೇಳುತ್ತಾರೆ. ಆಗ ಮತ್ತೆ ಇದೇ ಸರತಿಯಲ್ಲಿ ನಿಲ್ಲಬೇಕು. ಐಸಿಯು ರೋಗಿಗಳಿಗೇ ಪ್ರತ್ಯೇಕ ಕೌಂಟರ್ ತೆರೆಯಬೇಕು’ ಎಂದು ರೋಗಿಯ ಸಂಬಂಧಿ ಶಿವಲಿಂಗ ಎಂಬುವವರು ಒತ್ತಾಯಿಸಿದರು.

‘ಹೆಚ್ಚುವರಿ ಕೌಂಟರ್‌ಗೆ ಅನುಮತಿ ಸಿಕ್ಕಿಲ್ಲ’

ದಿನಾಲೂ ಜಿಮ್ಸ್‌ ಆಸ್ಪತ್ರೆಗೆ ಸುಮಾರು 1600ರಿಂದ 1800 ರೋಗಿಗಳು ಭೇಟಿ ಕೊಡುತ್ತಾರೆ. ಒಳರೋಗಗಿಳಿಗೆ ಬೆಡ್ ಹೊಂದಿಸುವುದೇ ಕಷ್ಟವಾಗಿದ್ದು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಔಷಧಿ ಕೊಟ್ಟು ಕಳಿಸುತ್ತೇವೆ. ಹೊರರೋಗಿ ಹಾಗೂ ಒಳರೋಗಿ ವಿಭಾಗಗಳಿಗೆ 10 ಕೌಂಟರ್‌ಗಳನ್ನು ತೆರೆಯಲಾಗಿದೆ. ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಕೌಂಟರ್‌ಗಳಿಗೆ ಪ್ರಸ್ತಾವ ಸಲ್ಲಿಸಿದ್ದೆವು. ಆದರೆ ಆರ್ಥಿಕ ಇಲಾಖೆ ಪ್ರಸ್ತಾವವನ್ನು ಒಪ್ಪಿಲ್ಲ ಎಂದು ಜಿಮ್ಸ್ ನಿರ್ದೇಶಕ ಡಾ. ಉಮೇಶ್ ಎಸ್.ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಮ್ಸ್‌ನ ಮುಖ್ಯ ದ್ವಾರದ ಬಲಬದಿಯಲ್ಲಿ ಈಗಾಗಲೇ ಆರು ಕೌಂಟರ್‌ಗಳಿದ್ದು ಮತ್ತೊಂದು ದ್ವಾರದಲ್ಲಿ ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ನಾಲ್ಕು ಕೌಂಟರ್ ಆರಂಭಿಸಿದ್ದು ರೋಗಿಗಳಿಗೆ ನಿಂತುಕೊಳ್ಳಲು ನೆರಳು ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗೆ ಸಿಬ್ಬಂದಿ ಕೊರತೆ ಇರುವುದರಿಂದ ಹೆಚ್ಚುವರಿ ಕೌಂಟರ್‌ಗೆ ಸಿಬ್ಬಂದಿ ನಿಯೋಜನೆ ಮಾಡುವುದು ಸಾಧ್ಯವಾಗುತ್ತಿಲ್ಲ’ ಎಂದರು.

ಜೇವರ್ಗಿಯಿಂದ ಬಂದಿದ್ದೇನೆ. ಒಂದು ತಾಸಿನಿಂದ ಕಾಯುತ್ತಾ ಇದ್ದರೂ ಇನ್ನೂ ಪಾಳಿ ಬಂದಿಲ್ಲ. ರೋಗಿಯ ಬಳಿಯೂ ಯಾರೂ ಇಲ್ಲ. ಇಡೀ ದಿನ ಕಾಯುವುದರಲ್ಲೇ ಟೈಮ್ ಹೋದರೆ ಹೇಗೆ?
ಶಾಂತಮ್ಮ, ಜೇವರ್ಗಿ ನಿವಾಸಿ
ನಾನೇ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ವಯಸ್ಸಾದವರಿಗೆ ಬೇರೆ ಕೌಂಟರ್ ಮಾಡಬೇಕಿತ್ತು. ಆಸ್ಪತ್ರೆಗೆ ಎಷ್ಟು ಜನ ಬರುತ್ತಾರೆ ಎಂದು ಗಮನಿಸಿ ಅದಕ್ಕೆ ತಕ್ಕಂತೆ ಕೌಂಟರ್ ತೆರೆಯಲು ಏನು ಕಷ್ಟ?
ಶಿವಲಿಂಗಪ್ಪ ಮಹಾಗಾಂವ್ಕರ್, ಕಲಬುರಗಿ
ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ಬಿಲ್ಲಿಂಗ್‌ ಕೌಂಟರ್‌ ಬಳಿ ನೂಕು ನುಗ್ಗಲಿನಲ್ಲೇ ಚೀಟಿ ಪಡೆಯಲು ನಿಂತ ರೋಗಿಗಳ ಸಂಬಂಧಿಕರು ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.