ADVERTISEMENT

ಚಿತ್ತಾಪುರ | ಸಾವಿರ ಎಕರೆ ಸರ್ಕಾರಿ ಜಮೀನು ಕಬಳಿಕೆ?

ಜಮೀನು ಮಂಜೂರಾತಿ ಕಡತ ಚಿತ್ತಾಪುರ ತಹಶೀಲ್ದಾರ್ ಕಚೇರಿಯಲ್ಲಿಲ್ಲ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 4:42 IST
Last Updated 14 ಆಗಸ್ಟ್ 2024, 4:42 IST
<div class="paragraphs"><p>ಜಮೀನು</p></div>

ಜಮೀನು

   

(ಸಾಂದರ್ಭಿಕ ಚಿತ್ರ)

ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮರಗೋಳ, ಯರಗಲ್, ಮೊಗಲಾ, ಇಟಗಾ ಹಾಗೂ ದಿಗ್ಗಾಂವ ಗ್ರಾಮಗಳಲ್ಲಿ ಸರ್ಕಾರಿ ಸರ್ವೆ ನಂಬರಿನಲ್ಲಿದ್ದ ಒಟ್ಟು 1,161 ಎಕರೆ 26 ಗುಂಟೆ ಸರ್ಕಾರಿ ಜಮೀನು ಮಂಜೂರಾತಿ ಆದೇಶವಿಲ್ಲದೆ ನೂರಾರು ಜನರು ಪಹಣಿ ಪತ್ರಿಕೆಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ಮರಗೋಳ ಗ್ರಾಮದಲ್ಲಿನ ಸರ್ಕಾರಿ ಜಮೀನಿರುವ ಸರ್ವೆ ನಂ.183ರಲ್ಲಿ ಒಟ್ಟು 295 ಎಕರೆ 34 ಗುಂಟೆ, ಯರಗಲ್ ಗ್ರಾಮದಲ್ಲಿನ ಸರ್ವೆ ನಂ.309ರಲ್ಲಿ ಒಟ್ಟು 84 ಎಕರೆ 5 ಗುಂಟೆ, ಮೊಗಲಾ ಗ್ರಾಮದಲ್ಲಿನ ಸರ್ವೆ ನಂ.198ರಲ್ಲಿ ಒಟ್ಟು 195 ಎಕರೆ 15 ಗುಂಟೆ, ಇಟಗಾ ಗ್ರಾಮದಲ್ಲಿ ಸರ್ವೆ ನಂ.174ರಲ್ಲಿ 295 ಎಕರೆ 34 ಗುಂಟೆ, ದಿಗ್ಗಾಂವ ಗ್ರಾಮದಲ್ಲಿ ಸರ್ವೆ ನಂ. 566ರಲ್ಲಿ 35 ಎಕರೆ 31 ಗುಂಟೆ ಮತ್ತು ಸರ್ವೆ ನಂ. 101ರಲ್ಲಿ 255 ಎಕರೆ 27 ಗುಂಟೆ ಜಮೀನು, ಹೀಗೆ ಐದು ಗ್ರಾಮಗಳಲ್ಲಿ ಒಟ್ಟು 1,161 ಎಕರೆ 26 ಗುಂಟೆ ಸರ್ಕಾರಿ ಜಮೀನು ಇತ್ತು ಎಂಬುದು ದಾಖಲೆಗಳಿಂದ ಪತ್ತೆಯಾಗಿದೆ.

ಸರ್ಕಾರಿ ಜಮೀನುಗಳ ಮಂಜೂರಾತಿ ಪಡೆದವರ ಪಹಣಿ ಪತ್ರಿಕೆಗಳ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ತಹಶೀಲ್ದಾರ್‌ ಕಚೇರಿಯು ಕಂದಾಯ ದಾಖಲೆಗಳನ್ನು ಪರಿಶೀಲಿಸಿದೆ. 1954–55ರಿಂದ 2005–06ರವರೆಗಿನ ಅವಧಿಯಲ್ಲಿನ ಸರ್ಕಾರಿ ಜಮೀನುಗಳ ಪಹಣಿ ಪತ್ರಿಕೆಗಳಲ್ಲಿನ ಕಬ್ಜಾದಾರರ ಹೆಸರು ನಮೂದಿಸುವ ಕಾಲಂ 9 ಅನ್ನು ಪರಿಶೀಲಿಸಿದಾಗ, ಮರಗೋಳ, ಯರಗಲ್, ಮೊಗಲಾ, ಇಟಗಾ ಗ್ರಾಮಗಳ ಪಹಣಿ ಪತ್ರಿಕೆಯಲ್ಲಿ ‘ಸರ್ಕಾರಿ ಗಾಯರಾಣ’ ಹಾಗೂ ದಿಗ್ಗಾಂವ ಗ್ರಾಮದ ಪಹಣಿ ಪತ್ರಿಕೆಯಲ್ಲಿ ‘ಖಾರಿಜ್ ಖಾತಾ’ ಎಂದು ನಮೂದಾಗಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ.

2005–06ರ ನಂತರ ಐದು ಗ್ರಾಮಗಳಲ್ಲಿನ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಭೂಮಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ಜಮೀನು ಮಂಜೂರಾತಿ ಮಾಡಿರುವ ಕಡತ ಲಭ್ಯವಿಲ್ಲ. ಹೀಗಾಗಿ ಸರ್ಕಾರಿ ಜಮೀನಿನ ಪಹಣಿ ಪತ್ರಿಕೆಯಲ್ಲಿ ಹೆಸರು ಇರುವ ಜನರಿಗೆ ನೋಟಿಸ್‌ ಜಾರಿ ಮಾಡಿರುವ ತಹಶೀಲ್ದಾರ್ ಅವರು, ಜಮೀನಿನ ಹಕ್ಕು ಬಾಧ್ಯತೆ ಹೊಂದಿರುವ ಬಗ್ಗೆ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದ್ದಾರೆ. ಪಹಣಿಯಲ್ಲಿ ಹೆಸರು ನಮೂದಿಸಿಕೊಂಡಿರುವವರಿಗೆ ನೀಡಿರುವ ನೋಟಿಸ್‌ನ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ವಿಚಾರಣೆ ನಿಗದಿಪಡಿಸಿದ ದಿನದಂದು ಬಂದು ದಾಖಲೆ ಹಾಜರುಪಡಿಸಬೇಕು. ಒಂದು ವೇಳೆ ವಿಚಾರಣೆಗೆ ಹಾಜರಾಗದೆ ದಾಖಲೆ ಸಲ್ಲಿಸದಿದ್ದರೆ ಪ್ರಸ್ತಾಪಿತ ಜಮೀನಿನಲ್ಲಿ ನಿಮ್ಮ ಹಕ್ಕು ಏನೂ ಇರುವುದಿಲ್ಲ ಎಂದು ಭಾವಿಸಿ ಜಮೀನು ಪೂರ್ತಿಯಾಗಿ ಸರ್ಕಾರಕ್ಕೆ ಸೇರಿಸಲಾಗುತ್ತದೆ’ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ವಿಚಾರಣೆಗೆ ಕೆಲವರು ಮಾತ್ರ ಹಾಜರಾಗಿದ್ದು, ಅಧಿಕೃತವಾಗಿ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. ಕೆಲವರು ಸಮಯ ನೀಡುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಮೆಂಟ್ ಕಂಪನಿಗೆ ಮಾರಾಟ

ಚಿತ್ತಾಪುರ ತಾಲ್ಲೂಕಿನ ಇಟಗಾ ಗ್ರಾಮದಲ್ಲಿನ ಸರ್ಕಾರಿ ಜಮೀನು ಇರುವ ಸರ್ವೆ ನಂ.174ರಲ್ಲಿನ ಜಮೀನು ಪಹಣಿ ಪತ್ರಿಕೆಯಲ್ಲಿ ಹೆಸರು ಇರುವ ಆರು ಜನರು ಒಟ್ಟು 11 ಎಕರೆ 15 ಗುಂಟೆ ಜಮೀನನ್ನು ಓರಿಯೆಂಟ್ ಸಿಮೆಂಟ್ ಕಂಪನಿಗೆ ಮಾರಾಟ ಮಾಡಿರುವುದು ಸರ್ಕಾರಿ ಜಮೀನಿನ ದಾಖಲೆ ಪರಿಶೀಲನೆ ವೇಳೆ ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.