ADVERTISEMENT

ಕಲಬುರ್ಗಿ: ಹಂದಿ ಸಾಕಣೆ ಮಾಡಿದವರ ವಿರುದ್ಧ ಪ್ರಕರಣಕ್ಕೆ ಸೂಚನೆ

ಜಿಮ್ಸ್‌ ಆವರಣದಲ್ಲಿ ಹಲವು ದಿನಗಳಿಂದ ಮೊಕ್ಕಾಂ ಹೂಡಿದ್ದ 1157 ಹಂದಿಗಳು!

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 16:27 IST
Last Updated 20 ಜುಲೈ 2020, 16:27 IST
ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಕಸವನ್ನು ಹೆಕ್ಕಿ ತಿನ್ನುತ್ತಿರುವ ಹಂದಿಗಳು  –ಸಂಗ್ರಹ ಚಿತ್ರ
ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಕಸವನ್ನು ಹೆಕ್ಕಿ ತಿನ್ನುತ್ತಿರುವ ಹಂದಿಗಳು  –ಸಂಗ್ರಹ ಚಿತ್ರ   

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ (ಜಿಮ್ಸ್‌)ಯಲ್ಲಿ ಹಂದಿಗಳು ವಾಸ್ತವ್ಯ ಹೂಡಿದ್ದ ಸಂಗತಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಎಚ್ಚೆತ್ತುಕೊಂಡಿರುವ ಕಲಬುರ್ಗಿ ಮಹಾನಗರ ಪಾಲಿಕೆ, ಹಂದಿಗಳನ್ನು ಜಿಮ್ಸ್‌ ಶೆಡ್‌ಗಳಲ್ಲಿ ತಂದು ಸಾಕಣೆ ಮಾಡಿದ್ದ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಮುಂದಾಗಿದೆ.

ಒಟ್ಟಾರೆಯಾಗಿ 1157 ಹಂದಿಗಳನ್ನು ಜಿಮ್ಸ್‌ ಆವರಣದಲ್ಲಿ ಮಾಲೀಕರು ಸಾಕಾಣಿಗೆ ಮಾಡಿದ್ದರು. ಅವುಗಳ ಪೈಕಿ ಹಲವು ಹಂದಿಗಳು ಸ್ಥಳದಿಂದ ಪರಾರಿಯಾಗಿದ್ದು, ಸುಮಾರು 650 ಹಂದಿಗಳನ್ನು ಶನಿವಾರ ಹಾಗೂ ಭಾನುವಾರ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿದೆ. ಅವುಗಳನ್ನು ನಗರದಿಂದ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ‘ಪ್ರಜಾವಾಣಿ’ಗೆ ತಿಳಿಸಿದರು.

ಎಫ್‌ಐಆರ್‌: ಜಿಮ್ಸ್‌ ಕಟ್ಟಡ ನಿರ್ಮಾಣಕ್ಕಾಗಿ ನಿರ್ಮಿಸಿದ್ದ ಶೆಡ್‌ಗಳಲ್ಲಿ ಅಕ್ರಮವಾಗಿ ಹಂದಿಗಳನ್ನು ಸಾಕಣೆ ಮಾಡಿದ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಜಿಮ್ಸ್ ನಿರ್ದೇಶಕರಿಗೆ ತಿಳಿಸಿದ್ದೇವೆ. ಮೊದಲ ಹಂತದಲ್ಲಿ ಪಾಲಿಕೆಯಿಂದ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗುತ್ತದೆ. ಅದಕ್ಕೆ ಸಮರ್ಪಕ ಉತ್ತರ ಬಾರದಿದ್ದಲ್ಲಿ ಪಾಲಿಕೆ ವತಿಯಿಂದಲೇ ಎಫ್‌ಐಆರ್‌ ದಾಖಲಿಸುವಂತೆ ಪಾಲಿಕೆಯ ಪಶುಸಂಗೋಪನಾ ವಿಭಾಗದ ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.