ADVERTISEMENT

ಕಲಬುರಗಿ: ಒಂದೇ ರಾತ್ರಿ 6 ಮನೆಗಳಿಗೆ ಕನ್ನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 4:10 IST
Last Updated 21 ನವೆಂಬರ್ 2024, 4:10 IST
ಬೋಧನಾ ಗ್ರಾಮದ ಮನೆಯೊಂದರ ಅಲ್ಮೇರಾ ಮುರಿದ ಕಳ್ಳರು
ಬೋಧನಾ ಗ್ರಾಮದ ಮನೆಯೊಂದರ ಅಲ್ಮೇರಾ ಮುರಿದ ಕಳ್ಳರು   

ಕಲಬುರಗಿ: ಆಳಂದ ತಾಲ್ಲೂಕಿನ ಬೋಧನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ಆರು ಮನೆಗಳಿಗೆ ಕನ್ನ ಹಾಕಿದ ಕಳ್ಳರು, ಮನೆಯಲ್ಲಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಒಂದು ಮನೆಯಲ್ಲಿ ಚಿನ್ನಾಭರಣಗಳನ್ನು ಕದ್ದಿದ್ದಾರೆ.

ಗ್ರಾಮದ ಬಸವರಾಜ ದೂಳಪ್ಪ ಬಿರಾದಾರ ಅವರ ಮನೆಯ ಅಲ್ಮೇರಾದಲ್ಲಿ ಇರಿಸಿದ್ದ ₹4.87 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿವೆ. ಕುಟುಂಬದ ಸದಸ್ಯರು ಮನೆಗೆ ಬೀಗ ಹಾಕಿ ಮಹಾರಾಷ್ಟ್ರದಲ್ಲಿನ ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರಿಗೆ ವಲಸೆ ಹೋದ ಐದು ಮಂದಿಯ ಮನೆಗಳ ಬೀಗ ಸಹ ಮುರಿಯಲಾಗಿದೆ. ಆದರೆ, ಯಾವುದೇ ಸ್ವತ್ತುಗಳು ಕಳ್ಳವಾಗಿಲ್ಲ. ಮನೆಗಳಲ್ಲಿನ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಎಸೆದಿದ್ದಾರೆ ಎಂದರು.

ADVERTISEMENT

ಘಟನಾ ಸ್ಥಳಕ್ಕೆ ಡಿಎಸ್‌ಪಿ ಗೋಪಿ ಬಿ.ಆರ್, ಸಿಪಿಐ ಪ್ರಕಾಶ ಯಾತನೂರು, ಪಿಎಸ್‌ಐ ಸಿದ್ದರಾಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹4.42 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಬಸ್‌ನಲ್ಲಿ ಮಹಿಳೆಯ ಗಮನ ಬೇರೆಡೆ ಸೆಳೆದು, ಆಕೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳು ಕದ್ದು ಪರಾರಿಯಾದ ಪ್ರಕರಣ ಕಲಬುರಗಿಯ ಎಂ.ಬಿ. ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಕಾಳಗಿ ಪಟ್ಟಣದ ನಿವಾಸಿ ಲಕ್ಷ್ಮಿ ಸುಭಾಷ್ ಗುತ್ತೇದಾರ ಚಿನ್ನಾಭರಣ ಕಳೆದುಕೊಂಡ ಸಂತ್ರಸ್ತೆ. ನವೆಂಬರ್ 18ರ ಮಧ್ಯಾಹ್ನ ಮಗನೊಂದಿಗೆ ಕಲಬುರಗಿ ನಗರದ ತವರು ಮನೆಯಿಂದ ಕಾಳಗಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ₹4.42 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದರು. ಬಸ್‌ನಲ್ಲಿ ಮಾರ್ಗದ ಮಧ್ಯದಲ್ಲಿ ಲಕ್ಷ್ಮಿ ಅವರ ಗಮನ ಬೇರೆಡೆ ಸೆಳೆದ ಕಳ್ಳರು, ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.