ADVERTISEMENT

‘ಪ್ರಾಣಹಾನಿ ತಪ್ಪಿಸಲು ಆದ್ಯತೆ ನೀಡಿ’

ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ: ಶಾಸಕ ಮತ್ತಿಮಡು ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 4:44 IST
Last Updated 27 ಜೂನ್ 2024, 4:44 IST
ಕಲಬುರಗಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು
ಕಲಬುರಗಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು   

ಕಲಬುರಗಿ/ ಕಮಲಾಪುರ: ಈ ವರ್ಷ ಅತಿವೃಷ್ಟಿ ನಿರೀಕ್ಷೆ ಇದ್ದು, ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಜನ–ಜಾನುವಾರುಗಳ ಪ್ರಾಣ ಹಾನಿ ತಪ್ಪಿಸಲು ಆದ್ಯತೆ ನೀಡಬೇಕು ಎಂದು ಶಾಸಕ ಬಸವರಾಜ ಮತ್ತಿಮಡು ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಕಲಬುರಗಿ ಗ್ರಾಮೀಣ ವಿಧಾನಸಭೆಯ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ನದಿ, ಜಲಾಶಯ ಪಕ್ಕದಲ್ಲಿರುವ ಗ್ರಾಮಗಳನ್ನು ಗುರುತಿಸಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಪ್ರವಾಹ ಬಂದಾಗಲೇ ಎಚ್ಚೆತ್ತುಕೊಳ್ಳದೇ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಪೊಲೀಸ್‌, ಜೆಸ್ಕಾಂ ಮತ್ತು ಅಗ್ನಿಶಾಮಕ ಇಲಾಖೆಯವರು ರಕ್ಷಣಾ ಕಾರ್ಯಾಚರಣೆಗೆ ಸಿದ್ಧರಾಗಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಆಳಂದ ತಾಲ್ಲೂಕಿನ ಆಳಂದ ಮತಕ್ಷೇತ್ರದಲ್ಲಿ ಶೇ 80 ರಿಂದ 85 ರಷ್ಟು ರೈತರಿಗೆ ಬೆಳೆ ವಿಮೆ ಒದಗಿಸಲಾಗಿದೆ. ಆಳಂದ ತಾಲ್ಲೂಕಿನಲ್ಲಿದ್ದು ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಒಳಪಡುವ ಗ್ರಾಮ ಪಂಚಾಯಿತಿಗಳಲ್ಲಿ ಶೇ 20ರಷ್ಟು ರೈತರಿಗೆ ಬೆಳೆ ವಿಮೆ ಒದಗಿಸಿದ್ದು, ತಾರತಮ್ಯ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ‘ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

‘ಕಮಲಾನಗರ, ಕೆರಿ ಅಂಬಲಗಾ ಗ್ರಾಮ ಪಂಚಾಯಿತಿಯಲ್ಲಿ ಒಬ್ಬ ರೈತರಿಗೂ ಬೆಳೆ ವಿಮೆ ಜಮೆಯಾಗಿಲ್ಲ. ಕಮಲಾಪುರ ತಾಲ್ಲೂಕು ಸೇರಿದಂತೆ ಮತ್ತಿತರ ಕಡೆಗಳಲ್ಲೂ ₹ 2 ಸಾವಿರ, ₹ 3 ಸಾವಿರ ಜಮೆ ಮಾಡಿ ಕೈ ತೊಳೆದುಕೊಂಡಿದ್ದಾರೆ. ವಿಮೆ ಕಂಪೆನಿ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು’ ಎಂದರು.

ಗಂಡೋರಿ, ಬೆಣ್ಣೆತೊರಾ, ಜಲಾಶಯ, ಕೆರೆ, ಬ್ರಿಜ್‌ ಕಂ ಬ್ಯಾರೇಜ್‌ಗಳನ್ನು ಸೂಕ್ತ ನಿರ್ವಹಣೆ ಮಾಡುವ ಮೂಲಕ ಪ್ರವಾಹ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

ಶಿಥಿಲಗೊಂಡ, ಶಾಲೆ ಅಂಗನವಾಡಿಗಳನ್ನು ಗುರುತಿಸಿ ಮಕ್ಕಳನ್ನು ಬೇರೆಡೆ ಸ್ಥಳಾಂತರಿಸಿ, ಕಟ್ಟಡಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.

ವಿವಿಧ ಅಧಿಕಾರಿಗಳು ತಮ್ಮ ಇಲಾಖೆ ಕಾರ್ಯಗಳ ಪ್ರಗತಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕಲಬುರಗಿ ತಹಶೀಲ್ದಾರ್ ನಾಗಮ್ಮ, ಆಳಂದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಕಮಲಾಪುರ ತಹಶೀಲ್ದಾರ್ ಮೊಹಮ್ಮದ್ ಮೊಹಸೀನ್‌, ಶಹಾಬಾದ್‌ ತಹಶೀಲ್ದಾರ್ ಜಗದೀಶ್ ಚವ್ಹಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.